Karnataka HC and Justice V Srishananda 
ಸುದ್ದಿಗಳು

ಹಿಂದಿನ ಘಟನೆ ಮುಗಿದ ಅಧ್ಯಾಯ; ಅದು ಹಿನ್ನಡೆ ಎಂದು ಭಾವಿಸಿಲ್ಲ: ನ್ಯಾ. ಶ್ರೀಶಾನಂದ

“ನಿರ್ದಿಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿದು ಬರುತ್ತಿದ್ದ ಜ್ಞಾನ ಕಡಿಮೆಯಾಗಲಿದೆ. ನ್ಯಾಯಾಲಯದಲ್ಲಿ ಹೇಳಿದ್ದನ್ನು ಜನರು ತಿರುಚಿ ಹೇಳಿದಾಗ, ಅದಕ್ಕೆ ನಾವು ಅವಕಾಶವನ್ನೇಕೆ ನೀಡಬೇಕು?” ಎಂದ ನ್ಯಾ. ಶ್ರೀಶಾನಂದ.

Bar & Bench

ನ್ಯಾಯಾಲಯದ ಕಲಾಪದ ವೇಳೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುವ ಮೂಲಕ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದ್ದ ಹಾಗೂ ಸುಪ್ರೀಂ ಕೋರ್ಟ್‌ನ ಅನಪೇಕ್ಷಿತ ಗಮನವನ್ನು ತಮ್ಮೆಡೆಗೆ ಸೆಳೆದುಕೊಂಡಿದ್ದ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರು “ಹಿಂದಿನದೆಲ್ಲವೂ ಮುಗಿದ ಅಧ್ಯಾಯ. ಅದನ್ನು ನಾನು ಹಿನ್ನಡೆ ಎಂದು ಪರಿಗಣಿಸಿಲ್ಲ” ಎಂದು ಮೌಖಿಕವಾಗಿ ಹೇಳಿದರು.

ರಜಾಕಾಲೀನ ಏಕಸದಸ್ಯ ಪೀಠದ ನೇತೃತ್ವ ವಹಿಸಿದ್ದ ನ್ಯಾಯಮೂರ್ತಿ ಶ್ರೀಶಾನಂದ ಅವರನ್ನು ವಕೀಲರೊಬ್ಬರು ವಿಚಾರಣೆಯ ಕೊನೆಯಲ್ಲಿ “ಹಿಂದಿನ ಘಟನೆಯನ್ನು ನ್ಯಾಯಮೂರ್ತಿಗಳು ಹಿನ್ನಡೆ ಎಂದು ಭಾವಿಸಬಾರದು” ಎಂದರು.

ಆಗ ನ್ಯಾಯಮೂರ್ತಿಗಳು “ಖಂಡಿತಾ ಇಲ್ಲ. ಅದೆಲ್ಲವೂ ಮುಗಿದ ಅಧ್ಯಯ. ಯಾವುದೇ ಹಿನ್ನಡೆಯಲಾಗಿಲ್ಲ. ಮುಕ್ತ ನ್ಯಾಯಾಲಯದಲ್ಲಿ ಕೆಲವು ವಿಚಾರಗಳನ್ನು ಸ್ಪಷ್ಟಪಪಡಿಸುವ ಉದ್ದೇಶವನ್ನು ನಾನು ನಿಲ್ಲಿಸುತ್ತೇನೆ. ನಾನೇಕೆ ಅದನ್ನು ಮಾಡಬೇಕು. ನಾನು ಇಲ್ಲಿ ನ್ಯಾಯಮೂರ್ತಿಯ ಕೆಲಸವನ್ನು ನಿಭಾಯಿಸಬೇಕು. ಅದನ್ನು ಮಾಡುತ್ತೇನೆ. ನಮ್ಮ ಕೆಲವು ಸ್ನೇಹಿತರಿಗೆ ಕಾನೂನು ತತ್ವದ ಶಿಕ್ಷಣ ಅಗತ್ಯವೆನಿಸಿದರೆ ಅವರು ಉಪನ್ಯಾಸ ಕಾರ್ಯಕ್ರಮ ಆಯೋಜಿಸಬಹುದು. ನಾನು ಅಲ್ಲಿಗೆ ತೆರಳಿ ಮಾತನಾಡುತ್ತೇನೆ” ಎಂದರು.

