Rouse Avenue Court, Enforcement Directorate 
ಸುದ್ದಿಗಳು

“ಇ ಡಿ ಪ್ರಕರಣಗಳಲ್ಲಿ ಯಾರಿಗೆ ಜಾಮೀನು ದೊರೆಯುತ್ತದೆ?” ಹೀಗೆಂದು ನ್ಯಾಯಾಧೀಶರು ಹೇಳಿದ ಬಳಿಕ ಆಗಿದ್ದೇನು!

"ಇ ಡಿ ಪ್ರಕರಣಗಳಲ್ಲಿ ಯಾರಿಗೂ ಜಾಮೀನು ದೊರೆಯುವುದಿಲ್ಲ” ಎಂದಿದ್ದ ನ್ಯಾಯಾಧೀಶ ಜಗದೀಶ್ ಕುಮಾರ್ ಅವರೆದುರು ಇದ್ದ ಪ್ರಕರಣವನ್ನು ರೌಸ್ ಅವೆನ್ಯೂ ನ್ಯಾಯಾಲಯಗಳ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಬೇರೊಬ್ಬರಿಗೆ ವರ್ಗಾಯಿಸಿದ ಘಟನೆ ನಡೆದಿದೆ.

Bar & Bench

“ಇ ಡಿ ಪ್ರಕರಣಗಳಲ್ಲಿ ಯಾರಿಗೆ ಜಾಮೀನು ದೊರೆಯುತ್ತದೆ?” ಎಂದು ಹೇಳಿದ್ದ ನ್ಯಾಯಾಧೀಶರೊಬ್ಬರಿಂದ ಪ್ರಕರಣವೊಂದನ್ನು ಹಿಂಪಡೆದು ಮತ್ತೊಬ್ಬ ನ್ಯಾಯಾಧೀಶರಿಗೆ ವರ್ಗಾಯಿಸಿದ ಘಟನೆ ದೆಹಲಿಯ ರೌಸ್‌ ಅವೆನ್ಯೂ ನ್ಯಾಯಾಲಯದಲ್ಲಿ ನಡೆದಿದೆ.

ನ್ಯಾಯಾಧೀಶರಾದ ಜಗದೀಶ್‌ ಕುಮಾರ್‌ ಅವರ ವಿರುದ್ಧ ಜಾರಿ ನಿರ್ದೇಶನಾಲಯದ ಪರವಾಗಿ ಪಕ್ಷಪಾತ ಧೋರಣೆ ತಳೆದಿದ್ದಾರೆ ಎನ್ನುವ ಆರೋಪ ವ್ಯಕ್ತವಾದ ಹಿನ್ನೆಲೆಯಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಆ ನ್ಯಾಯಾಧೀಶರಿಂದ ಮತ್ತೊಬ್ಬ ನ್ಯಾಯಾಧೀಶರಿಗೆ ವರ್ಗಾಯಿಸಿ ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯಗಳ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಆದೇಶಿಸಿದರು. ಭೂಷಣ್‌ ಸ್ಟೀಲ್‌ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ಮೇ 1ರಂದು ನೀಡಿದ ಆದೇಶದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಅಂಜು ಬಜಾಜ್ ಚಂದನಾ ಅವರು ಪ್ರಕರಣವನ್ನು ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ರೂಪುಗೊಂಡ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ಕುಮಾರ್ ಅವರಿಂದ ಅದೇ ನ್ಯಾಯಾಲಯದ ಮತ್ತೊಬ್ಬ ನ್ಯಾಯಾಧೀಶ ಮುಖೇಶ್‌ ಕುಮಾರ್‌ ಅವರಿಗೆ ವರ್ಗಾಯಿಸಿದರು.

