Justice Yashwant Varma 
ಸುದ್ದಿಗಳು

ನಗದು ದೊರೆತ ಆರೋಪ: ನ್ಯಾ. ವರ್ಮಾ ಅವರ ಮುಂದಿರುವ ಮಾರ್ಗಗಳು ಯಾವುವು?

ಸುಪ್ರೀಂ ಕೋರ್ಟ್ ರೂಪಿಸಿರುವ ಆಂತರಿಕ ಕಾರ್ಯವಿಧಾನ ಪ್ರಕ್ರಿಯೆ ಮತ್ತು ಹಿಂದಿನ ಕೆಲವು ನ್ಯಾಯಮೂರ್ತಿಗಳ ಪ್ರಕರಣಗಳಲ್ಲಿ ಆದ ಬೆಳವಣಿಗೆಗಳ ಚಿತ್ರಣ ಇಲ್ಲಿದೆ.

Bar & Bench

ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ಧದ ಭ್ರಷ್ಟಾಚಾರ ಆರೋಪಗಳ ತನಿಖೆಗಾಗಿ ರಚಿಸಲಾದ ಮೂವರು ನ್ಯಾಯಮೂರ್ತಿಗಳ ಆಂತರಿಕ ಸಮಿತಿ ಸಲ್ಲಿಸಿದ್ದ ವರದಿಯನ್ನು ಮೇ 8ರಂದು ಸಿಜೆಐ ಸಂಜೀವ್ ಖನ್ನಾ ಅವರು ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಯವರಿಗೆ ಸಲ್ಲಿಸಿದ್ದಾರೆ.

ವರ್ಮಾ ಅವರು ದೆಹಲಿ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಯಾಗಿದ್ದ ವೇಳೆ ದೆಹಲಿಯ ಅವರ ಅಧಿಕೃತ ನಿವಾಸದಲ್ಲಿ ಸಂಭವಿಸಿದ ಬೆಂಕಿ ಅವಘಡದ ಸಂದರ್ಭದಲ್ಲಿ ಅಪಾರ ಪ್ರಮಾಣದ ಸುಟ್ಟು ಕರಕಲಾದ ನಗದು ಪತ್ತೆಯಾಗಿತ್ತು. ಈ ಸಂಬಂಧ ಸಿಜೆಐ ಸಂಜೀವ್‌ ಖನ್ನಾ ಅವರು ನೇಮಿಸಿದ್ದ ಆಂತರಿಕ ಸಮಿತಿಯ ವರ್ಮಾ ಅವರ ಮೇಲೆ ಆರೋಪ ಹೊರಿಸಿತ್ತು. ಆದಾಗ್ಯೂ ನ್ಯಾಯಮೂರ್ತಿ ಹುದ್ದೆಗೆ ವರ್ಮಾ ಅವರು ರಾಜೀನಾಮೆ ನೀಡಲು ನಿರಾಕರಿಸಿದ್ದರು. ಇದರಿಂದಾಗಿ ವರ್ಮಾ ಅವರ ವಿರುದ್ಧದ ತನಿಖಾ ವರದಿಯನ್ನು ಸಿಜೆಐ ಖನ್ನಾ ಅವರು ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿ ಇಬ್ಬರಿಗೂ ಕಳುಹಿಸಿದ್ದರು.

ನ್ಯಾಯಮೂರ್ತಿ ವರ್ಮಾ ವಿರುದ್ಧ ಮುಂದಿನ ಕ್ರಮ ಕೈಗೊಳ್ಳುವ ವಿಚಾರ ಈಗ ಈಗ ಕೇಂದ್ರ ಸರ್ಕಾರದ ಅಂಗಳದಲ್ಲಿದೆ.

ನ್ಯಾಯಮೂರ್ತಿಗಳ ವಿರುದ್ಧ ಆಪಾದನೆಗಳು ಕೇಳಿಬಂದಂತಹ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ನಡೆಸುವ ಆಂತರಿಕ ಪ್ರಕ್ರಿಯೆಗಳ ಬಗ್ಗೆ ಹಾಗೂ ಈ ಹಿಂದಿನ ಕೆಲವು ನ್ಯಾಯಮೂರ್ತಿಗಳ ಪ್ರಕರಣಗಳ ಬಗ್ಗೆ ಈ ಲೇಖನ ಬೆಳಕು ಚೆಲ್ಲಲಿದೆ.

