ಸುದ್ದಿಗಳು

[ಡಿಸಿಎಂ ಪರಮೇಶ್ವರ್‌ ಲವ್‌ ಸ್ಟೋರಿ ಪ್ರಕರಣ] ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಏನು ಪಾಪ ಮಾಡಿದ್ದಾರೆ: ಹೈಕೋರ್ಟ್‌ ಕಿಡಿ

“ನಿಮ್ಮ ಮನೆಯ ಹೆಣ್ಣು ಮಕ್ಕಳಿಗೆ ಹೀಗೆ ಮಾತನಾಡಿದರೆ ಸುಮ್ನೆ ಇರುತ್ತೀರಾ? ನಿಮಗೆ ಮಾತ್ರ ಸಂವಿಧಾನದ 21ನೇ ವಿಧಿ ಇರುವುದೇ? ಅವರಿಗೆ ಇಲ್ಲವೇ? ಮಾಡೋದಕ್ಕೆ ಬೇರೆ ಕೆಲಸ ಇಲ್ಲವೇ?” ಎಂದು ಅರ್ಜಿದಾರರನ್ನು ತರಾಟೆಗೆ ತೆಗದುಕೊಂಡ ನ್ಯಾಯಾಲಯ.

Bar & Bench

ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್‌ ಅವರು ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಅವರನ್ನು ಲವ್‌ ಮಾಡುತ್ತಿದ್ದಾರೆ ಎಂಬರ್ಥದ “ಡಿಸಿಎಂ ಪರಮೇಶ್ವರ್‌ ಲವ್‌ ಸ್ಟೋರಿ” ತಲೆಬರಹದ ವಿಡಿಯೊ ಸ್ಟೋರಿಯನ್ನು ಡಿಟಿಕ್ಟಿವ್‌ ಲೆಜೆಂಡ್‌ ಯೂಟ್ಯೂಬ್‌ ಚಾನಲ್‌ನಲ್ಲಿ ಪ್ರಸಾರ ಮಾಡಿದ ಆರೋಪ ಮೇಲೆ ತುಮಕೂರಿನ ಸ್ಥಳೀಯ ಚಾನಲ್‌ನ ಇಬ್ಬರ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ ಸೋಮವಾರ ನಿರಾಕರಿಸಿದೆ.

ಪ್ರಜಾಶಕ್ತಿ ಚಾನಲ್‌ನ ವ್ಯವಸ್ಥಾಪಕ ನಿರ್ದೇಶಕ ಶಬ್ಬೀರ್‌ ಪಾಷಾ ಮತ್ತು ಚಾನಲ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿ ಕುಸುಮಾ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice V Srishananda

ವಿಚಾರಣೆಯ ಒಂದು ಹಂತದಲ್ಲಿ ಪೀಠವು ಮೊದಲನೇ ಆರೋಪಿ ಬ್ರಹ್ಮಾನಂದ ರೆಡ್ಡಿ ವಿರುದ್ಧ ಆರೋಪ ಮಾಡಲಾಗಿದೆ. ನಿಮಗೇಕೆ ಭಯ. ಕಾರ್ಯಕ್ರಮದಲ್ಲಿನ ಹಿನ್ನೆಲೆ ಧ್ವನಿ ನಿಮ್ಮದು. ಉಪಮುಖ್ಯಮಂತ್ರಿಯವರು ಡಿಸಿಯನ್ನು ಲವ್‌ ಮಾಡ್ತಿದಾರೆ ಎಂದಿರುವುದು ನೀವು. ನಿಮ್ಮ ಮನೆಯ ಹೆಣ್ಣು ಮಕ್ಕಳಿಗೆ ಹೀಗೆ ಮಾತನಾಡಿದರೆ ಸುಮ್ನೆ ಇರುತ್ತೀರಾ? ನಿಮಗೆ ಮಾತ್ರ ಸಂವಿಧಾನದ 21ನೇ ವಿಧಿ ಇರುವುದೇ? ಅವರಿಗೆ ಇಲ್ಲವೇ? ಮಾಡೋದಕ್ಕೆ ಬೇರೆ ಕೆಲಸ ಇಲ್ಲವೇ” ಎಂದು ಕಿಡಿಕಾರಿತು.

