ಐಪಿಸಿ ಸೆಕ್ಷನ್ 300ರ ಅಡಿಯಲ್ಲಿ ಕೊಲೆ ಅಪರಾಧಗಳು ಮತ್ತು ಸೆಕ್ಷನ್ 307ರ ಅಡಿಯಲ್ಲಿ ಕೊಲೆ ಯತ್ನ ಪ್ರಕರಣಗಳ ನಡುವೆ ವ್ಯತ್ಯಾಸ ಗುರುತಿಸುವುದಕ್ಕಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ನ್ಯಾಯಾಲಯಗಳಿಗೆ ವಿವಿಧ ಮಾರ್ಗಸೂಚಿಗಳನ್ನು ಪ್ರಕಟಿಸಿದೆ [ಮಾಣಿಕ್ಲಾಲ್ ಸಾಹು ಮತ್ತು ಛತ್ತೀಸ್ಗಢ ಸರ್ಕಾರ ನಡುವಣ ಪ್ರಕರಣ].
ಹಲ್ಲೆಯ ನಂತರ ತಡವಾಗಿ ಸಾವನ್ನಪ್ಪಿದ ಪ್ರಕರಣಗಳಲ್ಲಿ ಐಪಿಸಿ ಸೆಕ್ಷನ್ 302 ಯಾವಾಗ ಅನ್ವಯಿಸಬೇಕು ಎಂಬುದರ ಕುರಿತು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರಿದ್ದ ಪೀಠ ಪ್ರಕಟಿಸಿರುವ ಮಾರ್ಗಸೂಚಿಗಳು ಇಂತಿವೆ:
ಗಾಯಮಾರಕವಾಗಿದ್ದರೆ ಮತ್ತು ಸಾವು ತರುವ ಉದ್ದೇಶದಿಂದ ಗಾಯ ಮಾಡಲಾಗಿದ್ದರೆ, ಸೆಪ್ಟಿಕ್ನಂತಹ ವೈದ್ಯಕೀಯ ತೊಡಕುಗಳು ಇನ್ನಿತರ ಬೆಳವಣಿಗೆಗಳಿಂದಾಗಿ ಸಾವು ಸಂಭವಿಸಿದರೂ ಕೂಡ, ಅದು ಐಪಿಸಿ ಸೆಕ್ಷನ್ 300ರ ಅಡಿಯಲ್ಲಿ ಕೊಲೆ ಎನಿಸಿಕೊಳ್ಳುತ್ತದೆ.
ಗಾಯದಿಂದಾಗಿಯೇ ಸಾವು ಸಂಭವಿಸಿದ್ದರೆ ಮತ್ತು ಗಾಯಗೊಳಿಸುವ ಉದ್ದೇಶ ಸಾವು ತರುವುದೇ ಆಗಿದ್ದರೆ ವೈದ್ಯಕೀಯ ಮತ್ತಿತರ ತೊಡಕುಗಳಿಂದಾಗಿ ಗಾಯಾಳು ನಂತರದಲ್ಲಿ ಮೃತಪಟ್ಟಿದ್ದರೂ ಅದು ಐಪಿಸಿ ಸೆಕ್ಷನ್ 300ರ ವ್ಯಾಪ್ತಿಗೆ ಬರಲಿದ್ದು ಆರೋಪಿ ಐಪಿಸಿ ಸೆಕ್ಷನ್ 302ರಅಡಿಯಲ್ಲಿ ಹೊಣೆಗಾರನಾಗುತ್ತಾನೆ.
ಗಾಯಗಳು ಜೀವಕ್ಕೆ ಅಪಾಯಕಾರಿಯಾಗಿದ್ದರೆ, ವೈದ್ಯಕೀಯ ಮತ್ತಿತರ ತೊಡಕುಗಳ ನಂತರ ಸಂಭವಿಸಿದ ಸಾವು ಕೂಡ ಐಪಿಸಿ ಸೆಕ್ಷನ್ 300ರ ನಾಲ್ಕನೇ ಅಂಗದ ಅಡಿಯಲ್ಲಿ ಬರಲಿದ್ದು ಆರೋಪಿ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಹೊಣೆಗಾರನಾಗಿರುತ್ತಾನೆ.
ಗಾಯಗಳ ತೀವ್ರತೆ ಮತ್ತು ಸ್ವರೂಪದಿಂದಾಗಿ ಮರಣ ಉಂಟಾಗಿದೆಯೇ ಎಂಬುದನ್ನು ನಿರ್ಧರಿಸುವುದು ಮುಖ್ಯವಾಗಿದ್ದು ಮರಣವನ್ನು ತಡೆಗಟ್ಟಲು ವೈದ್ಯಕೀಯ ಚಿಕಿತ್ಸೆಯಿಂದ ಸಾಧ್ಯವಿತ್ತೆ ಎಂಬುದು ಅಪ್ರಸ್ತುತ.
ವೈದ್ಯಕೀಯ ತೊಡಕಿನಂತಹ ಸಂಕೀರ್ಣತೆ ಉಂಟಾಗಿದ್ದರೆ, ಗಾಯಗಳ ನೇರ ಪರಿಣಾಮದಿಂದ ಮರಣ ಬಾರದಿದ್ದರೂ ದಾಳಿ ಮಾಡಿದವರೇ ನೇರ ಹೊಣೆಗಾರರಾಗುತ್ತಾರೆ.
