Karnataka High Court 
ಸುದ್ದಿಗಳು

[ಅಷ್ಟಮಠ ಪರ್ಯಾಯ ಮಹೋತ್ಸವ] ಜ್ಞಾನ ಸಂಪಾದನೆ, ಪ್ರಸಾರಕ್ಕೆ ವಿದೇಶ ಪ್ರಯಾಣ ಬೆಳೆಸಿದರೆ ತಪ್ಪೇನು ಎಂದ ಹೈಕೋರ್ಟ್‌

ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಜ್ಞಾನ ಸಂಪಾದನೆಗೆ ವಿದೇಶಕ್ಕೆ ಹೋಗಲಿಲ್ಲವೇ? ಸ್ವಾಮಿ ವಿವೇಕಾನಂದರು ವಿದೇಶದಲ್ಲಿ ಜ್ಞಾನದ ಪ್ರಸಾರ ಮಾಡಿದ ಪರಿ ನಮ್ಮಲ್ಲಿ ಹೆಮ್ಮೆ ತರಿಸುತ್ತಿಲ್ಲವೇ? ಎಂದು ಪ್ರಶ್ನಿಸಿದ ಪೀಠ.

Bar & Bench

“ಜ್ಞಾನ ಸಂಪಾದನೆ ಹಾಗೂ ಅದರ ಪ್ರಸಾರಕ್ಕೆ ವಿದೇಶ ಪ್ರಯಾಣ ಬೆಳೆಸಿದರೆ ಮತ್ತು ಸಮುದ್ರ ದಾಟಿ ಹೋದರೆ ತಪ್ಪೇನು” ಎಂದು ಪ್ರಶ್ನಿಸಿರುವ ಕರ್ನಾಟಕ ಹೈಕೋರ್ಟ್, ಉಡುಪಿ ಅಷ್ಟಮಠದ ಪಯಾರ್ಯ ಮಹೋತ್ಸವದಲ್ಲಿ ಪಾಲ್ಗೊಳ್ಳದಂತೆ ಪುತ್ತಿಗೆ ಮಠದ ಪೀಠಾಧಿಪತಿ ಸುಗುಣೇಂದ್ರತೀರ್ಥ ಅವರನ್ನು ತಡೆಯಬೇಕು ಎಂಬ ಮನವಿಯನ್ನು ಸೋಮವಾರ ವಜಾ ಮಾಡಿದೆ.

ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿರುವ ಹೈಕೋರ್ಟ್, ಉಡುಪಿ ಅಷ್ಟಮಠದ ಪರ್ಯಾಯ ಮಹೋತ್ಸವ ಆಯೋಜನೆಗೆ ಮಾರ್ಗಸೂಚಿ ಅಥವಾ ಬೈಲಾ ರೂಪಿಸಲು ಸಮಿತಿ ರಚಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನೂ ವಜಾಗೊಳಿಸಿದೆ.

ಈ ವಿಚಾರವಾಗಿ ಮಧ್ವಾಚಾರ್ಯರ ಅನುಯಾಯಿ, ಸೋದೆ ಮಠ ಮತ್ತು ಕೃಷ್ಣಾಪುರ ಮಠದ ಭಕ್ತ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ನ ಕುಳಾಯಿ, ಹೊಸಬೆಟ್ಟು ಗ್ರಾಮದ ಮೂಲ ನಿವಾಸಿ ಸದ್ಯ ಬೆಂಗಳೂರಿನಲ್ಲಿ ವಾಸವಾಗಿರುವ ಗುರುರಾಜ್ ಜೀವನ್ ರಾವ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠದ ವಿಚಾರಣೆ ನಡೆಸಿತು.