1995ರಲ್ಲಿ ಸಿ ರವಿಚಂದ್ರನ್ ಅಯ್ಯರ್ ವರ್ಸಸ್ ನ್ಯಾಯಮೂರ್ತಿ ಎ ಎಂ ಭಟ್ಟಾಚಾರ್ಜಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದ ಆಂತರಿಕ ಪ್ರಕ್ರಿಯಾ ವಿಧಾನವು ಚಾಲ್ತಿಗೆ ಬಂದಿತು.

ಬಾಂಬೆ ಹೈಕೋರ್ಟ್‌ನ ಆಗಿನ ಮುಖ್ಯ ನ್ಯಾಯಮೂರ್ತಿ ಭಟ್ಟಾಚಾರ್ಜಿ ಅವರು ಬರೆದ ಪುಸ್ತಕಕ್ಕೆ ವಿದೇಶಿ ಪ್ರಕಾಶಕರಿಂದ ಅನುಮಾನಾಸ್ಪದವೆನಿಸುವಷ್ಟು ಮೊತ್ತದ ರಾಯಧನ ಪಾವತಿಯಾದ ಹಿನ್ನೆಲೆಯಲ್ಲಿ ಅವರ ವಿರುದ್ಧ ಸ್ಥಳೀಯ ವಕೀಲ ಸಮುದಾಯ ಶಂಕೆಯನ್ನು ವ್ಯಕ್ತಪಡಿಸಿತು. ಈ ಹಣವನ್ನು ಬೇರೆ ಯಾವುದೋ ಕಾರಣಕ್ಕಾಗಿ ಪಾವತಿಸಲಾಗಿದೆ ಎನ್ನುವ ಅನುಮಾನ ವ್ಯಕ್ತವಾಯಿತು.

ಮಹಾರಾಷ್ಟ್ರ ಮತ್ತು ಗೋವಾದ ವಕೀಲರ ಪರಿಷತ್ತು, ಬಾಂಬೆ ವಕೀಲರ ಸಂಘ ​​ಮತ್ತು ಪಶ್ಚಿಮ ಭಾರತದ ವಕೀಲರ ಸಂಘಗಳು ನ್ಯಾಯಮೂರ್ತಿ ಭಟ್ಟಾಚಾರ್ಜಿ ಅವರ ರಾಜೀನಾಮೆಗೆ ಒತ್ತಾಯಿಸುತ್ತಿರುವುದನ್ನು ತಡೆಯುವಂತೆ ನಿರ್ದೇಶನ ಕೋರಿ ಈ ಮಹತ್ವದ ಪ್ರಕರಣದ ಅರ್ಜಿದಾರರಾದ ಅಯ್ಯರ್ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

"ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ಸಾರ್ವಜನಿಕ ನ್ಯಾಯದ ಹರಿವು ಶುದ್ಧ ಮತ್ತು ಕಳಂಕರಹಿತವಾಗಿ ಉಳಿಯಬೇಕು" ಎಂದು ಖಚಿತಪಡಿಸಿಕೊಳ್ಳಲು ಯಾವುದೇ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ನ್ಯಾಯಾಧೀಶರ ವಿರುದ್ಧ ಆಂತರಿಕ ತನಿಖಾ ವ್ಯವಸ್ಥೆಯೊಂದನ್ನು ರೂಪಿಸುವಂತೆ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಸೂಚಿಸಿತ್ತು.

ತರುವಾಯ, ಮೂವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಮತ್ತು ಇಬ್ಬರು ಹಿರಿಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಸಮಿತಿಯು ಆಂತರಿಕ ತನಿಖೆಗೆ ಔಪಚಾರಿಕ ಕಾರ್ಯವಿಧಾನವನ್ನು ರೂಪಿಸಿತು. ಈ ಸಮಿತಿಯು 1997ರಲ್ಲಿ ವರದಿಯನ್ನು ಸಲ್ಲಿಸಿತು. ಅದನ್ನು ಡಿಸೆಂಬರ್ 1999ರಲ್ಲಿ ಸುಪ್ರೀಂ ಕೋರ್ಟ್‌ನ ಪೂರ್ಣ ನ್ಯಾಯಾಲಯ ಅಂಗೀಕರಿಸಿತು.

