ನ್ಯಾಯಮೂರ್ತಿ ಆನಂದ್ ವೆಂಕಟೇಶ್ ಮತ್ತು ಹಿರಿಯ ವಕೀಲ ಆರ್ಯಮಾ ಸುಂದರಂ
ನ್ಯಾಯಮೂರ್ತಿ ಆನಂದ್ ವೆಂಕಟೇಶ್ ಮತ್ತು ಹಿರಿಯ ವಕೀಲ ಆರ್ಯಮಾ ಸುಂದರಂ 
ಸುದ್ದಿಗಳು

ಸೆಂಥಿಲ್‌ ಸಚಿವ ಸ್ಥಾನ ಪ್ರಶ್ನಿಸಿದ ಹೈಕೋರ್ಟ್‌: ಆರೋಪವಿದ್ದರೂ ನ್ಯಾಯಮೂರ್ತಿ ಆಗಿದ್ದವರ ಮಾಹಿತಿ ನೀಡಿದ ವಕೀಲ

Bar & Bench

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ (ಇ ಡಿ) ಬಂಧನಕ್ಕೊಳಗಾಗಿ 200ಕ್ಕೂ ಹೆಚ್ಚು ದಿನ ಸೆರೆವಾಸ ಅನುಭವಿಸಿದ ವಿ ಸೆಂಥಿಲ್‌ ಬಾಲಾಜಿ ಡಿಎಂಕೆ ಸರ್ಕಾರದಲ್ಲಿ ಸಚಿವರಾಗಿ ಮುಂದುವರೆದಿರುವುದು ಏಕೆ ಎಂದು ಮದ್ರಾಸ್‌ ಹೈಕೋರ್ಟ್‌ ಸೋಮವಾರ ಕೇಳಿದ ಪ್ರಶ್ನೆಗೆ ಹಿರಿಯ ನ್ಯಾಯವಾದಿಯೊಬ್ಬರು, ಆರೋಪವಿದ್ದರೂ ಸುಪ್ರೀಂ ಕೋರ್ಟ್‌ನಲ್ಲಿ ಅಧಿಕಾರದಲ್ಲಿದ್ದ ನ್ಯಾಯಮೂರ್ತಿಯೊಬ್ಬರ ವಿಚಾರವನ್ನು ಪ್ರಸ್ತಾಪಿಸಿದರು.

"ಇದೆಲ್ಲದರ ಹಿಂದಿನ ರಾಜಕೀಯಕ್ಕೆ ಇಳಿಯಲು ಹೋಗುವುದಿಲ್ಲ. ಆದರೆ ನನ್ನ ಮನಸ್ಸಿನಲ್ಲಿರುವುದನ್ನು ಮಾತ್ರ ಮಾತನಾಡುತ್ತಿರುವೆ. ಈ ನ್ಯಾಯಾಲಯದ ವಿಭಾಗೀಯ ಪೀಠವು ತನ್ನ ಆದೇಶದಲ್ಲಿ ಇದು ಒಳ್ಳೆಯದಲ್ಲ ಎಂದು ನಿರ್ದಿಷ್ಟವಾಗಿ ಹೇಳಿದ್ದರೂ ಸಹ 230 ದಿನಗಳನ್ನು ಜೈಲಿನಲ್ಲಿ ಕಳೆದವರು ಖಾತೆಯಿಲ್ಲದೆ ಸಚಿವರಾಗಿ ಮುಂದುವರೆದಿದ್ದಾರೆ. ಇದು ನನಗೆ ಆತಂಕ ತರಿಸಿದೆ" ಎಂದು ನ್ಯಾಯಮೂರ್ತಿ ಎನ್.ಆನಂದ್ ವೆಂಕಟೇಶ್ ಸೆಂಥಿಲ್‌ ಜಾಮೀನು ಅರ್ಜಿಯ ವಿಚಾರಣೆ ವೇಳೆ ಅಭಿಪ್ರಾಯಪಟ್ಟರು.