“ನಿಮ್ಮ ಧ್ವನಿಯನ್ನು ಸಂಗ್ರಹಿಸಿ, ಪರಿಶೀಲಿಸಿದ ಬಳಿಕ ನಿಮ್ಮನ್ನು ಬಂಧಿಸಿರುವುದು. ಬೆಳಿಗ್ಗೆಯಿಂದ ರಾತ್ರಿಯ ತನಕ ಕಂಡೋರ ಮನೆ ಹಾಳು ಮಾಡುತ್ತೀರಾ? ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳು ಇಲ್ಲವೇ? ಡಿಸಿಯಾಗಿರುವ ಹೆಣ್ಣು ಮಗಳನ್ನು ಮಂತ್ರಿಗಳ ಜೊತೆ (ಸಂಬಂಧ) ಕಟ್ಟಿದರೆ ಅವರಿಗೆ ಬೇಸರವಾಗುವುದಿಲ್ಲವೇ? ಅವರಿಗೆ ಮಕ್ಕಳಿಲ್ಲವೇ? ಸಂವಿಧಾನದ 21ನೇ ವಿಧಿ ಅವರಿಗೆ ಅನ್ವಯಿಸುವುದಿಲ್ಲವೇ? ಶಾಲೆಯಲ್ಲಿ ಮಗುವನ್ನು ನಿಮ್ಮ ಅಮ್ಮ ಮಿನಿಸ್ಟರ್‌ ಜೊತೆ ಹೀಗಂತೆ ಅಂದರೆ ಅವರಿಗೆ ಬೇಸರವಾಗುವುದಿಲ್ಲವೇ? ಘನತೆಯಿಂದ ಜೀವಿಸುವುದು ಬೇಡವೇ? ಒಬ್ಬರು ಜಿಲ್ಲಾಧಿಕಾರಿಯ ಮೇಲೆ ಹೀಗೆ ಹೇಳುತ್ತೀರಲ್ಲಾ ನಿಮಗೆ ಗೊತ್ತಾಗಬೇಡವೇ?” ಎಂದು ಆಕ್ರೋಶ ವ್ಯಕ್ತಪಡಿಸಿತು.

“ಒಂದೇ ಪ್ರಕರಣಕ್ಕೆ ಎರಡು ಪ್ರಕರಣ ದಾಖಲಿಸಿರುವ ಅಧಿಕಾರಿ ಮೋಷಂಡಿ. ಇನ್ನೊಬ್ಬರ ಮನೆ ಮುರಿಯುವ ಕೆಲಸ ಮಾಡಬೇಡಿ. ಎಲ್ಲರ ಮನೆಯ ಹೆಣ್ಣು ಮಕ್ಕಳು ಗೌರವಸ್ಥರು. ತನಿಖೆಯಾಗಲಿ. ಮೆಮೊ ಹಾಕಿ. ಒಂದನ್ನು ಇರ್ಥಪಡಿಸೋಣ, ಇನ್ನೊಂದನ್ನು ವಜಾ ಮಾಡಲಾಗುವುದು” ಎಂದಿತು.