ಆಗ ವಕೀಲರೊಬ್ಬರು “ನ್ಯಾಯಾಧೀಶರ ಜ್ಞಾನ ವ್ಯರ್ಥವಾಗಬಾರದು. ನೀವು ಪ್ರಧಾನ ಜಿಲ್ಲಾ ನ್ಯಾಯಾಧೀಶರಾಗಿದ್ದಾಗ ನಿಮ್ಮನ್ನು ನೋಡಿದ್ದೇವೆ. ಆ ಸಂದರ್ಭದಲ್ಲಿ ಇಂಟರ್ನಿಯಾಗಿ ನಿಮ್ಮ ಮಾತುಗಳನ್ನು ಕೇಳಿದ್ದೇವೆ. ನೀವು ಆಗ ಏನು ಹೇಳಿದ್ದೀರೋ ಅದು ನಮಗೆ ಈಗ ಸಹಾಯಕ್ಕೆ ಬರುತ್ತಿದೆ” ಎಂದರು.

ಆಗ ಪೀಠವು “ಹೌದು. ನಿರ್ದಿಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿದು ಬರುತ್ತಿದ್ದ ಜ್ಞಾನ ಕಡಿಮೆಯಾಗಲಿದೆ. ನ್ಯಾಯಾಲಯದಲ್ಲಿ ಹೇಳಿದ್ದನ್ನು ಜನರು ತಿರುಚಿ ಹೇಳಿದಾಗ, ಅದಕ್ಕೆ ನಾವು ಅವಕಾಶವನ್ನೇಕೆ ನೀಡಬೇಕು? ಪ್ರಕರಣಕ್ಕೆ ಏನು ಬೇಕಿದೆ ಅದನ್ನು ಖಂಡಿತಾ ನ್ಯಾಯಾಲಯ ನಿರ್ಧರಿಸಲಿದೆ. ಅದನ್ನು ನಿಲ್ಲಿಸುವುದಿಲ್ಲ. ಜ್ಞಾನ ಹಂಚಿಕೊಳ್ಳಲು ಇತರೆ ವೇದಿಕೆಗಳಿವೆ. ಅಲ್ಲಿ ಅದನ್ನು ಹಂಚಿಕೊಳ್ಳಬಹುದು” ಎಂದರು.

ಆಗ ವಕೀಲರು “ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಜ್ಞಾನ ಹಂಚಿಕೊಳ್ಳುವುದು ತುಂಬಾ ಮುಖ್ಯ” ಎಂದು ಚರ್ಚೆ ವಿಸ್ತರಿಸಿದರು.

ಈ ಹಂತದಲ್ಲಿ ನ್ಯಾಯಮೂರ್ತಿ ಶ್ರೀಶಾನಂದ ಅವರು “ಸರಿ, ಆದರೆ ಅದು ಜನರಿಗೆ ಬೇಕಿಲ್ಲವಲ್ಲ. ಅದು ಅವರಿಗೇ ಬೇಕಾಗದೆ ಇರುವಾಗ ನಾನೇಕೆ ಮಾಡಬೇಕು. ಮಾನಸಿಕ ನೆಮ್ಮದಿಯೂ ಬೇಕಲ್ಲವೇ? ನ್ಯಾಯಮೂರ್ತಿಯಾಗಿ ನಿರ್ದಿಷ್ಟ ವಿಧಾನದಲ್ಲಿ ನಾನು ಕೆಲಸ ಮಾಡಲು ಯಾರೂ ನಿರ್ಬಂಧಿಸಲಾಗದು. ಎರಡು ಮೂರು ದಿನಗಳ ಟ್ರಾಮಾ, ಮಾನಸಿಕ ನೋವು, ಅದು ನನಗೆ ಅಗತ್ಯವೇ? ಯಾರಿಗಾದರೂ ಜ್ಞಾನ ಬೇಕಾದರೆ ಆನ್‌ಲೈನ್‌ ಉಪನ್ಯಾಸ ನೀಡೋಣ. 15 ದಿನ ಅಥವಾ ತಿಂಗಳಿಗೊಮ್ಮೆ ನಿರ್ದಿಷ್ಟ ವಿಚಾರದ ಕುರಿತು ಚರ್ಚಿಸೋಣ. ಆದರೆ, ನ್ಯಾಯಾಲಯದಲ್ಲಲ್ಲ. ಪ್ರಕರಣವೇನಿದೆ ಅದನ್ನು ನೋಡಿ ಅಲ್ಲಿಯೇ ಆದೇಶ ಮಾಡುತ್ತೇನೆ. ಅನಗತ್ಯವಾಗಿ ಇದೆಲ್ಲ ಏಕೆ? ನನ್ನ ಬಗ್ಗೆ ಗೊತ್ತಿರುವವರು ನನ್ನನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದಿಲ್ಲ” ಎಂದು ವಿವರಣೆ ನೀಡಿದರು.