2014ರಲ್ಲಿ ಸುಪ್ರೀಂ ಕೋರ್ಟ್, ತನಿಖಾ ಪ್ರಕ್ರಿಯೆಯು ಪಕ್ಷಪಾತ, ಪೂರ್ವಾಗ್ರಹ ಅಥವಾ ಪಕ್ಷಪಾತದ ವಿರುದ್ಧ ರಕ್ಷಣೆ ನೀಡುವಂತೆ ನೋಡಿಕೊಳ್ಳಲು, ನಿರ್ದಿಷ್ಟ ಪ್ರಕರಣದ ವಾಸ್ತವಾಂಶ ಮತ್ತು ಸನ್ನಿವೇಶಗಳಲ್ಲಿ ಆಂತರಿಕ ಕಾರ್ಯವಿಧಾನವನ್ನು ರೂಪಿಸುವ ಅಧಿಕಾರ ಸಿಜೆಐ ಅವರಿಗೆ ಇರುತ್ತದೆ ಎಂದು ತೀರ್ಪು ನೀಡಿತು.

ಆಂತರಿಕ ವಿಚಾರಣೆ ಹೇಗೆ ಕಾರ್ಯನಿರ್ವಹಿಸುತ್ತದೆ?

ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಗಂಭೀರ ದೂರು ದಾಖಲಾದಾಗ, ಆ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ಆ ನ್ಯಾಯಮೂರ್ತಿಗಳ ಪ್ರತಿಕ್ರಿಯೆ ಪಡೆಯಬೇಕಾಗುತ್ತದೆ. ಅದು ಆಳವಾದ ತನಿಖೆಗೆ ಅರ್ಹವಾಗಿದೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ತೀರ್ಮಾನಿಸಿದರೆ, ಅವರು ತಮ್ಮ ಹೇಳಿಕೆ, ದೂರು ಮತ್ತು ನ್ಯಾಯಮೂರ್ತಿಗಳ ಪ್ರತಿಕ್ರಿಯೆಯನ್ನು ಸಿಜೆಐಗೆ ರವಾನಿಸಬೇಕಾಗುತ್ತದೆ.

ಇದನ್ನು ಪರಿಗಣಿಸಿ, ಸಿಜೆಐ ಕೂಡ ಪ್ರಕರಣಕ್ಕೆ ಆಳವಾದ ತನಿಖೆ ಅಗತ್ಯವಿದೆ ಎಂದು ತೀರ್ಮಾನಕ್ಕೆ ಬಂದರೆ, ಅವರು ಇಬ್ಬರು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ಮತ್ತು ಒಬ್ಬ ಹೈಕೋರ್ಟ್ ನ್ಯಾಯಮೂರ್ತಿಗಳನ್ನೊಳಗೊಂಡ ತ್ರಿಸದಸ್ಯರ ಸಮಿತಿ ರಚಿಸುತ್ತಾರೆ.

ನಂತರ ಈ ಸಮಿತಿ ಆರೋಪಗಳ ಬಗ್ಗೆ ಸತ್ಯಶೋಧನಾ ವಿಚಾರಣೆ ನಡೆಸುತ್ತದೆ. ಆರೋಪಿತ ನ್ಯಾಯಮೂರ್ತಿಗಳು ಸಮಿತಿಯ ಮುಂದೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅರ್ಹರಾಗಿರುತ್ತಾರೆ. ಆದರೂ, ಯಾವುದೇ ಸಾಕ್ಷಿಗಳನ್ನು ಪರಿಶೀಲಿಸಲು ಅಥವಾ ಪಾಟಿ‌ ಸವಾಲಿಗೊಳಪಡಿಸಲು ಯಾವುದೇ ಹಕ್ಕನ್ನು‌ ಹೊಂದಿರುವುದಿಲ್ಲ. ನಿರ್ದಿಷ್ಟವಾಗಿ, ಸಮಿತಿ ತನ್ನದೇ ಆದ ಕಾರ್ಯವಿಧಾನ ರೂಪಿಸಬಹುದು.

