Justice (retd.) Madan Lokur 
ಸುದ್ದಿಗಳು

[ಕೊಲಿಜಿಯಂ ಸಭೆ] ನಿವೃತ್ತ ಸಿಜೆಐ ಗೊಗೊಯ್‌ ಪುಸ್ತಕದಲ್ಲಿ ಬರೆದಿರುವ ಮಾಹಿತಿ ಸರಿ‌ ಇಲ್ಲ: ನಿವೃತ್ತ ನ್ಯಾ. ಲೋಕೂರ್‌

ಒಂದು ಕಡೆ ಕೊಲಿಜಿಯಂ ಸಭೆಗಳ ಗೌಪ್ಯತೆಯನ್ನು ಕಾಪಾಡಬೇಕು ಎನ್ನಲಾಗುತ್ತದೆ, ಆದರೆ, ಮತ್ತೊಂದೆಡೆ ನಿವೃತ್ತ ಸಿಜೆಐ ಗೊಗೊಯ್‌ ಅವರ ಪುಸ್ತಕದಲ್ಲಿ ಅದನ್ನು ಬಹಿರಂಗಪಡಿಸಲಾಗಿದೆ ಎಂದು ಇಬ್ಬಗೆಯ ಧೋರಣೆಯ ಬಗ್ಗೆ ವಿವರಿಸಿದ ನ್ಯಾ. ಲೋಕೂರ್‌.

Bar & Bench

“ಇದು ಅತ್ಯಂತ ದುರದೃಷ್ಟಕರ ಸಂಗತಿ. ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ಅವರು ಕಳೆದ ವರ್ಷ ರಚಿಸಿರುವ ಜಸ್ಟೀಸ್‌ ಫಾರ್‌ ಜಡ್ಜ್‌ ಪುಸ್ತಕದಲ್ಲಿ ಬರೆದಿರುವುದು ಸರಿಯಾದ ಮಾಹಿತಿಯಲ್ಲ." ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಮದನ್‌ ಲೋಕೂರ್‌ ಹೇಳಿದ್ದಾರೆ.

ಕೊಲಿಜಿಯಂ ನಿರ್ಧಾರಕ್ಕೆ ಸಂಬಂಧಿಸಿದ ವಿಚಾರಗಳು, ನ್ಯಾಯಮೂರ್ತಿಗಳ ವರ್ಗಾವಣೆ, ಮುಕ್ತ ನ್ಯಾಯಾಲಯಗಳ ಅಗತ್ಯತೆ ಮತ್ತು ನಿವೃತ್ತಿಯ ಬಳಿಕ ನ್ಯಾಯಮೂರ್ತಿಗಳು ವಿವಿಧ ಹುದ್ದೆ ಅಲಂಕರಿಸುವ ವಿಚಾರಗಳ ಕುರಿತು ಒಡಿಶಾದ ಭುವನೇಶ್ವರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾನುವಾರ ಅವರು ಆಶಯ ಭಾಷಣ ಮಾಡಿದರು.

