CJI SA Bobde 
ಸುದ್ದಿಗಳು

[ವಾಟ್ಸಾಪ್‌ ಪ್ರಕರಣ] ನೀವು ಟ್ರಿಲಿಯನ್‌ ಡಾಲರ್‌ ಕಂಪೆನಿಯಾಗಿದ್ದರೂ ಜನತೆ ಖಾಸಗಿತನಕ್ಕೆ ಬೆಲೆ ನೀಡುತ್ತಾರೆ: ಸುಪ್ರೀಂ

“ದತ್ತಾಂಶ ಹಂಚಿಕೆಯ ಬಗ್ಗೆ ಜನರಿಗೆ ತೀವ್ರ ಆತಂಕವಿದೆ” ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಪ್ರಕರಣದ ವಿಚಾರಣೆ ವೇಳೆ ಹೇಳಿದರು .

Bar & Bench

ವಾಟ್ಸಾಪ್‌ನ ನವೀಕೃತ ಗೌಪ್ಯತಾ ನೀತಿಯ ಬಗ್ಗೆ ಭಾರತೀಯ ಪ್ರಜೆಗಳಿಗೆ ಅಪಾರವಾದ ಆತಂಕವಿದೆ ಎಂದು ಸೋಮವಾರ ಸುಪ್ರೀಂ ಕೋರ್ಟ್‌ ಹೇಳಿದ್ದು, ಗೌಪ್ಯತಾ ನೀತಿ ಪ್ರಶ್ನಿಸಿ ಸಲ್ಲಿಸಲಾಗಿರುವ ಮನವಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ, ಫೇಸ್‌ಬುಕ್‌ ಮತ್ತು ವಾಟ್ಸಾಪ್‌ಗೆ ನೋಟಿಸ್‌ ಜಾರಿ ಮಾಡಿ ಪ್ರತಿಕ್ರಿಯಿಸುವಂತೆ ಸೂಚಿಸಿದೆ.

ಅಪಾರ ಸಂಪತ್ತು ಹೊಂದಿರುವ ಫೇಸ್‌ಬುಕ್‌ ಟೆಕ್‌ ದೈತ್ಯ ಕಂಪೆನಿಯಾಗಿರಬಹುದು. ಅದರೆ, ಜನರು ಹಣಕ್ಕಿಂತ ಖಾಸಗಿತನಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಾರೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎ ಎಸ್‌ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್‌ ಅವರಿದ್ದ ಪೀಠ ಹೇಳಿದೆ. ಪ್ರಕರಣ ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಿದೆ.

ವಾಟ್ಸಾಪ್‌ನ ನವೀಕೃತ ಗೌಪ್ಯತಾ ನೀತಿಯಿಂದಾಗಿ ಎದ್ದಿರುವ ಖಾಸಗಿತನದ ಪ್ರಶ್ನೆಗಳು ಮತ್ತು ಭಾರತದಲ್ಲಿ ದತ್ತಾಂಶ ಭದ್ರತೆಯ ಕುರಿತಾದ ಕಾನೂನು ಜಾರಿಯಲ್ಲಿ ಇಲ್ಲದಿರುವ ಕುರಿತು ಹಿರಿಯ ವಕೀಲ ಶ್ಯಾಮ್‌ ದಿವಾನ್‌ ಮಂಡಿಸಿದ ವಾದಕ್ಕೆ ಪೀಠವು ಮನ್ನಣೆ ನೀಡಿತು.

“ದಿವಾನ್‌ ಅವರ ವಾದದಿಂದ ನಾವು ಸಂತುಷ್ಟರಾಗಿದ್ದು, ನಮ್ಮ ಮಂದೆ ದತ್ತಾಂಶ ಭದ್ರತೆ ಕಾನೂನು ಜಾರಿಗೊಳಿಸುವ ಕುರಿತು ಪ್ರಸ್ತಾಪಿಸಲಾಗಿದೆ. ಈ ನೀತಿಯ ಅಡಿ ನೀವು ಭಾರತೀಯರ ದತ್ತಾಂಶ ಹಂಚಿಕೆ ಮಾಡುತ್ತಿದ್ದೀರಿ. ನೀವು ಎರಡು ಅಥವಾ ಮೂರು ಟ್ರಿಲಿಯನ್‌ ಡಾಲರ್ (ಎರಡು ಅಥವಾ ಮೂರು ಲಕ್ಷ ಕೋಟಿ ಡಾಲರ್) ಕಂಪೆನಿಯಾಗಿರಬಹುದು. ಆದರೆ, ಜನರು ಹಣಕ್ಕಿಂತ ತಮ್ಮ ಖಾಸಗಿತನಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ದತ್ತಾಂಶ ಹಂಚಿಕೆಯ ಕುರಿತು ಜನರಿಗೆ ಅಪಾರವಾದ ಆತಂಕವಿದೆ” ಎಂದು ಸಿಜೆಐ ಬೊಬ್ಡೆ ಹೇಳಿದ್ದಾರೆ.