ವಿಚಾರಣೆಯ ನಂತರ, ಸಮಿತಿಗೆ ಮೂರು ಆಯ್ಕೆಗಳಿವೆ. ನ್ಯಾಯಮೂರ್ತಿಗಳ ವಿರುದ್ಧದ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಅದು ಘೋಷಿಸಬಹುದು; ನ್ಯಾಯಮೂರ್ತಿಗಳ ಪದಚ್ಯುತಿಗೆ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಸಮರ್ಥನೀಯವಾದ ಗಂಭೀರ ದುಷ್ಕೃತ್ಯದ ಪುರಾವೆಗಳು ಸಾಕಷ್ಟಿವೆ ಎಂದು ತಿಳಿಸುವುದು ಅಥವಾ ಆರೋಪಗಳಲ್ಲಿ ಹುರುಳಿದೆ, ಆದರೆ ದುಷ್ಕೃತ್ಯವು ಅವರ ಪದಚ್ಯುತಿಗೆ ಕಾರಣವಾಗುವಷ್ಟು ಗಂಭೀರವಲ್ಲ ಎಂದು ತಿಳಿಸಬಹುದು.

ನ್ಯಾಯಮೂರ್ತಿಗಳ ವಿರುದ್ಧದ ಗಂಭೀರ ದುಷ್ಕೃತ್ಯದ ಆರೋಪಗಳಲ್ಲಿ ಸಮಿತಿಗೆ ಸತ್ಯಾಂಶ ಇರುವುದು ತಿಳಿದು ಬಂದ ನಂತರ ಸಿಜೆಐ ಅವರು ಆರೋಪಿತ ನ್ಯಾಯಮೂರ್ತಿಗಳಿಗೆ ಹುದ್ದೆಗೆ ರಾಜೀನಾಮೆ ನೀಡುವಂತೆ ಅಥವಾ ಸ್ವಯಂಪ್ರೇರಿತ ನಿವೃತ್ತಿ ಪಡೆಯಲು ಸಲಹೆ ನೀಡಬಹುದು.

ಆದರೆ ಒಂದೊಮ್ಮೆ ನ್ಯಾಯಮೂರ್ತಿಗಳು ರಾಜೀನಾಮೆ ನೀಡಲು ನಿರಾಕರಿಸಿದರೆ, ಸಿಜೆಐ ಅವರು ಭಾರತದ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳಿಗೆ ಆರೋಪಗಳ ಬಗ್ಗೆ ಮತ್ತು ಮಹಾಭಿಯೋಗ ವಾಗ್ದಂಡನೆ ಪ್ರಕ್ರಿಯೆ ಪ್ರಾರಂಭಿಸಲು ಆಂತರಿಕ ಸಮಿತಿ ನೀಡಿದ‌ ವರದಿ ಬಗ್ಗೆ ತಿಳಿಸಬೇಕಾಗುತ್ತದೆ.

ಮಹಾಭಿಯೋಗ ಮತ್ತು ವಜಾ

ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಹಾಭಿಯೋಗ (ವಾಗ್ದಂಡನೆ) ಪ್ರಕ್ರಿಯೆಗಳಿಲ್ಲದೆ ನ್ಯಾಯಮೂರ್ತಿಗಳನ್ನು ಪದಚ್ಯುತಗೊಳಿಸಲಾಗುವುದಿಲ್ಲ. ಸಂವಿಧಾನದ 124(4)ನೇ ವಿಧಿಯು ರಾಷ್ಟ್ರಪತಿಗಳ ಆದೇಶವಿಲ್ಲದೆ ಸುಪ್ರೀಂ ಕೋರ್ಟ್‌‌ ನ್ಯಾಯಮೂರ್ತಿಗಳನ್ನು ಅವರ ಹುದ್ದೆಯಿಂದ ಪದಚ್ಯುತಗೊಳಿಸಲಾಗುವುದಿಲ್ಲ ಎಂದು ಹೇಳುತ್ತದೆ.

