ಸಂವಿಧಾನ ಪ್ರಸ್ತಾವನೆ ಭಾಗವನ್ನು ಸಿಎಂ ಸಿದ್ದರಾಮಯ್ಯ ಬೋಧಿಸಿದರು.
ಸಂವಿಧಾನ ಪ್ರಸ್ತಾವನೆ ಭಾಗವನ್ನು ಸಿಎಂ ಸಿದ್ದರಾಮಯ್ಯ ಬೋಧಿಸಿದರು.  
ಸುದ್ದಿಗಳು

ಸಂವಿಧಾನದ ಪರ ಇರುವವರ ಕೈಗಳಲ್ಲಷ್ಟೇ ಸಂವಿಧಾನ ಇದ್ದಾಗ ಅದರ ಧ್ಯೇಯೋದ್ದೇಶ ಈಡೇರುತ್ತದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

Bar & Bench

“ಸಂವಿಧಾನ ಎಷ್ಟೇ ಶ್ರೇಷ್ಠವಾಗಿದ್ದರೂ, ಸರಿಯಾದ ಕೈಗಳಲ್ಲಿ ಅದು ಇರದಿದ್ದರೆ ಸಂವಿಧಾನ ಸಾರ್ಥಕವಾಗುವುದಿಲ್ಲ ಎಂದು ಅಂಬೇಡ್ಕರ್ ಅವರು ಎಚ್ಚರಿಕೆಯ ಮಾತುಗಳನ್ನಾಡಿದ್ದರು. ಸಂವಿಧಾನದ ಪರ ಇರುವವರ ಕೈಗಳಲ್ಲಿ ಮಾತ್ರ ಸಂವಿಧಾನ ಇದ್ದಾಗ ಅದರ ಧ್ಯೇಯೋದ್ದೇಶವನ್ನು ಸಾಧಿಸಿದಂತಾಗುತ್ತದೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಸಂವಿಧಾನ ದಿನಾಚರಣೆ ಅಂಗವಾಗಿ ಇಂದು ವಿಧಾನಸೌಧದ ಅಂಗಳದಲ್ಲಿರುವ ಡಾ. ಬಿ ಆರ್ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಡಾ. ಬಿ ಆರ್ ಅಂಬೇಡ್ಕರ್ ಪ್ರತಿಮೆ ಪುಷ್ಪಾರ್ಚನೆ ಕಾರ್ಯಕ್ರಮ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಎಚ್‌ ಸಿ ಮಹಾದೇವಪ್ಪ

ಶಾಲೆಗಳಲ್ಲಿ ಸಂವಿಧಾನದ ಪೀಠಿಕೆ ಬೋಧಿಸುವುದನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದ್ದು  ಇದರಿಂದಾಗಿ ಇಂದಿನ ಮಕ್ಕಳು ಮುಂದಿನ ಪ್ರಜೆಗಳಾಗಿ, ಸಂವಿಧಾನದ ಧ್ಯೇಯೋದ್ದೇಶ ಅರಿತು ನಡೆಯಲು ಸಾಧ್ಯವಾಗುತ್ತದೆ ಎಂದರು.

“ರಾಷ್ಟ್ರಕವಿ ಕುವೆಂಪು ಅವರು ಹೇಳಿದಂತೆ ‘ಸರ್ವ ಜನಾಂಗದ ಶಾಂತಿಯ ತೋಟʼ ಎಂಬ ಸಮಾಜ ನಿರ್ಮಾಣವಾಗಬೇಕೆಂದು ಮಹಾತ್ಮ ಗಾಂಧಿ, ಜವಾಹರ್ ಲಾಲ್ ನೆಹರೂ ಕನಸು ಕಂಡಿದ್ದರು.  ಸಂವಿಧಾನದ ಪೀಠಿಕೆಯಲ್ಲಿ ಇದರ ಸಾರವಿದೆ. ನಮ್ಮ ಸರ್ಕಾರದ ಸಂವಿಧಾನದ ಆಶಯಗಳಂತೆ ನಡೆಯಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿದೆ” ಎಂದು ಅವರು ನುಡಿದರು.

ದೇಶದ ಸಂವಿಧಾನ ಅತ್ಯಂತ ಶ್ರೇಷ್ಠವಾಗಿದ್ದು ದೇಶದ ಎಲ್ಲರ ಹಕ್ಕುಗಳ ರಕ್ಷಣೆ ಹಾಗೂ ಮಾನವೀಯತೆಯೇ ಸಂವಿಧಾನದ ಆಶಯ ಎಂದು ಅವರು ಹೆಮ್ಮೆಪಟ್ಟರು.

“ಇಂದು ಸಂವಿಧಾನ ಅಂಗೀಕರಾವಾದ ದಿನ. 1949,ರ ನವೆಂಬರ್ 26ರಂದು ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿದ್ದ ಡಾ. ಬಾಬುರಾಜೇಂದ್ರ ಪ್ರಸಾದ್ ಅವರಿಗೆ ಭಾರತದ ಸಂವಿಧಾನವನ್ನು ಸಲ್ಲಿಸಿದ ನಂತರ ಅದು ಅಂಗೀಕಾರವಾಯಿತು. ಆದ್ದರಿಂದ ಈ ದಿನವನ್ನು ಸಂವಿಧಾನ ದಿನವೆಂದು ಇಡೀ ದೇಶದಲ್ಲಿ ಆಚರಿಸಲಾಗುತ್ತಿದೆ. ಡಾ.ಬಾಬು ರಾಜೇಂದ್ರ ಪ್ರಸಾದ್, ಡಾ.ಬಿ.ಆರ್. ಅಂಬೇಡ್ಕರ್ ಸೇರಿದಂತೆ ಸಂವಿಧಾನ ರಚನಾ ಸಮಿತಿಯ ಎಲ್ಲ ಸದಸ್ಯರನ್ನು ನೆನಪಿಸಿಕೊಳ್ಳಬೇಕು. ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದರು" ಎಂದು ಅವರು ಸ್ಮರಿಸಿದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂವಿಧಾನ ಪ್ರಸ್ತಾವನೆ ಭಾಗವನ್ನು ಬೋಧಿಸಿದರು. ಸಚಿವ ಎಚ್‌ ಸಿ ಮಹಾದೇವಪ್ಪ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.