ನವೀಕೃತ ಗೌಪ್ಯತಾ ನೀತಿಯು ಪಾಶ್ಚಿಮಾತ್ಯ ಬಳಕೆದಾರರಿಗೆ ಹೋಲಿಕೆ ಮಾಡಿದರೆ ಭಾರತೀಯ ಬಳಕೆದಾರರ ಖಾಸಗಿತನವನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರ ಪರ ವಕೀಲರ ದಿವಾನ್‌ ವಾದಿಸಿದರು.

ನವೀಕೃತ ಗೌಪ್ಯತಾ ನೀತಿಯಲ್ಲಿ ಬಳಕೆದಾರರ ದತ್ತಾಂಶದ ಜೊತೆ ರಾಜಿ ಮಾಡಿಕೊಳ್ಳಲಾಗುತ್ತದೆ ಎಂಬ ವಾದವನ್ನು ವಾಟ್ಸಾಪ್‌ ಪ್ರತಿನಿಧಿಸಿರುವ ಹಿರಿಯ ವಕೀಲ ಕಪಿಲ್‌ ಸಿಬಲ್‌ ಬಲವಾಗಿ ಅಲ್ಲಗಳೆದರು. “ಯೂರೋಪ್‌ನಲ್ಲಿ ಕಾನೂನು ಇರುವುದರಿಂದ ಅಲ್ಲಿ ಹೊರತುಪಡಿಸಿ 2021ರ ನೀತಿಯು ಎಲ್ಲೆಡೆ ಅನ್ವಯಿಸಲಿದೆ. ಭಾರತದಲ್ಲಿ ಕಾನೂನು ಜಾರಿಗೆ ಬಂದರೆ ಅದನ್ನು ನಾವು ಪಾಲಿಸಲಿದ್ದೇವೆ” ಎಂದು ಸಿಬಲ್‌ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠವು “ಹಾಗಾದರೆ ಪ್ರಮಾಣ ಪತ್ರದಲ್ಲಿ ಸಲ್ಲಿಸಿ” ಎಂದಿತು. “ನಾವು ವೈಯಕ್ತಿಕ ದತ್ತಾಂಶವನ್ನು ಸಂಗ್ರಹಿಸುವುದಿಲ್ಲ ಮತ್ತು ಅದನ್ನು ಹಂಚಿಕೊಳ್ಳುವುದಿಲ್ಲ ಎಂಬುದನ್ನು ಅಫಿಡವಿಟ್‌ನಲ್ಲಿ ಪ್ರಮಾಣೀಕರಿಸುತ್ತೇವೆ. ಇದೆಲ್ಲವೂ ಹಾದಿ ತಪ್ಪಿಸುವ ಪ್ರಯತ್ನ” ಎಂದು ಹಿರಿಯ ವಕೀಲ ಮುಕುಲ್‌ ರೋಹಟ್ಗಿ ಪೀಠಕ್ಕೆ ತಿಳಿಸಿದರು.

ನೀವು ಎರಡು ಅಥವಾ ಮೂರು ಟ್ರಿಲಿಯನ್‌ ಡಾಲರ್ (ಎರಡು ಅಥವಾ ಮೂರು ಲಕ್ಷ ಕೋಟಿ ಡಾಲರ್) ಕಂಪೆನಿಯಾಗಿರಬಹುದು. ಆದರೆ, ಜನರು ಹಣಕ್ಕಿಂತ ಹೆಚ್ಚಾಗಿ ತಮ್ಮ ಖಾಸಗಿತನಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ.
ಸುಪ್ರೀಂ ಕೋರ್ಟ್

‌ಭಾರತೀಯ ಬಳಕೆದಾರರಿಗೆ ಗೌಪ್ಯತಾ ಮಾನದಂಡಗಳನ್ನು ಕೆಳಗಿಳಿಸಬಾರದು. ಯೂರೋಪ್‌ ವ್ಯಾಪ್ತಿಯಲ್ಲಿ ಅನ್ವಯಿಸಲಾಗುವ ಗೌಪ್ಯತಾ ನೀತಿ ಮತ್ತು ಷರತ್ತುಗಳನ್ನೇ ಭಾರತೀಯರಿಗೂ ಅನ್ವಯಿಸಬೇಕು ಎಂದು ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯ ವಿಚಾರಣೆಯನ್ನು ಪೀಠವು ನಡೆಸಿತು.