ಸಂಸತ್ತಿನ ಪ್ರತಿಯೊಂದು ಸದನದಲ್ಲಿ ಹಾಜರಿದ್ದ ಸದಸ್ಯರಲ್ಲಿ ಕನಿಷ್ಠ ಮೂರನೇ ಎರಡರಷ್ಟು ಸದಸ್ಯರು ಮಹಾಭಿಯೋಗದ ನಿರ್ಣಯವನ್ನು ಬೆಂಬಲಿಸಿದ ನಂತರ ರಾಷ್ಟ್ರಪತಿಗಳು ಆರೋಪಿತ ನ್ಯಾಯಮೂರ್ತಿಗಳನ್ನು ಪದಚ್ಯುತಿಗೊಳಿಸಬಹುದು. 218ನೇ ವಿಧಿಯು ಈ ಷರತ್ತನ್ನು ಹೈಕೋರ್ಟ್ ನ್ಯಾಯಾಧೀಶರಿಗೂ ಅನ್ವಯಿಸುತ್ತದೆ.

ನ್ಯಾಯಮೂರ್ತಿಗಳ (ವಿಚಾರಣಾ) ಕಾಯಿದೆ, 1986ರ ಅಡಿಯಲ್ಲಿ , ರಾಜ್ಯಸಭೆಯ ಅಧ್ಯಕ್ಷರು ಅಥವಾ ಲೋಕಸಭಾ ಸ್ಪೀಕರ್, ನ್ಯಾಯಾಧೀಶರ ವಿರುದ್ಧ ಮಾನ್ಯವಾದ ಮಹಾಭಿಯೋಗದ ನೋಟಿಸ್ ಸ್ವೀಕರಿಸಿದ ನಂತರ, ಆರೋಪಗಳನ್ನು ತನಿಖೆ ಮಾಡಲು ನ್ಯಾಯಮೂರ್ತಿಗಳು ಮತ್ತು ನ್ಯಾಯಾಂಗ ಪರಿಣಿತರ ಸಮಿತಿಯನ್ನು ರಚಿಸಬೇಕು.

ಸೆಕ್ಷನ್ 3(9) ಪ್ರಕಾರ "ಸ್ಪೀಕರ್ ಅಥವಾ ಅಧ್ಯಕ್ಷರು ಅಥವಾ ಇಬ್ಬರೂ ಸೂಚಿಸಿದ ಪಕ್ಷದಲ್ಲಿ ಕೇಂದ್ರ ಸರ್ಕಾರವು ನ್ಯಾಯಮೂರ್ತಿಗಳ ವಿರುದ್ಧದ ಪ್ರಕರಣವನ್ನು ನಡೆಸಲು ವಕೀಲರನ್ನು ನೇಮಿಸಬಹುದು."

ನಂತರ ಈ ಸಮಿತಿಯ ವರದಿಯನ್ನು ಸಂಸತ್ತಿನಲ್ಲಿ ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

"ಸಂಸತ್ತಿನ ಪ್ರತಿಯೊಂದು ಸದನವು ವಿಧಿ 124ರ (4) ನೇ ಸೆಕ್ಷನ್ ಅನುಸಾರವಾಗಿ ಅಥವಾ ಸಂದರ್ಭಾನುಸಾರವಾಗಿ, ಸಂವಿಧಾನದ 218ನೇ ವಿಧಿಯೊಂದಿಗೆ ಸಹವಾಚನ ಮಾಡಿದ ಆ ಷರತ್ತಿಗೆ ಅನುಸಾರವಾಗಿ ಮಹಾಭಿಯೋಗದ ನಿರ್ಣಯವನ್ನು ಅಂಗೀಕರಿಸಿದರೆ, ನ್ಯಾಯಮೂರ್ತಿಗಳ ದುರ್ನಡತೆ ಅಥವಾ ಅಸಮರ್ಥತೆಯನ್ನು ಸಾಬೀತುಪಡಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ ಮತ್ತು ನಿರ್ಣಯವನ್ನು ಅಂಗೀಕರಿಸಿದ ಅದೇ ಅಧಿವೇಶನದಲ್ಲಿ ಸಂಸತ್ತಿನ ಪ್ರತಿಯೊಂದು ಸದನವು ರಾಷ್ಟ್ರಪತಿಗಳ ಮುಂದೆ ನಡಾವಳಿ ರೀತ್ಯಾ ಮಂಡಿಸಬೇಕು " ಎಂದು ಕಾಯಿದೆಯ ಸೆಕ್ಷನ್ 6(3) ಹೇಳುತ್ತದೆ. ಇದನ್ನು ಆಧರಿಸಿ ರಾಷ್ಟ್ರಪತಿಗಳು ಆರೋಪಿತ ನ್ಯಾಯಮೂರ್ತಿಯನ್ನು ಪದಚ್ಯುತಿಗೊಳಿಸಬೇಕು.