ಬಾಲಾಜಿ ಅವರ ಮನವಿಯನ್ನು ನ್ಯಾಯಾಲಯವು ಅರ್ಹತೆಯ ಆಧಾರದ ಮೇಲೆ ಆಲಿಸುತ್ತದೆಯಾದರೂ, ಯಾವುದೇ ಖಾತೆಯಿಲ್ಲದೆ ಸಚಿವರಾಗಿ ಮುಂದುವರಿಯಲು ಅವಕಾಶ ನೀಡುವ ಮೂಲಕ ಸಾರ್ವಜನಿಕರಿಗೆ ಯಾವ ಸಂದೇಶವನ್ನು ಕಳುಹಿಸುತ್ತಿದೆ ಎಂಬುದನ್ನು ರಾಜ್ಯ ಸರ್ಕಾರ ಹೇಳಬೇಕು ಎಂದು ನ್ಯಾ. ವೆಂಕಟೇಶ್ ಹೇಳಿದರು.

"ಇದು ಒಳ್ಳೆಯದಲ್ಲ. ಏಕೆಂದರೆ, ಸರ್ಕಾರದ ಕೆಳಸ್ತರದಲ್ಲಿರುವ ವ್ಯಕ್ತಿಯು ಕೇವಲ 48 ಗಂಟೆಗಳ ಕಾಲ ಜೈಲಿನಲ್ಲಿದ್ದರೂ, ಅವರನ್ನು ತಕ್ಷಣವೇ (ಹುದ್ದೆಯಿಂದ) ತೆಗೆದುಹಾಕಲಾಗುತ್ತದೆ ಅಥವಾ ಅಮಾನತುಗೊಳಿಸಲಾಗುತ್ತದೆ. ಆದರೆ ಇಲ್ಲಿನ ಸಚಿವರೊಬ್ಬರು 200 ದಿನಗಳಿಗೂ ಹೆಚ್ಚು ದಿನ ಜೈಲಿನಲ್ಲಿದ್ದರೂ ಅಧಿಕಾರದಲ್ಲಿದ್ದಾರೆ. ಒಮ್ಮೆ ಯೋಚಿಸಿ: ನಾಳೆ, ನ್ಯಾಯಮೂರ್ತಿಯೊಬ್ಬರು ಕ್ರಿಮಿನಲ್ ಪ್ರಕರಣದಲ್ಲಿ ಆರೋಪ ಎದುರಿಸಿ ಮುಖ್ಯ ನ್ಯಾಯಮೂರ್ತಿಗಳು ಅವರಿಗೆ ಯಾವುದೇ ನ್ಯಾಯಾಂಗ ಕೆಲಸ ನೀಡದಿರಲು ನಿರ್ಧರಿಸಿದರೂ ನ್ಯಾಯಾಧೀಶರು ತಮ್ಮ ಹುದ್ದೆಯಲ್ಲಿ ಮುಂದುವರಿದರೆ ಏನಾಗುತ್ತದೆ?" ಎಂದು ಕೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಹಿರಿಯ ವಕೀಲ ಸಿ. ಆರ್ಯಮ ಸುಂದರಂ, ಈ ಹಿಂದೆ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿಯೊಬ್ಬರನ್ನು ವಾಗ್ದಂಡನೆಗೆ ಶಿಫಾರಸು ಮಾಡಲಾಗಿತ್ತು. ಆದರೂ ಅವರು ಅಧಿಕಾರದಲ್ಲಿ ಮುಂದುವರೆದಿದ್ದರು ಅವರಿಗೆ ವರ್ಷಗಳ ಕಾಲ ಯಾವುದೇ ನ್ಯಾಯಾಂಗ ಕಾರ್ಯ ವಹಿಸಿರಲಿಲ್ಲ ಎಂದರು.