ವಾಟ್ಸಾಪ್‌ 2016ರ ಬಳಕೆದಾರರ ನೀತಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿಲಾಗಿದ್ದು, ಅದು ಸಾಂವಿಧಾನಿಕ ಪೀಠದ ಮುಂದಿದೆ. ಈ ಮಧ್ಯೆ, ಕರ್ಮಣ್ಯ ಸಿಂಗ್‌ ಸರೀನ್‌ ಮತ್ತು ಶ್ರೇಯಾ ಸೇಥಿ ಎಂಬ ಇಬ್ಬರು ವಿದ್ಯಾರ್ಥಿಗಳು ಮನವಿ ಸಲ್ಲಿಸಿದ್ದಾರೆ. ನ್ಯಾಯಮೂರ್ತಿ ಬಿ ಎನ್‌ ಶ್ರೀಕೃಷ್ಣ ನೇತೃತ್ವದ ಸಮಿತಿಯು ದತ್ತಾಂಶ ರಕ್ಷಣಾ ಮಸೂದೆ ಸಿದ್ಧಪಡಿಸುತ್ತಿದೆ ಎಂಬ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಬಾಕಿ ಇಡಲಾಗಿದೆ.

ಈ ನಡುವೆ, 2021ರ ಜನವರಿ 4ರಂದು ವಾಟ್ಸಾಪ್‌ ತನ್ನ ಬಳಕೆದಾರರ ನೀತಿಯನ್ನು ನವೀಕರಿಸಿದೆ. ಈ ಹಿನ್ನೆಲೆಯಲ್ಲಿ 2021ರ ಜನವರಿ 5ರಂದು ಅರ್ಜಿದಾರರು ಹೊಸ ಅಫಿಡವಿಟ್‌ ಸಲ್ಲಿಸಿದ್ದು, ನವೀಕೃತ ಗೌಪ್ಯತಾ ನೀತಿಯ ಚಾಲನೆಗೆ ತಡೆ ನೀಡುವಂತೆ ಕೋರಿದ್ದಾರೆ.

“ಭಾರತೀಯ ಬಳಕೆದಾರರಿಗೆ ಗೌಪ್ಯತಾ ಮಾನದಂಡಗಳನ್ನು ಕುಗ್ಗಿಸಬಾರದು ಮತ್ತು ದತ್ತಾಂಶವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳದಂತೆ ನಿಯಂತ್ರಿಸಬೇಕು” ಎಂದು ಶ್ಯಾಮ್‌ ದಿವಾನ್‌ ಕೋರಿದರು.

ಇದೇ ತೆರನಾದ ಪ್ರಕರಣ ದೆಹಲಿ ಹೈಕೋರ್ಟ್‌ನಲ್ಲಿದ್ದು, ವಾಟ್ಸಾಪ್‌ ಹಿಂದಿನ ನೀತಿಗೆ ಸಂಬಂಧಿಸಿದಂತೆ ಸಾಂವಿಧಾನಿಕ ಪೀಠದ ಮುಂದೆ ವಿಚಾರಣೆಗೆ ಒಳಪಟ್ಟಿದೆ ಎಂದು ಸಿಬಲ್‌ ಹೇಳಿದರು. “ದೆಹಲಿ ಹೈಕೋರ್ಟ್‌ನಲ್ಲಿರುವ ಪ್ರಕರಣವನ್ನು ಇಲ್ಲಿಗೆ ತರಿಸಿಕೊಳ್ಳಬೇಕೆ ಅಥವಾ ಇಲ್ಲಿನ ಪ್ರಕರಣವನ್ನು ಅಲ್ಲಿಗೆ ವರ್ಗಾಯಿಸಬೇಕೆ ಎಂಬುದನ್ನು ನಾವು ಪರೀಶೀಲಿಸಲಿದ್ದೇವೆ. ನಾವು ನೋಟಿಸ್‌ ಜಾರಿಗೊಳಿಸಲಿದ್ದು ಅದಕ್ಕೆ ಪ್ರತಿಕ್ರಿಯಿಸಿ. ಸಾಂವಿಧಾನಿಕ ಪೀಠದಲ್ಲಿ ಈ ವಿಷಯ ನಮ್ಮ ಮುಂದೆ ಬಾಕಿ ಉಳಿದಿದೆಯೇ ಎಂದು ನಾವು ಪರಿಶೀಲಿಸಬೇಕಿದೆ” ಎಂದು ನ್ಯಾಯಾಲಯ ಹೇಳಿದೆ.