ಮುಂದುವರಿದು, “ಪ್ರಕರಣಗಳ ಇತ್ಯರ್ಥವೂ ಚೆನ್ನಾಗಿದೆ. ಒಂದು ರೋಸ್ಟರ್‌ನಲ್ಲಿ 180 ಆರ್‌ಎಫ್‌ಎ ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದೇನೆ ಎಂಬುದನ್ನು ಯಾರು ಯೋಚಿಸಲಾಗುತ್ತದೆ. ಇದು ವಕೀಲರ ಜ್ಞಾನ, ನನ್ನ ಜ್ಞಾನ ಹಾಗೂ ನೆರವಿನಿಂದ ಸಾಧ್ಯವಾಗಿದೆ” ಎಂದರು.

“ಈಗ ಅದರ (ಹಿಂದಿನ ಘಟನೆ) ಬಗ್ಗೆ ಮಾತನಾಡುವ ಅಗತ್ಯವಿಲ್ಲ. ನನ್ನ ದೃಷ್ಟಿಯಲ್ಲಿ ಅದು ಮುಗಿದ ಅಧ್ಯಾಯ. ಅದು ಆ ರೀತಿಯಲ್ಲಿ ಮುಕ್ತಾಯವಾಗಿದೆ ಎಂಬುದಕ್ಕೆ ನನಗೆ ಸಂತೋಷವಾಗಿದೆ. ನಾನು ಯಾರನ್ನೂ ತಪ್ಪು ಎನ್ನುತ್ತಿಲ್ಲ. ಆ ಘಟನೆಯ ಬಗ್ಗೆಯೂ ನನಗೆ ಸಮಸ್ಯೆಯಿಲ್ಲ” ಎಂದರು.

ಇನ್ನು, ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನಿರ್ದಿಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳು ಅನುಭವ ಹಂಚಿಕೊಳ್ಳುವ ಅಗತ್ಯ ಉದ್ದೇಶಗಳನ್ನು ಕೆಲವು ಉದಾಹರಣೆಗಳ ಸಹಿತ ನ್ಯಾ. ಶ್ರೀಶಾನಂದ ಅವರು ವಿವರಿಸಿದರು. “ವಕೀಲರು ಮತ್ತು ವೈದ್ಯರ ವಿಚಾರದಲ್ಲಿ ಮಾತ್ರ ಪ್ರಾಕ್ಟೀಸ್‌ಗೆ ಹೆಚ್ಚು ಮಹತ್ವ. ಬೇರೆ ಯಾವುದೇ ಉದ್ಯೋಗದಲ್ಲಿ ಅದು ಇಲ್ಲ. ಕ್ರಿಮಿನಲ್‌ ಕಾನೂನಿನಲ್ಲಿ ಪೂರ್ವ ನಿದರ್ಶನ ಎಂಬುದೇ ಇರುವುದಿಲ್ಲ” ಎಂದರು.