Karnataka HC and BDA Commissioner Rajesh Gowda M B 
ಸುದ್ದಿಗಳು

[ಬಿಡಿಎ ಆಯುಕ್ತರ ನೇಮಕ] ಮೇಲ್ನೋಟಕ್ಕೆ ತಪ್ಪು ಕಂಡಾಗ ನಾವೇಕೆ ಸಮಯ ನೀಡಬೇಕು? ನಾವು ಕಣ್ಮುಚ್ಚಿ ಕೂರಲಾಗದು: ಹೈಕೋರ್ಟ್‌

ಮೇಲ್ನೋಟಕ್ಕೆ ಏನೋ ತಪ್ಪಾಗಿದೆ ಎಂದು ತೋಚುತ್ತದೆ. ಮೂರು ದಿನಗಳಲ್ಲಿ ಆಕ್ಷೇಪಣೆ ಸಲ್ಲಿಸಿ. ನೀವು ಸಂಬಂಧಪಟ್ಟವರಾಗಿದ್ದು, ನಿಮ್ಮ ನಿಲುವೇನು? ಕಾಲಾವಕಾಶ ಕೇಳುವುದನ್ನೇ ನೀವು ಮಾಡುತ್ತೀರಿ, ಅಷ್ಟೆ ಎಂದು ಸರ್ಕಾರವನ್ನು ಕುರಿತು ಪೀಠ ಹೇಳಿತು.

Siddesh M S

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಕೆಎಎಸ್‌ ಶ್ರೇಣಿಯಿಂದ 2018ರಲ್ಲಿ ಐಎಎಸ್‌ಗೆ ಪದೋನ್ನತಿ ಪಡೆದಿರುವ ಅಧಿಕಾರಿ ಎಂ ಬಿ ರಾಜೇಶ್‌ ಗೌಡ ನೇಮಕಾತಿಯಲ್ಲಿ ಮೇಲ್ನೋಟಕ್ಕೆ ಏನೋ ತಪ್ಪಾಗಿದೆ ಎಂದು ತೋಚುತ್ತದೆ. ಮೇಲ್ನೋಟಕ್ಕೆ ತಪ್ಪು ಎಂದು ಕಂಡಾಗ ನಾವೇಕೆ ನಿಮಗೆ (ರಾಜ್ಯ ಸರ್ಕಾರಕ್ಕೆ) ಸಮಯ ನೀಡಬೇಕು? ನಾವು ಕಣ್ಮುಚ್ಚಿ ಕೂರಲಾಗದು ಎಂದು ಕರ್ನಾಟಕ ಹೈಕೋರ್ಟ್‌ ಬುಧವಾರ ಹೇಳಿದೆ.

