<div class="paragraphs"><p>NHAI and Rouse Avenue Court</p></div>

NHAI and Rouse Avenue Court

 
ಸುದ್ದಿಗಳು

ಲಾಕರ್‌ನಲ್ಲಿ ಲಕ್ಷಾಂತರ ಹಣ ಇರಿಸಿ ಎಂತಹ ರಾಷ್ಟ್ರ ನಿರ್ಮಾಣ ಮಾಡುತ್ತೀರಿ? ಅಧಿಕಾರಿಗೆ ದೆಹಲಿ ನ್ಯಾಯಾಲಯ ಛೀಮಾರಿ

Bar & Bench

ಭ್ರಷ್ಟಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಅಧಿಕಾರಿಯ ಜಾಮೀನು ಅರ್ಜಿ ತಿರಸ್ಕರಿಸಿದ ದೆಹಲಿ ನ್ಯಾಯಾಲಯವೊಂದು "ತಮ್ಮ ಲಾಕರ್‌ಗಳಲ್ಲಿ ಲಕ್ಷಾಂತರ ರೂಪಾಯಿ ಇರಿಸಿಕೊಂಡು ಎಂತಹ ರಾಷ್ಟ್ರ ನಿರ್ಮಾಣ ಮಾಡುತ್ತೀರಿ?" ಎಂದು ಅಸಮಾಧಾನ ವ್ಯಕ್ತಪಡಿಸಿತು. [ಸಿಬಿಐ ಮತ್ತು ಅಕಿಲ್‌ ಅಹಮದ್‌ ಮತ್ತಿತರರ ನಡುವಣ ಪ್ರಕರಣ].

“ಹಮ್ ಸಡಕ್ ಕಾ ನಿರ್ಮಾಣ್ ಹೀ ನಹೀ ಕರ್ತೇ, ರಾಷ್ಟ್ರ್ ಕಾ ನಿರ್ಮಾಣ್ ಕರ್ತೇ ಹೈ” (ನಾವು ಕೇವಲ ರಸ್ತೆ ನಿರ್ಮಿಸುವುದಿಲ್ಲ, ರಾಷ್ಟ್ರವನ್ನು ನಿರ್ಮಿಸುತ್ತೇವೆ) ಎಂಬ ಎನ್‌ಎಚ್‌ಎಐ ಧ್ಯೇಯವಾಕ್ಯ ಗಮನಿಸಿದ ರೋಸ್‌ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ವಿನೋದ್ ಯಾದವ್ ಅವರು “ತಮ್ಮ ಲಾಕರ್‌ಗಳಲ್ಲಿ ಲಕ್ಷಾಂತರ ರೂಪಾಯಿ ಹಣ ಇರಿಸಿಕೊಂಡು ಅದೆಂತಹ ರಾಷ್ಟ್ರ ನಿರ್ಮಾಣ ಮಾಡುತ್ತೀರಿ. ಇದನ್ನು ಅರ್ಥ ಮಾಡಿಕೊಳ್ಳಲು ಸೋಲುತ್ತಿದ್ದೇನೆ. ಸರ್ಕಾರದ ಮೇಲಿನ ನಂಬಿಕೆಯನ್ನು ಭ್ರಷ್ಟಾಚಾರ ಕುಗ್ಗಿಸುತ್ತದೆ ಮತ್ತು ಸಾಮಾಜಿಕ ಒಪ್ಪಂದವನ್ನು (ಜನರ ಮತ್ತು ಸರ್ಕಾರದ ನಡುವಿನ ಒಪ್ಪಂದ) ದುರ್ಬಲಗೊಳಿಸುತ್ತದೆ. ಇದು ಜಗತ್ತಿನೆಲ್ಲೆಡೆ ಆತಂಕಕ್ಕೆ ಕಾರಣವಾಗಿದೆ. ಆದರೆ ವಿಶೇಷವಾಗಿ ಅನಿಶ್ಚಿತತೆ ಮತ್ತು ಹಿಂಸಾಚಾರದ ಸಂದರ್ಭಗಳಲ್ಲಿ, ಅಸಮಾನತೆ ಮತ್ತು ಅತೃಪ್ತಿಗಳಿಗೆ ಭ್ರಷ್ಟಾಚಾರ ಇಂಧನವಾಗುತ್ತದೆ ಮತ್ತು ಅವುಗಳನ್ನು ಶಾಶ್ವತವಾಗಿಸುವ ಮೂಲಕ ಅನಿಶ್ಚಿತತೆ, ಹಿಂಸಾತ್ಮಕ ಉಗ್ರವಾದ ಮತ್ತು ಸಂಘರ್ಷಕ್ಕೆ ಕಾರಣವಾಗುತ್ತದೆ. ಭ್ರಷ್ಟಾಚಾರ ಬಂಡವಾಳ ಹೂಡಿಕೆಗೆ ಅಡ್ಡಿಪಡಿಸುತ್ತದೆ. ಅಭಿವೃದ್ಧಿ ಮತ್ತು ಉದ್ಯೋಗಗಳ ಮೇಲೆ ಪರಿಣಾಮ ಬೀರುತ್ತದೆ” ಎಂದು ಅಭಿಪ್ರಾಯಪಟ್ಟರು.

ಭ್ರಷ್ಟಾಚಾರ ಶಿಕ್ಷಾರ್ಹ ಅಪರಾಧ ಮಾತ್ರವಲ್ಲ, ಮಾನವ ಹಕ್ಕುಗಳನ್ನು ಅದು ದುರ್ಬಲಗೊಳಿಸುತ್ತದೆ, ಅವುಗಳನ್ನು ಪರೋಕ್ಷವಾಗಿ ಉಲ್ಲಂಘಿಸುತ್ತದೆ. ವ್ಯವಸ್ಥಿತ ಭ್ರಷ್ಟಾಚಾರ ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು ಅದು ವ್ಯವಸ್ಥಿತ ಆರ್ಥಿಕ ಅಪರಾಧಕ್ಕೆ ನಾಂದಿ ಹಾಡುತ್ತದೆ ಎಂದು ಕೂಡ ನ್ಯಾಯಾಧೀಶರು ಹೇಳಿದರು.

ಆರೋಪಿ ಅಕಿಲ್‌ ಅಹಮದ್‌ ಐ ಫೋನ್‌ ಪಾಸ್‌ವರ್ಡ್‌ ಕೂಡ ಬಹಿರಂಗಪಡಿಸದೇ ಇರುವುದರಿಂದ ಅವರು ಜಾಮೀನಿಗೆ ಅರ್ಹರಲ್ಲ ಎಂದು ನ್ಯಾಯಾಲಯ ಇದೇ ವೇಳೆ ತಿಳಿಸಿತು.