ಮರಣ ಸಂಭವಿಸುವ ಸಾಧ್ಯತೆ ದೂರವೇ ಇದ್ದರೂ ಅದು ಸಂಭವಿಸುತ್ತದೆ ಎಂಬುದು ಖಚಿತವಾಗಿದ್ದಾಗ ಅದು ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ಕೃತ್ಯ ಕೊಲೆಗೆ ಸಮಾನವಾಗುತ್ತದೆ.
ಒಂದು ಗಾಯದಿಂದ ಸಾವು ಸಂಭವಿಸದಿದ್ದರೂ ಸಂಯೋಜಿತ ಗಾಯಗಳಿಂದಾಗಿ ಸಾವು ಸಂಭವಿಸಿದ್ದರೆ ಅದು ಕೊಲೆಯ ಉದ್ದೇಶವಿತ್ತು ಎಂದು ಹೇಳಲು ಸಾಕಾಗುತ್ತದೆ ಮತ್ತು ಸಾವು ಸಂಭವಿಸಿರುವುದಕ್ಕೆ ಸೂಕ್ತ ಕಾರಣವಾಗಬಹುದು.
ಮಧ್ಯಂತರ ಕಾರಣಗಳಿದ್ದರೂ ಕೂಡ, ಗಾಯಗಳು ಮರಣಕ್ಕೆ ಕಾರಣವಾಗುವಷ್ಟು ತೀವ್ರವಾಗಿದೆಯೆ ಅಥವಾ ಮರಣ ಉಂಟುಮಾಡಲು ಉದ್ದೇಶಿತವಾಗಿದೆಯೆ ಎಂಬುದರ ಮೇಲೆ ನ್ಯಾಯಾಲಯಗಳು ಗಮನ ಕೇಂದ್ರೀಕರಿಸಬೇಕು.
ವಿಚಾರಣಾ ನ್ಯಾಯಾಲಯ ನೀಡಿದ್ದ ಐಪಿಸಿ ಸೆಕ್ಷನ್ 302ರ (ಕೊಲೆಗೆ ಶಿಕ್ಷೆ) ಅಡಿ ವಿಧಿಸಲಾಗಿದ್ದ ಶಿಕ್ಷೆಯನ್ನು ಸೆಕ್ಷನ್ 307ರ (ಕೊಲೆಗೆ ಯತ್ನ) ಅಡಿಯ ಕೃತ್ಯವಾಗಿ ಮಾರ್ಪಡಿಸಿ ಛತ್ತೀಸ್ಗಢ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ಆಲಿಸಿದ ಸುಪ್ರೀಂ ಕೋರ್ಟ್ ಈ ಸೂಚನೆಗಳನ್ನು ನೀಡಿದೆ.
ಮೇಲ್ಮನವಿದಾರ ಇತರ ಮೂವರೊಂದಿಗೆ ಸೇರಿ ಸಂತ್ರಸ್ತನ ಮೇಲೆ ಹಲ್ಲೆ ನಡೆಸಿದ್ದ. ಸರಿಯಾದ ಚಿಕಿತ್ಸೆ ದೊರೆಯದೆ ಒಂಬತ್ತು ತಿಂಗಳ ನಂತರ ಸಂತ್ರಸ್ತ ಮೃತಪಟ್ಟಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದ ಹೈಕೋರ್ಟ್ ಐಪಿಸಿ ಸೆಕ್ಷನ್ 307ರ ಅಡಿಯಲ್ಲಿ ವಿಧಿಸಲಾಗಿದ್ದ ಶಿಕ್ಷೆಯನ್ನು ಮಾರ್ಪಡಿಸಿತ್ತು.
ಈ ಆದೇಶವನ್ನು ತಿರಸ್ಕರಿಸಿರುವ ಸುಪ್ರೀಂ ಕೋರ್ಟ್ ಸಾವು ವಿಳಂಬವಾಗಿರುವುದನ್ನು ಪರಿಣಾಮಗಳ ಸರಣಿ ತುಂಡಾಗಿದೆ ಎಂದು ಪರಿಗಣಿಸುವ ಮೂಲಕ ಹೈಕೋರ್ಟ್ ಭಾರೀ ತಪ್ಪು ಮಾಡಿದೆ ಎಂದು ಅಭಿಪ್ರಾಯಪಟ್ಟಿದೆ. ಅಂತೆಯೇ ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ವಿಚಾರಣಾ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ಎತ್ತಿಹಿಡಿದ ಅದು, ಅಪರಾಧವನ್ನು ಐಪಿಸಿ ಸೆಕ್ಷನ್ 307ಕ್ಕೆ ಹೈಕೋರ್ಟ್ ಮಾರ್ಪಡಿಸಿರುವುದು ಕಾನೂನುಬದ್ಧವಾಗಿ ಸಮರ್ಥನೀಯವಲ್ಲ ಎಂದು ತೀರ್ಪು ನೀಡಿತು.
\