ಆರೋಪಿ ವ್ಯಕ್ತಪಡಿಸಿರುವ ಆತಂಕವನ್ನು ತಪ್ಪು ಕಲ್ಪನೆ ಇಲ್ಲವೇ ಅಪದ್ಧ ಎಂದು ಹೇಳಲು ಸಾಧ್ಯವಿಲ್ಲ. ಅರ್ಜಿದಾರರ ಮನವಿಯನ್ನು ಪುರಸ್ಕರಿಸಲಾಗಿದೆ ಎಂಬುದಾಗಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ತಿಳಿಸಿದರು.

ನ್ಯಾಯಾಧೀಶ ಕುಮಾರ್ ಅವರೆದುರು ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿತ್ತು. ಪ್ರಕರಣದ ಆರೋಪಿಯೂ ಆಗಿರುವ ಮಿತ್ತಲ್‌ ಅವರೂ ವಿಚಾರಣೆ ವೇಳೆ ಉಪಸ್ಥಿತರಿದ್ದರು. ವಕೀಲರು ನ್ಯಾಯಾಲಯದಿಂದ ಹೊರಬಂದಾಗ ನ್ಯಾಯಾಲಯದ ಸಿಬ್ಬಂದಿ ಜೊತೆ ಮಾತನಾಡಿದ ನ್ಯಾಯಾಧೀಶರು ಅವರನ್ನುದ್ದೇಶಿಸಿ “ಅವರು ವಿಚಾರಣಾ ದಿನಾಂಕಗಳನ್ನು ಪಡೆಯುತ್ತಿರಲಿ. ಇ ಡಿ ಪ್ರಕರಣಗಳಲ್ಲಿ ಯಾರಿಗೆ ಜಾಮೀನು ದೊರೆಯುತ್ತದೆ?” ಎಂದರು. ಈ ಹಿನ್ನೆಲೆಯಲ್ಲಿ ನ್ಯಾಯದ ಹಿತಾಸಕ್ತಿಯ ಕಾರಣಕ್ಕೆ ಬೇರೆ ನ್ಯಾಯಾಲಯಕ್ಕೆ ಪ್ರಕರಣ ವರ್ಗಾಯಿಸಬೇಕು ಎಂದು ಪ್ರಕರಣದ ಆರೋಪಿಯಾಗಿರುವ ಅಜಯ್ ಎಸ್ ಮಿತ್ತಲ್ ಅವರು ಕೋರಿದ್ದರು.

ಇದಕ್ಕೆ ಇ ಡಿ ಆಕ್ಷೇಪ ವ್ಯಕ್ತಪಡಿಸಿತು. ಆದರೆ ಆರೋಪಿಯ ಅರ್ಜಿಯನ್ನು ಪುರಸ್ಕರಿಸಿದ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರು "ನ್ಯಾಯ ಮತ್ತು ಸಮಾನತೆ ಅಪರಾಧ ನ್ಯಾಯ ವ್ಯವಸ್ಥೆಯ ವಿಶಿಷ್ಟ ಲಕ್ಷಣವಾಗಿದೆ. ಪ್ರಕರಣಗಳನ್ನು ನ್ಯಾಯಾಧೀಶರು ನಿಷ್ಪಕ್ಷಪಾತತೆ, ಪ್ರಾಮಾಣಿಕತೆ ಹಾಗೂ ಸಮಾನತೆಯಿಂದ ಕಾಣುವ ಮೂಲಕ ತೀರ್ಪು ನೀಡಲು ಬದ್ಧರಾಗಿದ್ದು ಕಾನೂನಿನ ಅಧಿಪತ್ಯವನ್ನು ಎತ್ತಿಹಿಡಿಯಬೇಕು. ನ್ಯಾಯ ನೀಡುವುದು ಮಾತ್ರವೇ ಅಲ್ಲ, ಅದು ಗೋಚರವಾಗಬೇಕು ಕೂಡ ಎಂಬುದು ನ್ಯಾಯಿಕ ಆಡಳಿತದ ಮೂಲ ತತ್ವಗಳಲ್ಲಿ ಒಂದಾಗಿದೆ, ”ಎಂದರು.