ಈ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಸಾಗರಾದಾಚೆ ಪ್ರಯಾಣ ಮಾಡಿದವರು ಪರ್ಯಾಯ ಮಹೋತ್ಸವದಲ್ಲಿ ಪಾಲ್ಗೊಳ್ಳಬಾರದು ಎಂಬುದು ಅಷ್ಟಮಠಗಳ ಪರಂಪರೆ ಮತ್ತು ಸಂಪ್ರದಾಯವಾಗಿದೆ. ಸಮುದ್ರೋಲ್ಲಂಘನೆ ಮಾಡಿದವರು ಶ್ರೀಕೃಷ್ಣನ ಮೂರ್ತಿಯ ಸ್ಪರ್ಶ ಮಾಡಲು ಹಾಗೂ ಪೂಜೆ ಮಾಡಲು ಅರ್ಹರಿರುವುದಿಲ್ಲ. ಆದ್ದರಿಂದ ಜನವರಿ 8ರಿಂದ 18ರವರೆಗೆ ನಡೆಯಲಿರುವ ಉಡುಪಿ ಅಷ್ಟಮಠದ ಪರ್ಯಾಯದಲ್ಲಿ ಪುತ್ತಿಗೆ ಮಠದ ಪೀಠಾಧಿಪತಿ ಸುಗಣೇಂದ್ರ ತೀರ್ಥರು ಪಾಲ್ಗೊಳ್ಳುವುದಕ್ಕೆ ನಿರ್ಬಂಧ ವಿಧಿಸಬೇಕು ಹಾಗೂ ಅಷ್ಟಮಠದ ಪರ್ಯಾಯ ಆಯೋಜನೆಗೆ ಮಾರ್ಗಸೂಚಿ ಅಥವಾ ಬೈಲಾ ರೂಪಿಸಲು ಸಮಿತಿಯೊಂದನ್ನು ರಚಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿದರು.

ಕೆಲ ಕಾಲ ವಾದ ಆಲಿಸಿದ ಪೀಠವು ಇದು ನ್ಯಾಯಾಲಯ ಮಧ್ಯಪ್ರವೇಶ ಮಾಡುವ ವಿಷಯವಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿತು.

ಇದಕ್ಕೂ ಮುನ್ನ, ಸಿಜೆ ಅವರು “ನಾವಿಂದು 21ನೇ ಶತಮಾನದಲ್ಲಿದ್ದೇವೆ, ನೀವ್ಯಾಕೆ ಇನ್ನೂ 18ನೇ ಶತಮಾನದ ಮಾತುಗಳನ್ನಾಡುತ್ತಿದ್ದೀರಿ. ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಜ್ಞಾನ ಸಂಪಾದನೆಗೆ ವಿದೇಶಕ್ಕೆ ಹೋಗಲಿಲ್ಲವೇ? ಸ್ವಾಮಿ ವಿವೇಕಾನಂದರು ವಿದೇಶದಲ್ಲಿ ಜ್ಞಾನದ ಪ್ರಸಾರ ಮಾಡಿದ ಪರಿ ನಮ್ಮಲ್ಲಿ ಹೆಮ್ಮೆ ತರಿಸುತ್ತಿಲ್ಲವೇ? ಸಾಮ್ರಾಟ್ ಅಶೋಕ್ ತನ್ನ ಮಕ್ಕಳಾದ ಮಹೇಂದ್ರ ಮತ್ತು ಸಂಘಮಿತ್ರನನ್ನು ಬೌದ್ಧ ಧರ್ಮದ ಪ್ರಚಾರಕ್ಕೆ ಶ್ರೀಲಂಕಾ ದೇಶಕ್ಕೆ ಕಳಿಸಿಲ್ಲವೇ? ಶಂಕರಾಚಾರ್ಯರು ಸಾಗರ ದಾಟಿ ಇಡೀ ದೇಶ ಸುತ್ತಾಡಿದರು. ಸಂಪ್ರದಾಯ ಅಥವಾ ಪರಂಪರೆ ಇರಬಹುದು. ಆದರೆ, ತೆರೆದ ಮನಸ್ಸು ಮತ್ತು ಮುಕ್ತ ಆಲೋಚನೆಗಳೊಂದಿಗೆ ವಿದೇಶಕ್ಕೆ ಹೋಗಿ ಧಾರ್ಮಿಕ ಜ್ಞಾನ ಸಂಪಾದನೆ ಮಾಡುವುದು ಮತ್ತು ಅದನ್ನು ಪ್ರಸಾರ ಮಾಡುವುದರಲ್ಲಿ ತಪ್ಪೇನಿದೆ. ಈ ವಿಚಾರದಲ್ಲಿ ನಿರ್ಬಂಧ ವಿಧಿಸುವುದಕ್ಕೆ ಅವಕಾಶ ಎಲ್ಲಿದೆ” ಎಂದು ಪ್ರಶ್ನಿಸಿದರು.

