Aryan Khan, NCB  
ಸುದ್ದಿಗಳು

ಕೇವಲ ವಾಟ್ಸಾಪ್ ಮಾತುಕತೆಯಿಂದ ಆರ್ಯನ್‌ಗೆ ಅಚಿತ್ ಮಾದಕವಸ್ತು ಸರಬರಾಜು ಮಾಡಿದ್ದಾರೆ ಎನ್ನಲಾಗದು: ಮುಂಬೈ ನ್ಯಾಯಾಲಯ

ಅಚಿತ್ ಮಾದಕವಸ್ತು ಸರಬರಾಜುದಾರ ಎಂದು ಎನ್‌ಸಿಬಿ ಹೇಳಿಕೊಂಡಿದ್ದರೂ, ಆತ ನಿಷಿದ್ಧ ವಸ್ತುಗಳ ಪೂರೈಕೆ ವ್ಯವಹಾರದಲ್ಲಿ ತೊಡಗಿದ್ದಾರೆ ಎಂದು ಸಾಬೀತುಪಡಿಸುವ ಸಾಕ್ಷ್ಯ ಒದಗಿಸಲು ವಿಫಲವಾಗಿದೆ ಎಂದ ನ್ಯಾಯಾಲಯ.

Bar & Bench

ಐಷಾರಾಮಿ ಹಡಗು ಮಾದಕವಸ್ತು ಪ್ರಕರಣದ ಪ್ರಧಾನ ಆರೋಪಿ ಆರ್ಯನ್‌ ಖಾನ್‌ ಹಾಗೂ ಮತ್ತೊಬ್ಬ ಸಹ ಆರೋಪಿ ಅರ್ಬಾಜ್‌ ಮರ್ಚೆಂಟ್‌ ಅವರಿಗೆ ಅಚಿತ್‌ ಕುಮಾರ್‌ ಮಾದಕ ವಸ್ತು ಸರಬರಾಜು ಮಾಡಿದ್ದಾರೆ ಎಂದು ನಿರ್ಣಯಿಸಲು ವಾಟ್ಸಾಪ್‌ ಮಾತುಕತೆಯೊಂದೇ ಆಧಾರವಾಗುವುದಿಲ್ಲ ಎಂದು ಮುಂಬೈ ನ್ಯಾಯಾಲಯ ಹೇಳಿದ್ದು ಅಚಿತ್‌ಗೆ ಜಾಮೀನು ನೀಡಿದೆ.

ಅಚಿತ್‌ ಸರಬರಾಜುದಾರ ಎಂದು ಎನ್‌ಸಿಬಿ ಹೇಳಿಕೊಂಡಿದ್ದರೂ, ಅರ್ಜಿದಾರರು ನಿಷಿದ್ಧ ವಸ್ತುಗಳ ಪೂರೈಕೆ ವ್ಯವಹಾರದಲ್ಲಿ ತೊಡಗಿದ್ದಾರೆ ಎಂದು ಸಾಬೀತುಪಡಿಸುವ ಸಾಕ್ಷ್ಯ ಒದಗಿಸಲು ವಿಫಲವಾಗಿದೆ ಎಂದು ವಿಶೇಷ ನ್ಯಾಯಾಧೀಶ ವಿ.ವಿ.ಪಾಟೀಲ್ ತಿಳಿಸಿದರು.

ವಾಟ್ಸಾಪ್‌ ಮಾತುಕತೆ ಹೊರತುಪಡಿಸಿ ಅಚಿತ್‌ ಆ ರೀತಿಯ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಸಾಬೀತುಪಡಿಸುವ ಬೇರಾವುದೇ ಪುರಾವೆಗಳನ್ನು ಅದು ಒದಗಿಸಿಲ್ಲ ಎಂದ ನ್ಯಾಯಾಲಯ ವಿವರಿಸಿದ್ದು ಪ್ರಧಾನ ಆರೋಪಿ ಖಾನ್‌ಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿದೆ ಎಂದು ಹೇಳಿದೆ.

