Karnataka High Court 
ಸುದ್ದಿಗಳು

ವಿದ್ಯುತ್‌ ಶುಲ್ಕ ಪಾವತಿ ವಿನಾಯಿತಿ ಕೋರಿದ್ದ ತುಮಕೂರು ವಕೀಲರ ಸಂಘದ ಮನವಿ ವಜಾ ಮಾಡಿದ ಹೈಕೋರ್ಟ್‌

ಸರ್ಕಾರ ಸೌಕರ್ಯ ಕಲ್ಪಿಸಿಕೊಡಬೇಕು. ಹಾಗೆಂದು, ಕಟ್ಟಡ ನಿರ್ಮಿಸಿಕೊಡಲಾಗಿದೆ ಅಂದ ಮಾತ್ರಕ್ಕೆ ವಿದ್ಯುತ್‌ ಶುಲ್ಕವನ್ನೂ ಸರ್ಕಾರ ಭರಿಸಬೇಕು ಎಂದಲ್ಲ. ನೀವು ವಿದ್ಯುತ್‌ ಬಳಕೆ ಮಾಡುತ್ತಿರುವುದರಿಂದ ನೀವು ಶುಲ್ಕ ಪಾವತಿಸಬೇಕು ಎಂದ ಪೀಠ.

Siddesh M S

“ಹೈಕೋರ್ಟ್‌ ವಿದ್ಯುತ್‌ ಬಳಿಸಿದರೆ ಹೈಕೋರ್ಟ್‌ ವಿದ್ಯುತ್‌ ಶುಲ್ಕ ಪಾವತಿಸುತ್ತದೆಯೇ ವಿನಾ ಸರ್ಕಾರವಲ್ಲ. ಹೈಕೋರ್ಟ್‌ಗೆ ಅನುದಾನ ಸಿಗುತ್ತದೆ. ನೀವು ಅನುದಾನ ಪಡೆದು ವಿದ್ಯುತ್‌ ಶುಲ್ಕ ಪಾವತಿಸಬಹುದು. ಅದರ ಹೊರತಾಗಿ ವಿದ್ಯುತ್‌ ಶುಲ್ಕ ಪಾವತಿಸುವುದರಿಂದ ವಿನಾಯಿತಿ ಕೋರಲು ನಿಮಗೆ ಯಾವ ಹಕ್ಕಿದೆ” ಎಂದು ಮೌಖಿಕವಾಗಿ ಪ್ರಶ್ನಿಸಿರುವ ಕರ್ನಾಟಕ ಹೈಕೋರ್ಟ್‌, ಈ ಸಂಬಂಧ ತುಮಕೂರು ಜಿಲ್ಲಾ ವಕೀಲರ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ಈಚೆಗೆ ವಜಾ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಸುಜಾತಾ ಅವರ ನೇತೃತ್ವದ ವಿಶೇಷ ವಿಭಾಗೀಯ ಪೀಠವು ಪ್ರಕರಣದ ವಿಚಾರಣೆ ನಡೆಸಿತ್ತು.

ತುಮಕೂರು ಜಿಲ್ಲಾ ವಕೀಲರ ಸಂಘವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ವಿವೇಕ್‌ ರೆಡ್ಡಿ ಅವರು “ವಕೀಲರ ಸಂಘಕ್ಕೆ ಕಟ್ಟಡವನ್ನು ಸರ್ಕಾರ ಕಟ್ಟಿಸಿಕೊಟ್ಟಿದೆ. ಹೀಗಾಗಿ, ವಿದ್ಯುತ್‌ ಶುಲ್ಕ ಪಾವತಿಯ ಕುರಿತು ಸರ್ಕಾರ ಖಾತರಿಪಡಿಸಬೇಕು. ವಕೀಲರು ನ್ಯಾಯಾಲಯದ ಅಧಿಕಾರಿಗಳು” ಎಂದರು.