ಆಗ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರು “ಧರ್ಮ-ಶಾಸ್ತ್ರದ ವಿಚಾರದಲ್ಲಿ ಹೀಗೆ ಮಾಡಬೇಕು, ಈ ರೀತಿ ನಡೆದುಕೊಳ್ಳಬೇಕು, ಅದನ್ನು ಮುಟ್ಟಬಾರದು, ಇದನ್ನು ಸೇವಿಸಬಾರದು ಎಂದು ನ್ಯಾಯಾಲಯ ಹೇಳಬೇಕು ಎಂಬುದು ಎಷ್ಟು ಸರಿ? ರಾಷ್ಟ್ರಕವಿ ಕುವೆಂಪು ಅವರು ‘ಓ ನನ್ನ ಚೇತನ....ಆಗು ನೀ ಅನಿಕೇತನ’ ಎಂದು ಹೇಳಿದ್ದಾರೆ. ನಿಕೇತನ ಎಂದರೆ ಮನೆ, ಅನಿಕೇತನ ಎಂದಾಗ ಮನೆಯಿಂದ ಆಚೆ ಬಂದು ನೋಡಬೇಕು ಎಂದರ್ಥ. ಹೀಗಿರುವಾಗ ಸ್ವಾಮೀಜಿ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದರು ಎಂದರೆ, ಈ ವಿಚಾರದಲ್ಲಿ ನ್ಯಾಯಾಲಯ ಏನು ಮಾಡಬೇಕು. ಈ ಗೊಂದಲ 2ನೇ ಬಾರಿ ಎದ್ದಿದೆ. ಯಾವುದಕ್ಕೂ ಒಂದು ಮಿತಿ ಇರುತ್ತದೆ. ಮುಕ್ತ ಮನಸ್ಸು ಮತ್ತು ಮುಕ್ತ ಆಲೋಚನೆಗಳಿರಬೇಕು ಎಂದು ಸೂಕ್ಷ್ಮವಾಗಿ ಹೇಳಿದರು.

ಪ್ರಕರಣದ ಹಿನ್ನೆಲೆ: ಸಮುದ್ರೋಲ್ಲಂಘನೆ ಮಾಡಿದವರು ಅಷ್ಟ ಮಠಗಳ ಪೀಠಾಧಿಪತಿಯಾಗುವುದಕ್ಕೆ ಅವಕಾಶವಿರುವುದಿಲ್ಲ. ಅಂತಹವರು ಶ್ರೀಕೃಷ್ಣನ ಮೂರ್ತಿ ಸ್ಪರ್ಶ ಮಾಡುವುದಕ್ಕೆ ಹಾಗೂ ಪೂಜೆ ಮಾಡುವುದಕ್ಕೆ ಅವಕಾಶವಿಲ್ಲ. ಅಲ್ಲದೆ, ನಾಲ್ಕನೇ ಪ್ರತಿವಾದಿಯಾಗಿರುವ ಪುತ್ತಿಗೆ ಮಠದ ಶ್ರೀ ಸುಗಣೇಂದ್ರತೀರ್ಥರು 1997ರಲ್ಲಿ ಅಮೆರಿಕಾಗೆ ಸಾಗರ ದಾಟಿ ಹೋಗಿದ್ದಾರೆ. ಆದ್ದರಿಂದ ಅವರು ಶ್ರೀ ಕೃಷ್ಣನನ್ನು ಸ್ಪರ್ಶಿಸುವುದು ಮತ್ತು ಪೂಜಿಸುವುದಕ್ಕೆ ಅರ್ಹರಾಗಿರುವುದಿಲ್ಲ. ಆದ್ದರಿಂದ, ಪರ್ಯಾಯ ಮಹೋತ್ಸವದಲ್ಲಿ ಭಾಗಿಯಾಗುವುದಕ್ಕೆ ಅವಕಾಶವಿರುವುದಿಲ್ಲ. ಆದ್ದರಿಂದ ಪರ್ಯಾಯಯದಲ್ಲಿ ಪಾಲ್ಗೊಳ್ಳದಂತೆ ಅವರನ್ನು ತಡೆಯಬೇಕು. ಅಲ್ಲದೇ ಪರ್ಯಾಯದ ಆಯೋಜನೆಗೆ ಮಾರ್ಗಸೂಚಿ ಅಥವಾ ಬೈಲಾ ರೂಪಿಸಲು ಸಮಿತಿ ರಚಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.