"ನಾನು ಸ್ವಲ್ಪ ಮಾತನಾಡಬಹುದೇ? ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯೊಬ್ಬರಿಗೆ ಇದೇ ರೀತಿಯ ಕಾರಣಗಳಿಗಾಗಿ ಯಾವುದೇ ಕೆಲಸ ವಹಿಸಿರಲಿಲ್ಲ, ಆದರೆ ಅವರು ನ್ಯಾಯಮೂರ್ತಿಯಾಗಿ ಮುಂದುವರೆದರು. ಯಾರಿಗಾದರೂ ಯಾವುದೇ ಸಮಸ್ಯೆ ಇದ್ದರೆ, ಅವರು ಆ ನ್ಯಾಯಮೂರ್ತಿಗಳೆದುರು ಹಾಜರಾಗುವಂತಿಲ್ಲ ಎಂದು ಎಲ್ಲರಿಗೂ ತಿಳಿಸಲಾಗಿತ್ತು" ಎಂದರು. ಮುಂದುವರೆದು, "ಅವರ (ಸೆಂಥಿಲ್ ಬಾಲಾಜಿ) ಸಚಿವ ಸ್ಥಾನದ ವಿಚಾರ ಒಬ್ಬ ಮನುಷ್ಯನಾಗಿ ಅವರಿಗೆ ಜಾಮೀನು ಪಡೆಯಲು ಅಡ್ಡಿಯಾಗಬಾರದು" ಎಂದು ಒತ್ತಿ ಹೇಳಿದರು.

ನ್ಯಾಯಮೂರ್ತಿ ಎನ್ ಆನಂದ್ ವೆಂಕಟೇಶ್

ತಮ್ಮ ಕಕ್ಷಿದಾರರ ಬಂಧನದ ಹಿಂದೆ ರಾಜಕೀಯ ಇದ್ದರೂ ಅವರು ಸರ್ಕಾರದ ಸಚಿವಾರಗಿ ಮುಂದುವರೆದಿದ್ದರೂ ಒಬ್ಬ ಸಾಮಾನ್ಯ ಮನುಷ್ಯನಾಗಿ ಜಾಮೀನು ಕೋರುತ್ತಿದ್ದಾರೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಈಗಾಗಲೇ ತನಿಖೆ ಪೂರ್ಣಗೊಳಿಸಿದ್ದು ಅಗತ್ಯವಿರುವ ಎಲ್ಲಾ ದಾಖಲೆಗಳು ಮತ್ತು ಪುರಾವೆಗಳನ್ನು ಪಡೆದಿರುವುದರಿಂದ ಬಾಲಾಜಿ ಅವರನ್ನು ಸೆರೆಯಲ್ಲಿಡುವ ಅಗತ್ಯವಿಲ್ಲ.‌ ಸೆಂಥಿಲ್ ತನಿಖೆಯ ಮೇಲೆ ಪ್ರಭಾವ ಬೀರುತ್ತಾರೆ ಎಂಬ ವಾದವನ್ನು ಇಡಿ ಮುಂದುವರೆಸುವುದೇ ಆದಲ್ಲಿ, ಉನ್ನತ ಹುದ್ದೆಯಲ್ಲಿರುವ ಯಾರಿಗೂ ಜಾಮೀನು ಪಡೆಯಲು ಸಾಧ್ಯವಾಗದು ಎಂದು ಸುಂದರಂ ಪ್ರತಿಪಾದಿಸಿದರು.

ವಾದ ಆಲಿಸಿದ ನ್ಯಾಯಾಲಯ ಮುಂದಿನ ವಿಚಾರಣೆ ನಡೆಯುವ ಫೆಬ್ರವರಿ 14 ರೊಳಗೆ ತನ್ನ ಉತ್ತರ ಸಲ್ಲಿಸುವಂತೆ ಇ ಡಿ ಪರ ವಾದ ಮಂಡಿಸುತ್ತಿರುವ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಎನ್ ರಮೇಶ್ ಅವರಿಗೆ ನಿರ್ದೇಶಿಸಿತು.