CJI DY Chandrachud  
ಸುದ್ದಿಗಳು

ಸಿಜೆಐ ಡಿ ವೈ ಚಂದ್ರಚೂಡ್ ವೃತ್ತಿ ಆರಂಭದಲ್ಲಿ ಪಡೆದಿದ್ದ ಸಂಭಾವನೆ ಎಷ್ಟು ಗೊತ್ತೆ?

ರಾಜ್ಯ ವಕೀಲರ ಪರಿಷತ್ತುಗಳು ವಕೀಲರ ನೋಂದಣಿಗಾಗಿ ಹೆಚ್ಚಿನ ಶುಲ್ಕ ವಿಧಿಸುತ್ತಿರುವ ಕುರಿತಾದ ಪ್ರಕರಣದ ವಿಚಾರಣೆ ವೇಳೆ ತಾವು ಭಾರತದಲ್ಲಿ ವೃತ್ತಿ ಆರಂಭಿಸಿದಾಗ ಪಡೆದ ಸಂಭಾವನೆ ಎಷ್ಟು ಎಂಬುದನ್ನು ಸಿಜೆಐ ಬಹಿರಂಗಪಡಿಸಿದ್ದಾರೆ.

Bar & Bench

ತಾವು ಭಾರತದಲ್ಲಿ ವಕೀಲ ವೃತ್ತಿ ಆರಂಭಿಸಿದಾಗ ಪಡೆಯುತ್ತಿದ್ದ ಸಂಭಾವನೆ ಎಷ್ಟು ಎಂಬುದನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್‌ ಸೋಮವಾರ ಬಹಿರಂಗಪಡಿಸಿದ್ದಾರೆ.

ರಾಜ್ಯ ವಕೀಲರ ಪರಿಷತ್ತುಗಳು ವಕೀಲರ ನೋಂದಣಿಗಾಗಿ ಹೆಚ್ಚಿನ ಶುಲ್ಕ ವಿಧಿಸುತ್ತಿರುವ ಕುರಿತಾದ ಪ್ರಕರಣದ ವಿಚಾರಣೆ ವೇಳೆ ಅವರು "ನೋಂದಣಿಗಾಗಿ ₹ 42,000 ಪಾವತಿಸಬೇಕು ಎಂದು ಒಡಿಶಾದ ಹಿಂದುಳಿದ ಜಿಲ್ಲೆಯ ವಕೀಲರಿಗೆ ವಕೀಲರ ಪರಿಷತ್ತು ಹೇಳುತ್ತದೆ. ಹೀಗಾದಲ್ಲಿ ಅವರಿಗೆ ನೋಂದಣಿ ಸಾಧ್ಯವಾಗುವುದೇ ಇಲ್ಲ. ನಾನು ಹಾರ್ವರ್ಡ್‌ ವಿವಿಯಿಂದ ಡಾಕ್ಟರೇಟ್‌ ಪಡೆದು ಕಾನೂನು ಪ್ರಾಕ್ಟೀಸ್‌ಗೆಂದು ಭಾರತಕ್ಕೆ ಬಂದಾಗ ನನ್ನ ಮೊದಲ ಪ್ರಕರಣಕ್ಕೆ ₹60 ಪಾವತಿಸಲಾಗಿತ್ತು. ಪರಿಷತ್ತು ವಕೀಲರ ಮಾತುಗಳನ್ನು ಕೂಡ ಆಲಿಸಬೇಕು" ಎಂದು ಬುದ್ಧಿವಾದ ಹೇಳಿದರು.

ಶುಲ್ಕ ಮಿತಿ ಮರುಪರಿಶೀಲಿಸುವಂತೆ ಸಂಸತ್ತನ್ನು ಒತ್ತಾಯಿಸುವುದಾಗಿ ತಿಳಿಸಿದ ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ಅವರನ್ನೂ ಒಳಗೊಂಡ ಪೀಠ ಪ್ರಕರಣದ ತೀರ್ಪನ್ನು ಕಾಯ್ದಿರಿಸಿತು.

ಹಿರಿಯ ವಕೀಲರು, ಅದರಲ್ಲಿಯೂ ದೊಡ್ಡ ನಗರಗಳಲ್ಲಿ ಇರುವವರು ತಮ್ಮ ಜ್ಯೂನಿಯರ್‌ ವಕೀಲರಿಗೆ ಉತ್ತಮ ವೇತನ ಪಾವತಿಸುವಂತೆ  ಸಿಜೆಐ ಸಲಹೆ ನೀಡಿದ್ದಾರೆ.

ನನ್ನ ವೃತ್ತಿಯ ಆರಂಭಿಕ ದಿನಗಳಲ್ಲಿ ಕಠಿಣ ರೀತಿಯಲ್ಲಿ ಕಾನೂನು ಪ್ರಾಕ್ಟೀಸ್‌ ಮಾಡುತ್ತಿದ್ದೆ. ಹೀಗಾಗಿ ಹಿರಿಯ ವಕೀಲರು ತಮ್ಮ ಕಿರಿಯ ವಕೀಲರನ್ನು ಜೀತದಾಳುಗಳಂತೆ ಪರಿಗಣಿಸಬಾರದು ಎಂದು ಅವರು ಹೇಳಿದರು.

ಸಮಾಜದ ಅಂಚಿನಲ್ಲಿರುವ ಸಮುದಾಯದವರಿಗೆ ವೃತ್ತಿಯಲ್ಲಿ ಸಾಕಷ್ಟು ಅವಕಾಶಗಳನ್ನು ಒದಗಿಸುವುದಕ್ಕಾಗಿ  ವಕೀಲರು ಕಿರಿಯರಿಗೆ ಯೋಗ್ಯ ವೇತನ ನೀಡುವುದೊಂದೇ ವಕೀಲ ವರ್ಗವನ್ನು ಪ್ರಜಾಸತ್ತಾತ್ಮಕಗೊಳಿಸುವ ಏಕೈಕ ಮಾರ್ಗ ಎಂದು ಸಿಜೆಐ ಸಮರ್ಥಿಸಿಕೊಂಡರು.