ಹಿಂದಿನ ಉದಾಹರಣೆಗಳು

ಭಾರತದ ಇತಿಹಾಸದಲ್ಲಿ ಯಾವುದೇ ನ್ಯಾಯಮೂರ್ತಿಗಳ ವಿರುದ್ಧ ಈವರೆಗೆ ವಾಗ್ದಂಡನೆ ವಿಧಿಸಿಲ್ಲ. ಹೆಚ್ಚಿನ ಕಳಂಕಿತ ನ್ಯಾಯಮೂರ್ತಿಗಳು ಸಂಸತ್ತಿನ ಮುಂದೆ ವಿಚಾರಣೆಗಳು ಮುಗಿಯುವ ಮೊದಲೇ ರಾಜೀನಾಮೆ ನೀಡಲು ಆಯ್ಕೆ ಮಾಡಿಕೊಂಡಿದ್ದಾರೆ.

ಅವರಲ್ಲಿ ಕೆಲವರು ನಿವೃತ್ತಿ ಪಡೆದು ಅಥವಾ ರಾಜೀನಾಮೆ ನೀಡಿದ ನಂತರವೇ ಕ್ರಿಮಿನಲ್ ಆರೋಪಗಳನ್ನು ಎದುರಿಸಿದ್ದಾರೆ. ಅವರಲ್ಲಿ ಒಬ್ಬರಾದ ನ್ಯಾಯಮೂರ್ತಿ ನಿರ್ಮಲ್ ಯಾದವ್ ಅವರನ್ನು 2008ರ ಪ್ರಕರಣಕ್ಕೆ‌‌ ಸಂಬಂಧಿಸಿದಂತೆ ಇತ್ತೀಚೆಗೆ ಖುಲಾಸೆಗೊಳಿಸಲಾಯಿತು . ನ್ಯಾಯಮೂರ್ತಿ ಶಮಿತ್ ಮುಖರ್ಜಿ , ನ್ಯಾಯಮೂರ್ತಿ ಎಸ್ ಎನ್ ಶುಕ್ಲಾ ಮತ್ತು ನ್ಯಾಯಮೂರ್ತಿ ಐ ಎಂ ಖುದ್ದುಸಿ ವಿರುದ್ಧದ ಪ್ರಕರಣಗಳು ಬಾಕಿ ಉಳಿದಿವೆ.

ನ್ಯಾಯಾಧೀಶರು ಆಂತರಿಕ ಸಮಿತಿ ತನಿಖೆ ಅಥವಾ ದೋಷಾರೋಪಣೆ ಪ್ರಕ್ರಿಯೆಯನ್ನು ಎದುರಿಸಿದ ಕನಿಷ್ಠ ನಾಲ್ಕು ಪ್ರಕರಣಗಳಿವೆ.

ರೂ 50 ಲಕ್ಷ ಮೌಲ್ಯದ ಕಾರ್ಪೆಟ್ ಮತ್ತು ಪೀಠೋಪಕರಣ ಖರೀದಿಗೆ ಸಂಬಂಧಿಸಿದಂತೆ ನಡೆದ ಅವ್ಯವಹಾರ ಪ್ರಕರಣದಲ್ಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದ ವೇಳೆ ವಿ ರಾಮಸ್ವಾಮಿ ಅವರು ತಪ್ಪಿತ್ಥರೆಂದು ವರದಿ ನೀಡಲಾಗಿತ್ತಾದರೂ ಸಂಸತ್ತಿನಲ್ಲಿ ವಾಗ್ದಂಡನೆಗೆ ಬಹುಮತ ದೊರೆತಿರಲಿಲ್ಲ. ನಂತರ ಸುಪ್ರೀಂ ಕೊರ್ಟ್ ನ್ಯಾಯಮೂರ್ತಿಯಾಗಿ ಅವರು ಪದೋನ್ನತಿ ಪಡೆದಿದ್ದರು.

