Karnataka High Court 
ಸುದ್ದಿಗಳು

'ಬಿಸಿಗಾಳಿಯಿಂದ ಪೌರ ಕಾರ್ಮಿಕರನ್ನು ರಕ್ಷಿಸಲು ಯಾವ ಕ್ರಮಕೈಗೊಳ್ಳಲಾಗಿದೆ?' ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಪ್ರಶ್ನೆ

ಅಖಿಲ ಭಾರತ ಸೆಂಟ್ರಲ್‌ ಕೌನ್ಸಿಲ್‌ ಆಫ್‌ ಟ್ರೇಡ್‌ ಯೂನಿಯನ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Bar & Bench

ಪೌರ ಕಾರ್ಮಿಕರು ಅಥವಾ ನೈರ್ಮಲ್ಯ ಕಾರ್ಮಿಕರನ್ನು ಬಿಸಿಗಾಳಿಯಿಂದ ರಕ್ಷಿಸಲು ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಸಮಗ್ರ ಯೋಜನಾ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ. 

ಅಖಿಲ ಭಾರತ ಸೆಂಟ್ರಲ್‌ ಕೌನ್ಸಿಲ್‌ ಆಫ್‌ ಟ್ರೇಡ್‌ ಯೂನಿಯನ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಗುರುವಾರ ವಿಚಾರಣೆ ನಡೆಸಿತು.

“ಪೌರ ಕಾರ್ಮಿಕರು ತಮ್ಮ ರಕ್ಷಣೆಗಾಗಿ ಸರ್ಕಾರವನ್ನು ಅವಲಂಬಿಸಿದ್ದಾರೆ. ಹೀಗಾಗಿ, ಸರ್ಕಾರ ಈ ನಿಟ್ಟಿನಲ್ಲಿ ‌ಕ್ರಮ ಕೈಗೊಳ್ಳಬೇಕಲ್ಲವೇ” ಎಂದು ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿದ ಪೀಠವು ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ಶುಕ್ರವಾರಕ್ಕೆ (ಏಪ್ರಿಲ್‌ 4) ಮುಂದೂಡಿತು.

ಬೇಸಿಗೆ ಸಮಯದಲ್ಲಿ ಪೌರ ಕಾರ್ಮಿಕರ ರಕ್ಷಣೆಗೆ ಸಂಬಂಧಿಸಿದಂತೆ ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗ 2025ರ ಮಾರ್ಚ್‌ 12ರಂದು ಹೊರಡಿಸಿರುವ ಆದೇಶ ಪಾಲನೆ ಮಾಡುವಂತೆ ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.