"ಕೇವಲ ವಾಟ್ಸಾಪ್‌ ಮಾತುಕತೆ ಆಧಾರಿಸಿ, ಅರ್ಜಿದಾರರು ಆರೋಪಿ ನಂ.1 ಮತ್ತು 2ಗೆ ನಿಷಿದ್ಧ ವಸ್ತುಗಳನ್ನು ಪೂರೈಸುತ್ತಿದ್ದರು ಎಂದು ನಿರ್ಣಯಿಸಲಾಗುವುದಿಲ್ಲ. ಅರ್ಜಿದಾರ ವಾಟ್ಸಾಪ್‌ ಮಾತುಕತೆ ನಡೆಸಿರುವ ಆರೋಪಿ ನಂ.1ಗೆ ಗೌರವಾನ್ವಿತ ಹೈಕೋರ್ಟ್‌ ಜಾಮೀನು ನೀಡಿದೆ” ಎಂದು 14 ಪುಟಗಳ ಆದೇಶದಲ್ಲಿ ತಿಳಿಸಲಾಗಿದೆ.

ಅಕ್ಟೋಬರ್ 27, 2021 ರಂದು ಅವರ ಅರ್ಜಿಯ ಆದೇಶವನ್ನು ಕಾಯ್ದಿರಿಸಿದ್ದ ಎನ್‌ಡಿಪಿಎಸ್ ನ್ಯಾಯಾಲಯ ಶನಿವಾರ ಅಚಿತ್‌ಗೆ ಜಾಮೀನು ನೀಡಿದೆ.

ಅವರ ಪರವಾಗಿ ವಕೀಲ ಅಶ್ವಿನ್ ತೂಲ್, ಎನ್‌ಸಿಬಿ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅದ್ವೈತ್ ಸೇಥ್ನಾ ವಾದ ಮಂಡಿಸಿದ್ದರು. ಆರ್ಯನ್‌ ಮತ್ತು ಅರ್ಬಾಜ್‌ ಹಾಗೂ ರೂಪದರ್ಶಿ ಮೂನ್‌ಮೂನ್‌ ಧಮೇಚಗೆ ಬಾಂಬೆ ಹೈಕೋರ್ಟ್‌ ಜಾಮೀನು ನೀಡಿದ ಎರಡು ದಿನಗಳ ಬಳಿಕ ಅಚಿತ್‌ಗೆ ಮುಂಬೈ ನ್ಯಾಯಾಲಯದಿಂದ ಜಾಮೀನು ದೊರೆತಿದೆ.

ಎನ್‌ಸಿಬಿಯನ್ನು ಪ್ರತಿನಿಧಿಸಿದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅದ್ವೈತ್ ಸೇಠ್ನಾ ಅವರು, ಕುಮಾರ್ ವೈಯಕ್ತಿಕ ಬಳಕೆಗೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕಳ್ಳಸಾಗಣೆಗಳನ್ನು ಹೊಂದಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

ಅಚಿತ್‌ ಜೊತೆ ಪಿತೂರಿಯಲ್ಲಿ ಭಾಗಿಯಾಗಿದ್ದರು ಎನ್ನಲಾದ ಆರೋಪಿಗಳಿಗೆ ಹೈಕೋರ್ಟ್‌ ಜಾಮೀನು ನೀಡಿರುವುದರಿಂದ ಪಿತೂರಿ ಆರೋಪ ಅಚಿತ್‌ಗೆ ಅನ್ವಯವಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದ್ದು ಹೀಗಾಗಿ ಎನ್‌ಡಿಪಿಎಸ್‌ ಕಾಯಿದೆಯ ಸೆಕ್ಷನ್ 37 ಅನ್ವಯವಾಗದು ಎಂದು ತಿಳಿಸಿದೆ.