ಬಿಡಿಎ ಆಯುಕ್ತರನ್ನಾಗಿ ರಾಜೇಶ್ ಗೌಡ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ವಕೀಲ ಜಿ ಮೋಹನ್ ಕುಮಾರ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಮೇಲ್ನೋಟಕ್ಕೆ ಇಲ್ಲಿ ಏನೋ ತಪ್ಪಾಗಿದೆ ಎಂದು ತೋಚುತ್ತದೆ. ಮೂರು ದಿನಗಳಲ್ಲಿ ಆಕ್ಷೇಪಣೆ ಸಲ್ಲಿಸಿ. ಮೇಲ್ನೋಟಕ್ಕೆ ತಪ್ಪು ಎಂದು ಕಂಡಾಗ ನಾವೇಕೆ ನಿಮಗೆ (ರಾಜ್ಯ ಸರ್ಕಾರಕ್ಕೆ) ಸಮಯ ನೀಡಬೇಕು? ನೀವು ಸಂಬಂಧಪಟ್ಟವರಾಗಿದ್ದು, ನಿಮ್ಮ ನಿಲುವೇನು? ಕಾಲಾವಕಾಶ ಕೇಳುವುದನ್ನೇ ನೀವು ಮಾಡುತ್ತೀರಿ, ಅಷ್ಟೆ. ಇದಕ್ಕೆ ಅನುಮತಿಸಲಾಗದು. ನಾವು ಕಣ್ಮುಚ್ಚಿ ಕೂರಲಾಗದು” ಎಂದು ಪೀಠ ಹೇಳಿತು. ಅಂತೆಯೇ, ರಾಜ್ಯ ಸರ್ಕಾರ, ಸಿಬ್ಬಂದಿ ಮತ್ತು ಆಡಳಿತ ವಿಭಾಗದ ಅಧೀನ ಕಾರ್ಯದರ್ಶಿಗೆ ಕರ್ನಾಟಕ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ. ರಾಜೇಶ್‌ ಗೌಡ ಪರ ವಕೀಲರಾದ ಸುಮನಾ ನಾಗಾನಂದ್‌ ಅವರಿಗೆ ಆಕ್ಷೇಪಣೆ ಸಲ್ಲಿಸಲು ನ್ಯಾಯಾಲಯ ಆದೇಶ ಮಾಡಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಎಕ್ಸ್‌ ಎಂ ಜೋಸೆಫ್‌ ಅವರು “ಬಿಡಿಎ ಕಾಯಿದೆ ಸೆಕ್ಷನ್‌ 12ರ ಅಡಿ ಆಯುಕ್ತರನ್ನು ನೇಮಿಸುವ ಸಂಬಂಧ ಅರ್ಹತೆಗಳನ್ನು ವಿವರಿಸಲಾಗಿದೆ. ಇದರಲ್ಲಿ ಪ್ರಾದೇಶಿಕ ಆಯುಕ್ತರ ಶ್ರೇಣಿಗಿಂತ ಕೆಳಗಿರುವವರನ್ನು ಆಯುಕ್ತರನ್ನಾಗಿ ನೇಮಕ ಮಾಡುವಂತಿಲ್ಲ ಎಂದು ಹೇಳಲಾಗಿದೆ. ಹಾಲಿ ಬಿಡಿಎ ಆಯುಕ್ತ ರಾಜೇಶ್‌ ಗೌಡ ಅವರು ಕೆಎಎಸ್‌ ಅಧಿಕಾರಿಯಾಗಿದ್ದು, 2018ರಲ್ಲಿ ಐಎಎಸ್‌ ಶ್ರೇಣಿಗೆ ಪದೋನ್ನತಿ ಪಡೆದಿದ್ದಾರೆ. ಪ್ರಾದೇಶಿಕ ಆಯುಕ್ತರಾಗಲು 15-16 ವರ್ಷ ಸೇವೆ ಸಲ್ಲಿಸಿರಬೇಕು” ಎಂದರು.

ಇದಕ್ಕೆ ನ್ಯಾಯಮೂರ್ತಿ ಕೃಷ್ಣ ಕುಮಾರ್‌ ಅವರು “ಬಿಡಿಎ ಆಯುಕ್ತರಾಗುವ ಸಂದರ್ಭದಲ್ಲಿ ರಾಜೇಶ್‌ ಗೌಡ ಅವರು ಪ್ರಾದೇಶಿಕ ಆಯುಕ್ತರ ಶ್ರೇಣಿಯನ್ನು ಹೊಂದಿದ್ದರೆ” ಎಂದು ಪ್ರಶ್ನಿಸಿದರು. ಇದಕ್ಕೆ ಇಲ್ಲ ಎಂದು ಜೋಸೆಫ್‌ ಉತ್ತರಿಸಿದರು.

ಬಿಡಿಎ ಅಧ್ಯಕ್ಷರನ್ನಾಗಿ ಶಾಸಕ ಎಸ್‌ ಆರ್‌ ವಿಶ್ವನಾಥ್‌ ನೇಮಕಾತಿಯನ್ನು ಪ್ರಶ್ನಿಸಿದ್ದ ಪ್ರಕರಣವನ್ನು ಆಗಷ್ಟೇ ಪೀಠವು ವಿಚಾರಣೆ ನಡೆಸಿತ್ತು. ಸದರಿ ಪ್ರಕರಣದಲ್ಲಿ ಬಿಡಿಎ ಆಯುಕ್ತರ ನೇಮಕಾತಿ ಪ್ರಶ್ನಿಸಿದ್ದನ್ನು ಉಲ್ಲೇಖಿಸಿ, “ಅರ್ಜಿದಾರರು ಬಿಡಿಎ ವಿಸರ್ಜಿಸಬೇಕು” ಎಂದು ಕೋರುತ್ತಿದ್ದಾರೆ ಎಂದು ಲಘು ದಾಟಿಯಲ್ಲಿ ನ್ಯಾ. ಕೃಷ್ಣ ಕುಮಾರ್‌ ಹೇಳಿದರು.