ಆಗ ಮಧ್ಯಪ್ರವೇಶಿಸಿದ ಪೀಠವು, “ಸರ್ಕಾರ ಸೌಕರ್ಯ ಕಲ್ಪಿಸಿಕೊಡಬೇಕು. ಹಾಗೆಂದು, ಕಟ್ಟಡ ನಿರ್ಮಿಸಿಕೊಡಲಾಗಿದೆ. ಹಾಗೆಂದು ವಿದ್ಯುತ್‌ ಶುಲ್ಕವನ್ನೂ ಸರ್ಕಾರವೇ ಭರಿಸಬೇಕು ಎಂದುಲ್ಲ. ನೀವು ವಿದ್ಯುತ್‌ ಬಳಕೆ ಮಾಡುತ್ತಿರುವುದರಿಂದ ನೀವು ಶುಲ್ಕ ಪಾವತಿಸಬೇಕು. ಎಲ್ಲಾ ಜನರ ಜವಾಬ್ದಾರಿ ಸರ್ಕಾರದ ಮೇಲಿದೆ. ವಕೀಲರಿಗೆ ಮಾತ್ರ ವಿನಾಯತಿ ಏಕೆ” ಎಂದು ಪ್ರಶ್ನಿಸಿತು.

“ಹೈಕೋರ್ಟ್‌ ಸಹ ವಿದ್ಯುತ್‌ ಶುಲ್ಕ ಪಾವತಿಸುತ್ತದೆ. ನಮಗೆ ವಿದ್ಯುತ್‌ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿಲ್ಲ. ಹೈಕೋರ್ಟ್‌ ಪಡೆಯುವ ಅನುದಾನದಿಂದ ವಿದ್ಯುತ್‌ ಶುಲ್ಕ ಪಾವತಿಸಲಾಗುತ್ತದೆ. ಸರ್ಕಾರದ ನಿವಾಸಗಳಲ್ಲಿ ಉಳಿದುಕೊಳ್ಳುವ ನ್ಯಾಯಮೂರ್ತಿಗಳಾದ ನಾವೂ ಸಹ ವಿದ್ಯುತ್‌ ಶುಲ್ಕ ಪಾವತಿಸುತ್ತೇವೆ” ಎಂದರು.

ಆಗ ವಿವೇಕ್‌ ರೆಡ್ಡಿ ಅವರು “ನಮಗೆ ಸರ್ಕಾರದಿಂದ ಯಾವುದೇ ಅನುದಾನ ಸಿಗುವುದಿಲ್ಲ” ಎಂದರು. ಆಗ ನ್ಯಾಯಾಲಯವು “ಅದು ನಿಮ್ಮ ಸಮಸ್ಯೆ. ಸರ್ಕಾರದಿಂದ ಅನುದಾನ ಪಡೆದು, ನೀವು ವಿದ್ಯುತ್‌ ಶುಲ್ಕ ಪಾವತಿಸಿ. ಆದರೆ, ವಿದ್ಯುತ್‌ ಶುಲ್ಕ ಪಾತಿಸುವುದಿಲ್ಲ ಎಂದು ಹೇಳಲಾಗದು” ಎಂದಿತು.

ಬೇಸಿಗೆ ರಜೆಗೂ ಮುನ್ನ ಇದು ಕೊನೆಯ ದಿನವಾದ್ದರಿಂದ ಇಂಥ ಮನವಿಗಳು ವಿಚಾರಣೆಗೆ ಬರುವುದು ಸಹಜ ಎಂದು ಪೀಠ ಹೇಳಿತು. ಆಗ ವಿವೇಕ್‌ ರೆಡ್ಡಿ ಅವರು “ನಾವು ಸಹ ಸಾರ್ವಜನಿಕರ ಸೇವೆ” ಮಾಡುತ್ತೇವೆ ಎಂದರು. ಅಂತಿಮವಾಗಿ ಪೀಠವು ನಿಮ್ಮ ವಾದವನ್ನು ನಾವು ಆಲಿಸಿದ್ದೇವೆ. ಈಗ ಆದೇಶ ಮಾಡುತ್ತೇವೆ ಎಂದು ಹೇಳಿ, ಮನವಿ ವಜಾ ಮಾಡಿತು.

Tumkur District Advocates Association Versus State of Karnataka.pdf
Preview