“ಒಬ್ಬ ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೇ ಹೀಗೆ ಹೇಳಿದರೆ.. ನಾಳೆ ನಮಗೂ ಹೇಳ್ತಾರೆ. ಇಷ್ಟು ಮಂದಿ ಹೆಣ್ಣು ಮಕ್ಕಳು ನನ್ನ ಬಳಿ ಕೆಲಸ ಮಾಡುತ್ತಾರೆ. ಏನೋ ನಮ್ಮ ಚೇಂಬರ್‌ಗೆ ಹೆಣ್ಣು ಮಕ್ಕಳನ್ನೇ ಜಾಸ್ತಿ ಹಾಕ್ತಾರೆ ಕೆಲಸ ಮಾಡಲು.. ಅವರೆಲ್ಲರೂ ಕೆಲಸ ಮಾಡುತ್ತಾರೆ. ನಿಮಗೆ ಹೆಣ್ಣು ಮಕ್ಕಳು ಇರ್ತಾರೆ, ತಾಯಿ, ಹೆಂಡತಿ ಇರ್ತಾರೆ. ಎಲ್ಲರನ್ನೂ ಕಾಯುವುದು ನಮ್ಮ ಜವಾಬ್ದಾರಿ. ಹಾಗೆಲ್ಲಾ ಅವರಿವರ ಮೇಲೆಲ್ಲಾ ಹೇಳಬಾರದು. ಏನು ಪಾಪ ಮಾಡಿದ್ದಾರೆ ಡಿಸಿ? ಹೆಣ್ಣು ಮಗಳಾಗಿರುವುದೇ ತಪ್ಪೇ? ಮಿನಿಸ್ಟರ್‌ ಮೀಟಿಂಗ್‌ ಕರೆದರೆ ಹೋಗಬಾರದೇ? ಅಲ್ಲಿ ನಾಲ್ಕು ಮಾತನಾಡಿರಬಾರದೇ? ನಮ್ಮ ನೆಚ್ಚಿನ ಉಪಮುಖ್ಯಮಂತ್ರಿಗಳು ಇದನ್ನೆಲ್ಲಾ ಮಾಡಿಕೊಟ್ಟಿದ್ದಾರೆ ಎಂದು ಹೇಳಿರುತ್ತಾರೆ. ಅದಕ್ಕೇ ನೀವು ಲವ್‌ ಅಫೇರ್‌ ಎಂದರೆ ಹೇಗೆ?” ಎಂದು ಬೇಸರಿಸಿತು.

ಅರ್ಜಿದಾರರ ಪರ ವಕೀಲ ಮೊಹಮ್ಮದ್‌ ತಾಹೀರ್‌ ಅವರು “ಮೊದಲನೇ ಆರೋಪಿ ಬ್ರಹ್ಮಾನಂದ ರೆಡ್ಡಿಯ ವಿರುದ್ಧ ಆರೋಪವಿದೆ. ನಮ್ಮ ಮೇಲೆ ಯಾವುದೇ ಆರೋಪವಿಲ್ಲ” ಎಂದರು.

ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕ ಸೂರ್ಯ ಮುಕುಂದರಾಜ್‌ ಅವರನ್ನು ಕುರಿತು “ಒಂದೇ ವಿಚಾರಕ್ಕೆ ನಾಲ್ಕು ದೂರು ಏಕೆ ದಾಖಲಿಸುತ್ತೀರಿ? ಹೀಗಾಗಲೇ ಪ್ರಕರಣ ಆಗಿರುವುದರಿಂದ ಇನ್ನೊಂದು ದೂರನ್ನು ಸಾಕ್ಷಿಯಾಗಿ ಮಾಡಬೇಕಿತ್ತು. ಎಫ್‌ಐಆರ್‌ಗೆ ಬೆಲೆ ಇಲ್ಲವೇ? ಫಸ್ಟ್‌ ಇನ್ಪರ್ಮೇಶನ್‌ ಎಂದರೇನು? ಒಂದು ಘಟನೆಯ ಬಗ್ಗೆ ಐವತ್ತು ಜನ ಬಂದು ಹೇಳ್ತಾರೆ, ಮುಂದೆ ಬರೋರೆಲ್ಲರೂ ಸಾಕ್ಷಿಯಷ್ಟೆ. ಯಾಕೆ ಠಾಣಾಧಿಕಾರಿ ಅಯೋಗ್ಯ ಎಫ್‌ಐಆರ್‌ ಮಾಡಿದ್ದಾನೆ. ಜ್ಞಾನ ಇರಲಿಲ್ಲವೇ? ಇದೇ ನಿಮ್ಮ ಪೊಲೀಸಿಂಗ್?‌” ಎಂದು ಕಿಡಿಕಾರಿತು.

ಕೊರಟಗೆರೆ ಮತ್ತು ವಿಧಾನಸೌಧ ಠಾಣೆಯಲ್ಲಿ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಯಾವುದನ್ನು ಉಳಿಸಿಕೊಂಡು ತನಿಖೆ ಮುಂದುವರಿಸಲಾಗುತ್ತದೆ ಎಂಬುದರ ಸಂಬಂಧ ಮೆಮೊ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಸೆಪ್ಟೆಂಬರ್‌ 11ಕ್ಕೆ ಹೈಕೋರ್ಟ್‌ ಮುಂದೂಡಿತು.