ಬೆಂಗಳೂರು ಅಭಿವೃದ್ಧಿ ಕಾಯಿದೆ-1976ರ ಸೆಕ್ಷನ್ 12ರ ಪ್ರಕಾರ ವಿಭಾಗೀಯ ಆಯುಕ್ತರಿಗಿಂತ ಕಡಿಮೆ ಇರದ ಶ್ರೇಣಿಯ ಅಧಿಕಾರಿಯನ್ನು ಬಿಡಿಎ ಆಯುಕ್ತರ ಹುದ್ದೆಗೆ ನೇಮಕ ಮಾಡಬೇಕಿದೆ. ಆದರೆ, ವಿಭಾಗೀಯ ಆಯುಕ್ತರಿಗಿಂತ ಕಡಿಮೆ ಶ್ರೇಣಿಯ ಅಧಿಕಾರಿಯಾಗಿರುವ ಎಂ ಬಿ ರಾಜೇಶ್ ಗೌಡ ಅವರನ್ನು ಬಿಡಿಎ ಆಯುಕ್ತ ಹುದ್ದೆಗೆ ನೇಮಿಸಿ ಸರ್ಕಾರ 2021ರ ಏಪ್ರಿಲ್‌ 30ರಂದು ಆದೇಶಿಸಿದೆ. ಹಾಗಾಗಿ, ಬಿಡಿಎ ಆಯುಕ್ತರ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು ರಾಜೇಶ್ ಗೌಡ ಅವರಿಗೆ ಅಗತ್ಯ ಅರ್ಹತೆ ಇಲ್ಲವಾಗಿದೆ. ಅರ್ಹತೆ ಇಲ್ಲದವರನ್ನು ನೇಮಿಸುವುದರಿಂದ ಆಯುಕ್ತರ ಹುದ್ದೆಯ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.

ರಾಜೇಶ್ ಗೌಡ ಅವರನ್ನು ಬಿಡಿಎ ಆಯುಕ್ತ ಹುದ್ದೆಗೆ ನೇಮಕ ಮಾಡಿದ ಆದೇಶ ಹಿಂಪಡೆಯಬೇಕು ಹಾಗೂ ಸೂಕ್ತ ಅರ್ಹತೆಯಿರುವ ಅಧಿಕಾರಿಯನ್ನು ನೇಮಿಸಬೇಕು ಎಂದು ಕೋರಿ ಅರ್ಜಿದಾರರು 2021ರ ನವೆಂಬರ್‌ 30ರಂದು ಸರ್ಕಾರಕ್ಕೆ ಮನವಿ ಪತ್ರ ನೀಡಿದ್ದಾರೆ. ಅದನ್ನು ಈವರೆಗೂ ಪರಿಗಣಿಸಿಲ್ಲ ಎಂದು ಆಕ್ಷೇಪಿಸಿರುವ ಅರ್ಜಿದಾರರು, ಸೂಕ್ತ ಅರ್ಹತೆ ಹೊಂದಿರದ ಕಾರಣಕ್ಕೆ ಬಿಡಿಎ ಆಯುಕ್ತರ ಹುದ್ದೆಗೆ ರಾಜೇಶ್ ಗೌಡ ಅವರನ್ನು ನೇಮಿಸಿ ಸರ್ಕಾರ ಹೊರಡಿಸಿದ ಆದೇಶ ರದ್ದುಪಡಿಸಬೇಕು ಎಂದು ನ್ಯಾಯಾಲಯವನ್ನು ಕೋರಿದ್ದಾರೆ. ಅಲ್ಲದೆ, ಈ ಅರ್ಜಿ ಇತ್ಯರ್ಥವಾಗುವರೆಗೂ ಬಿಡಿಎ ಆಯುಕ್ತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು ರಾಜೇಶ್ ಗೌಡ ಅವರಿಗೆ ನಿರ್ಬಂಧ ಹೇರಬೇಕು ಎಂದು ಅರ್ಜಿದಾರರು ಇದೇ ವೇಳೆ ಮಧ್ಯಂತರ ಮನವಿ ಮಾಡಿದ್ದಾರೆ.