ಈ ವೇಳೆ, ನಿವೃತ್ತ ಸಿಜೆಐ ರಂಜನ್‌ ಗೊಗೊಯ್‌ ಅವರ ಪುಸ್ತಕದಲ್ಲಿ ಕೊಲಿಜಿಯಂ ಸಭೆಯ ಬಗ್ಗೆ ದಾಖಲಿಸಿರುವ ಮಾಹಿತಿಯನ್ನು ಅಲ್ಲಗಳೆದ ಅವರು, "ನನಗೆ ತಿಳಿದಂತೆ ಆಗ ಏನು ನಡೆದಿತ್ತು ಎಂದು ಹೇಳುತ್ತೇನೆ. ಏನಾಯಿತು ಎನ್ನುವುದನ್ನು ದಾಖಲಿಸುವ ಸಲುವಾಗಿ ನಾನು ಅದನ್ನು ಬರಹಕ್ಕೆ ಇಳಿಸುತ್ತಿದ್ದೇನೆ ಎಂದು ಅವರು (ಗೊಗೊಯ್‌) ಕತೆಯೊಂದನ್ನು ಹೆಣೆದಿದ್ದಾರೆ. ಆದರೆ, ಅವರು ಹಾಗೆಂದು ಏನು ಬರೆದಿದ್ದಾರೆ ಅದು ಸರಿಯಾದ ಮಾಹಿತಿ ಅಲ್ಲ. ಆ ಸಂದರ್ಭದಲ್ಲಿ ನಾನು ಕೊಲಿಜಿಯಂ ಸದಸ್ಯನಾಗಿದ್ದರಿಂದ ಅದು ನನಗೆ ಗೊತ್ತು” ಎಂದು ನ್ಯಾ. ಮದನ್‌ ಲೋಕೂರ್‌ ವಿವರಿಸಿದರು.

“ಇದು ನೋಡಿ ಎಷ್ಟು ವಿಚಿತ್ರವಾಗಿದೆ. ಒಂದು ಕಡೆ, ಕೊಲಿಜಿಯಂನಲ್ಲಿ ಏನು ನಡೆಯುತ್ತದೆ ಅದು ಗೌಪ್ಯ ಎಂದು ನಮಗೆ ಹೇಳಲಾಗುತ್ತದೆ… ಆದರೆ, ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಅವರು ತಮ್ಮ ಪುಸ್ತಕದಲ್ಲಿ ಕೊಲಿಜಿಯಂನಲ್ಲಿ ಹೀಗೆ ನಡೆದಿತ್ತು ಎಂದು ಬರೆಯುತ್ತಾರೆ. ಹೀಗಾದರೆ ಗೌಪ್ಯತೆ ವಿಷಯ ಏನಾಗುತ್ತದೆ? ಕೊಲಿಜಿಯಂನಲ್ಲಿ ನಡೆದಿದ್ದನ್ನು ಬಹಿರಂಗಪಡಿಸಿದ ಅವರನ್ನು ಶಿಳ್ಳೆಗಾರರು (ವಿಷಲ್‌ಬ್ಲೋವರ್‌) ಎನ್ನುತ್ತೀರಾ? ಅವರನ್ನು ಏನೆಂದು ಕರೆಯುತ್ತೀರಿ, ಕೊಲಿಜಿಯಂ ಮೇಲಿನ ವಿಶ್ವಾಸಕ್ಕೆ ದ್ರೋಹ ಬಗೆದವರು ಎನ್ನುತ್ತೀರಾ?” ಎಂದರು.

ರಾಜಸ್ಥಾನ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಅಕಿಲ್‌ ಖುರೇಷಿ ಅವರು ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಪಡೆಯದಿರುವುದನ್ನು ಉದಾಹರಿಸಿದ ಅವರು ಕೊಲಿಜಿಯಂ ಸಭೆಗಳು ಮುಕ್ತವಾಗಿರಬೇಕು ಎಂದು ಪ್ರತಿಪಾದಿಸಿದರು. ನೇಮಕಾತಿಗಳ ಬಗೆಗಿನ ಚರ್ಚೆಯನ್ನು ದಾಖಲು ಮಾಡಬೇಕು. ಇದು ಜನರಿಗೆ ಸಿಗುವಂತಾಗಬೇಕು. ಈ ಮೂಲಕ ನಿರ್ದಿಷ್ಟ ನ್ಯಾಯಮೂರ್ತಿ ನೇಮಕಾತಿ ಏಕೆ ಆಯಿತು ಅಥವಾ ಅವರನ್ನು ಕೈಬಿಟ್ಟಿದ್ದು ಏಕೆ ಎಂಬುದು ಸಾರ್ವಜನಿಕರಿಗೆ ತಿಳಿಯುವಂತಿರಬೇಕು ಎಂದರು.