ಉನ್ನತ ಅವಕಾಶಗಳು ಸಿಕ್ಕಾಗ ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಂಡರೆ ಬದುಕು ಸಾರ್ಥಕವಾಗುತ್ತದೆ. ನ್ಯಾಯದಾನದ ಮೂಲಕ ನ್ಯಾಯಮೂರ್ತಿ ಬಿ ವೀರಪ್ಪ ಅವರು ತಮ್ಮ ಬದುಕು ಮತ್ತು ವೃತ್ತಿಯನ್ನು ಸಾರ್ಥಕಗೊಳಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬುಧವಾರ ಶ್ಲಾಘಿಸಿದರು.
ಬೆಂಗಳೂರು ವಕೀಲರ ಸಂಘವು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿದ್ದ ನ್ಯಾಯಮೂರ್ತಿ ಬಿ ವೀರಪ್ಪ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
“ವೀರಪ್ಪ ಅವರು ನ್ಯಾಯಮೂರ್ತಿ ಆಗುವಾಗಲೂ ನಾನು ಮುಖ್ಯಮಂತ್ರಿ ಆಗಿದ್ದೆ. ಈಗ ಅವರ ನಿವೃತ್ತಿ ಸಂದರ್ಭದಲ್ಲೂ ನಾನು ಮುಖ್ಯಮಂತ್ರಿ ಆಗಿರುವುದು ಸುಸಂದರ್ಭ. ನಮಗೆ ಉನ್ನತ ಸ್ಥಾನ ಸಿಕ್ಕಾಗ ಪ್ರಾಮಾಣಿಕವಾಗಿ ಜನಸೇವೆ ಮಾಡಿದರೆ ಆ ಸ್ಥಾನದ ಘನತೆ ಹೆಚ್ಚುತ್ತದೆ. ಸಮಾಜದ ಬಗ್ಗೆ ಅರಿವಿದ್ದವರು, ಬದುಕನ್ನು ಅರ್ಥ ಮಾಡಿಕೊಂಡವರು, ಜನರ ಸಂಕಷ್ಟಗಳನ್ನು ಅನುಭವಿಸಿದ್ದವರು, ಆ ಬಗ್ಗೆ ಸಹಾನುಭೂತಿ ಹೊಂದಿದ್ದವರು ಮಾತ್ರ ಸಮಾಜಮುಖಿಯಾಗಿದ್ದು ಉನ್ನತ ಸ್ಥಾನದ ಘನತೆ ಹೆಚ್ಚಿಸಬಲ್ಲರು” ಎಂದರು.
ಮುಂದುವರೆದು, “ನ್ಯಾ. ವೀರಪ್ಪ ಅವರು ದಕ್ಷತೆ, ಪ್ರಾಮಾಣಿಕತೆ ಜತೆಗೆ ವಕೀಲ ಸಮೂಹದ ಪ್ರೀತಿಯನ್ನೂ ಗಳಿಸಿದ್ದರು ಎನ್ನುವುದಕ್ಕೆ ಇಲ್ಲಿ ಸೇರಿರುವ ವಕೀಲ ಸಮೂಹವೇ ಸಾಕ್ಷಿ. ದುರ್ಬಲ ವರ್ಗದವರಿಗೆ ಮೇಲಿನ ನ್ಯಾಯಾಲಯಗಳಿಗೆ ಹೋಗಲು ಸಾಧ್ಯವಿಲ್ಲ. ಆದ್ದರಿಂದ, ಕೆಳ ಹಂತದಲ್ಲೇ ದುರ್ಬಲ ವರ್ಗಗಳಿಗೆ ನ್ಯಾಯ ಸಿಗುವಂತಾಗಬೇಕು. ನ್ಯಾ. ವೀರಪ್ಪ ಅವರು ಈ ನಿಟ್ಟಿನಲ್ಲಿ ಮೌಲ್ಯಯುತವಾದ ತೀರ್ಪುಗಳನ್ನು ನೀಡಿದ್ದಾರೆ. ಇವು ಕಿರಿಯರಿಗೆ ಮಾದರಿ” ಎಂದರು.
ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಾತನಾಡಿ “ಕಾರ್ಯಾಂಗ ಮತ್ತು ಶಾಸಕಾಂಗ ಸರಿಯಾಗಿ ಕೆಲಸ ಮಾಡುವಂತೆ ಮಾರ್ಗದರ್ಶನ ಮಾಡುವಲ್ಲಿ ನ್ಯಾಯಾಂಗ ಪ್ರಮುಖ ಪಾತ್ರವಹಿಸುತ್ತದೆ. ನ್ಯಾಯಾಂಗದಿಂದ ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ನ್ಯಾಯ ಪಡೆಯಲು ಸಹಕಾರಿಯಾಗಿದೆ. ನ್ಯಾಯಮೂರ್ತಿ ವೀರಪ್ಪ ಅವರು ಶ್ರದ್ಧೆ, ಕೃತಿ, ಅನುಭವ, ಆತ್ಮಸಾಕ್ಷಿ ಶುದ್ಧವಾಗಿದ್ದ ಕಾರಣ ಉತ್ತಮ ತೀರ್ಪು ನೀಡಲು ಸಾಧ್ಯವಾಗಿದೆ” ಎಂದರು.
“ವಕೀಲರು ಸಲ್ಲಿಸುವ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಸಿದ್ಧವಾಗಿದೆ. ಆದರೆ, ವಕೀಲರು ನಮ್ಮಿಂದ ಎಲ್ಲ ಕೆಲಸ ಮಾಡಿಸಿಕೊಂಡು ನಂತರ ನಮ್ಮ ವಿರುದ್ಧ ಕಪ್ಪು ಬಾವುಟವನ್ನು ಹಿಡಿಯಬಾರದು. ನಮ್ಮ ಪರವಾಗಿ ನೀವಿದ್ದರೆ ವಕೀಲರ ಸಮಸ್ಯೆ ನಿವಾರಿಸಲು ಸಹಕಾರಿಯಾಗುತ್ತದೆ” ಎಂದರು.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ, ಅಡ್ವೋಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.