Justice SK Kaul and Justice Aravind Kumar  
ಸುದ್ದಿಗಳು

ಮಹಿಳಾ ಮೀಸಲಾತಿಯಿಂದ ನಾಗಾ ಸಮುದಾಯದ ಯಾವ ಆಚರಣೆಗೆ ಧಕ್ಕೆ ಬರುತ್ತದೆ? ನಾಗಾಲ್ಯಾಂಡ್ ಸರ್ಕಾರಕ್ಕೆ ಸುಪ್ರೀಂ ಪ್ರಶ್ನೆ

ಮಹಿಳಾ ಮೀಸಲಾತಿ ಒದಗಿಸಿ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸದಿರುವ ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿ ಸಲ್ಲಿಸಲಾಗಿರುವ ನ್ಯಾಯಾಂಗ ನಿಂದನೆ ಅರ್ಜಿಗೆ ಪ್ರತಿಕ್ರಿಯಿಸುವಂತೆ ಸರ್ಕಾರಕ್ಕೆ ಪೀಠ ಸೂಚಿಸಿದೆ.

Bar & Bench

ಮಹಿಳಾ ಮೀಸಲಾತಿ ಒದಗಿಸಿ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸದಿರುವ ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿ ಸಲ್ಲಿಸಲಾಗಿರುವ ನ್ಯಾಯಾಂಗ ನಿಂದನೆ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್‌ ಸೋಮವಾರ ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೊ ಮತ್ತು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಆದೇಶಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್‌ ಜಾರಿ ಮಾಡುವಾಗ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಅರವಿಂದ್ ಕುಮಾರ್ ಅವರನ್ನೊಳಗೊಂಡ ಪೀಠ ಮಹಿಳೆಯರಿಗೆ ಮೀಸಲಾತಿ ನೀಡುವುದು ನಾಗಾ ಸಮುದಾಯದ ಸಾಂಪ್ರದಾಯಿಕ ಹಕ್ಕುಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ನಾಗಾಲ್ಯಾಂಡ್‌ ಅಡ್ವೊಕೇಟ್‌ ಜನರಲ್‌ ಕೆ ಎನ್‌ ಬಾಲಗೋಪಾಲ್‌ ಅವರನ್ನು ಪ್ರಶ್ನಿಸಿತು.

"ಇದು ಸ್ವೀಕಾರಾರ್ಹವಲ್ಲ. ಮಹಿಳೆಯರಿಗೆ ಮೀಸಲಾತಿ ನೀಡಿದರೆ ನಾಗಾ ಸಮುದಾಯದ ಯಾವ ಆಚರಣೆಗಳ ಮೇಲೆ ಪರಿಣಾಮ ಉಂಟಾಗುತ್ತದೆ ಎಂದು ತಿಳಿಸಿ? ನೀವು ನ್ಯಾಯಾಂಗ ನಿಂದನೆ ಎಸಗುತ್ತಿದ್ದೀರಿ" ಎಂದು ನ್ಯಾಯಮೂರ್ತಿ ಕೌಲ್ ಹೇಳಿದರು.

ಮೀಸಲಾತಿ ಸೌಲಭ್ಯದಿಂದ ದೇಶದ ಒಂದು ರಾಜ್ಯವನ್ನು ಹೊರಗಿಡುವುದಕ್ಕೆ ಅನುಮತಿಸಲು ಸಾಧ್ಯವಿಲ್ಲ ಎಂದು ನ್ಯಾ. ಕೌಲ್‌ ಹೇಳಿದರು.

"ಇಲ್ಲಿ ನಮ್ಮ ವೈಯಕ್ತಿಕವಾದುದೇನೂ ಇಲ್ಲ. ಆದರೆ ಹೀಗೆ ಮಾಡಲು ಸಾಧ್ಯವಿಲ್ಲ. ದೇಶದ ಒಂದು ಭಾಗವನ್ನು ಸಾಂವಿಧಾನಿಕ ಸ್ವರೂಪದಿಂದ ಹೊರಗಿಡಲು ಸಾಧ್ಯವಿಲ್ಲ. ಆದರೆ ಇಲ್ಲಿ ಅಂತಹ ನಡೆ ಮೇಲ್ನೋಟಕ್ಕೆ ನಮಗೆ ಕಂಡುಬರುತ್ತಿದೆ" ಎಂದು ನ್ಯಾ. ಕೌಲ್ ತಿಳಿಸಿದರು.

ಸುಪ್ರೀಂ ಕೋರ್ಟ್ ಆದೇಶದಂತೆ ಮಹಿಳೆಯರಿಗೆ  ಶೇ 33ರಷ್ಟು ಮೀಸಲಾತಿಯೊಂದಿಗೆ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುವುದನ್ನು ರದ್ದುಗೊಳಿಸಿದ್ದ ನಾಗಾಲ್ಯಾಂಡ್‌ ಸರ್ಕಾರದ ನಿರ್ಧಾರಕ್ಕೆ ಸರ್ವೋಚ್ಚ ನ್ಯಾಯಾಲಯ ಈ ತಿಂಗಳ ಆರಂಭದಲ್ಲಿ ತಡೆ ನೀಡಿತ್ತು.

ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ಒದಗಿಸುವ ಸಂವಿಧಾನದ ಭಾಗ IX-ಎ ಜಾರಿಯಾಗುವುದನ್ನು ತಪ್ಪಿಸುವಂತೆ ಸೆಪ್ಟಂಬರ್ 22, 2012 ರಂದು ನಾಗಾಲ್ಯಾಂಡ್‌ ರಾಜ್ಯ ವಿಧಾನಸಭೆ ಅಂಗೀಕರಿಸಿದ ನಿರ್ಣಯ ಪ್ರಶ್ನಿಸಿ ಸಾಮಾಜಿಕ ಹೋರಾಟಗಾರ ರೋಸ್ಮೆರಿ ಜುವಿಚು ಮತ್ತು ಪೀಪಲ್‌ ಯೂನಿಯನ್‌ ಫಾರ್‌ ಸಿವಿಲ್‌ ಲಿಬರ್ಟೀಸ್ (ಪಿಯುಸಿಎಲ್‌) ಅರ್ಜಿ ಸಲ್ಲಿಸಿವೆ. ನಿರ್ಣಯವನ್ನು ನಾಗಾಲ್ಯಾಂಡ್‌ ವಿಧಾನಸಭೆ 2016 ರಲ್ಲಿ, ಹಿಂಪಡೆದಿದ್ದರೂ ಇನ್ನೂ ಮೀಸಲಾತಿ ಜಾರಿಗೊಳಿಸಿರಲಿಲ್ಲ.