ತೀರ್ಪು‌ ನೀಡಲು ಲಂಚ‌ ಪಡೆದ ಮತ್ತು ಅಕ್ರಮ ಆಸ್ತಿಗಳಿಸಿದ ಎರಡು ಆರೋಪಗಳು ಅಲಾಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದ ಎಸ್ ಎನ್ ಶುಕ್ಲಾ ಅವರ ವಿರುದ್ಧ ಇದ್ದವು. ಹೈಕೋರ್ಟ್ ನ್ಯಾಯಮೂರ್ತಿಯಾಗಿ ಅವರು ಮುಂದುವೆರದರಾದರೂ ನ್ಯಾಯಾಂಗ ಕೆಲಸಗಳನ್ನು ಅವರು ಮಾಡುವಂತಿರಲಿಲ್ಲ.

ಕರ್ನಾಟಕ‌‌ ಮತ್ತು ಒರಿಸ್ಸಾ ಹೈಕೋರ್ಟ್ ನ್ಯಾಯಮೂರ್ತಿಗಳಾಗಿದ್ದ ನ್ಯಾ‌. ಪಾಲ್ ಡೇನಿಯಲ್‌ ದಿನಕರನ್ ಅವರಿಗೆ ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ನೀಡಬೇಕು ಎಂಬ‌ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ನಡೆದಿದ್ದ ಭ್ರಷ್ಟಾಚಾರ ಮತ್ತು ಭೂಕಬಳಿಕೆಯ ಆರೋಪಗಳು ಅವರ ವಿರುದ್ಧ ಕೇಳಿಬಂದವು.

ರಾಜ್ಯಸಭೆಯ 75 ಸದಸ್ಯರು ಡಿಸೆಂಬರ್ 2009ರಲ್ಲಿ ಅವರನ್ನು ವಜಾಗೊಳಿಸಲು ಬಹುಮತ‌ದ ಬೆಂಬಲ ನೀಡಿದರು. ನ್ಯಾಯಮೂರ್ತಿಗಳ ತನಿಖಾ ಸಮಿತಿಯನ್ನೂ ರಚಿಸಲಾಯಿತು. ವಿಚಾರಣೆ ಬಾಕಿ ಇರುವಾಗಲೇ ನ್ಯಾಯಮೂರ್ತಿ ದಿನಕರನ್ ರಾಜೀನಾಮೆ ನೀಡಿದರು. ಪರಿಣಾಮ, ಅವರನ್ನು ಪದಚ್ಯುತಗೊಳಿಸುವ ಪ್ರಕ್ರಿಯೆಗಳು ನಿಷ್ಪ್ರಯೋಜಕವಾದವು.

ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದ ಸೌಮಿತ್ರ ಸೇನ್ ಅವರು ವಕೀಲಿಕೆ ನಡೆಸುತ್ತಿದ್ದ ವೇಳೆ ಹೈಕೋರ್ಟಿನ ಹಣ ದುರುಪಯೋಗ ಪಡಿಸಿಕೊಂಡರೆಂದು ಆರೋಪಿಸಲಾಗಿತ್ತು.

ಅಂದಿನ ಸಿಜೆಐ ನೇಮಿಸಿ‌ದ್ದ ಸಮಿತಿ, ರಾಜ್ಯಸಭಾ ತನಿಖಾ ಸಮಿತಿ ಅವರು ತಪ್ಪಿತಸ್ಥರೆಂದು ಘೋಷಿಸಿದವು. ರಾಜ್ಯಸಭೆಯಲ್ಲಿ ಅವರನ್ನು ವಾಗ್ದಂಡನೆಗೊಳಪಡಿಸುವ ನಿರ್ಣಯ ಅಂಗೀಕರಿಸಲಾಗಿತ್ತು.‌ ಆದರೆ ಲೋಕಸಭೆ ಅಂತಹ ನಿರ್ಣಯ ಅಂಗೀಕರಿಸುವ ಹೊತ್ತಿಗೆ ಅವರು ರಾಜೀನಾಮೆ ನೀಡಿದರು.