Justices Sreenivas Harish Kumar & J M Khazi 
ಸುದ್ದಿಗಳು

ರಾಷ್ಟ್ರದ ಸಾರ್ವಭೌಮತೆಗೆ ಸವಾಲು ಎದುರಾದಾಗ ವ್ಯಕ್ತಿ ಸ್ವಾತಂತ್ರ್ಯಕ್ಕೆ ಮನ್ನಣೆ ನೀಡಲಾಗದು: ಹೈಕೋರ್ಟ್‌

ವ್ಯಕ್ತಿಯೊಬ್ಬ ಗುರುತರ ಆರೋಪಗಳಡಿ ಬಂಧನಕ್ಕೆ ಒಳಗಾಗಿದ್ದಲ್ಲಿ ಅದನ್ನು ಕಾನೂನಿನ ಅಡಿಯಲ್ಲಿ ಪರಿಗಣಿಸಬೇಕೇ ಹೊರತು, ವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನಡಿ ಪರಿಗಣಿಸಲು ಸಾಧ್ಯವಿಲ್ಲ ಎಂದಿರುವ ನ್ಯಾಯಾಲಯ.

Bar & Bench

“ರಾಷ್ಟ್ರದ ಸಾರ್ವಭೌಮತೆ, ಏಕತೆ, ಸಮಗ್ರತೆ ಹಾಗೂ ಪ್ರಜಾಪ್ರಭುತ್ವದ ಹಿತಾಸಕ್ತಿಗೆ ಯಾವುದೇ ಸವಾಲುಗಳು ಎದುರಾದಾಗ ವ್ಯಕ್ತಿ ಸ್ವಾತಂತ್ರ್ಯಕ್ಕೆ ಮನ್ನಣೆ ನೀಡಲಾಗದು” ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಹೇಳಿದೆ.

ನಿಷೇಧಿತ ಐಎಸ್‌ಐಎಸ್‌ (ಇಸ್ಲಾಮಿಕ್‌ ಸ್ಟೇಟ್‌ ಇನ್‌ ಇರಾಕ್‌ ಅಂಡ್ ಸಿರಿಯಾ) ಸಂಘಟನೆ ನಂಟು ಹೊಂದುವ ಮೂಲಕ ಉಗ್ರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಅರಾಫತ್ ಅಲಿ ಅಲಿಯಾಸ್ ಅರಾಫತ್ ಜಾಮೀನು ಕೋರಿ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ಜೆ ಎಂ ಖಾಜಿ ಅವರ ವಿಭಾಗೀಯ ಪೀಠ ವಜಾಗೊಳಿಸಿದೆ.

“ಸಂವಿಧಾನದ 21ನೇ ವಿಧಿ ವ್ಯಕ್ತಿಯೊಬ್ಬನ ಸ್ವಾತಂತ್ರ್ಯಕ್ಕೆ ಸಂಬಂಧಿಸಿದೆ. ಆದರೆ, ರಾಷ್ಟ್ರೀಯ ಹಿತಾಸಕ್ತಿ ವಿಷಯಗಳು ಒಳಗೊಂಡಾಗ ಅಥವಾ ರಾಷ್ಟ್ರದ ಏಕತೆ, ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಸವಾಲನ್ನು ಒಡ್ಡಿದಾಗ, ಅಂತಹ ವೈಯಕ್ತಿಕ ಸ್ವಾತಂತ್ರ್ಯವು ಮನ್ನಣೆ ಕಳೆದುಕೊಳ್ಳುತ್ತದೆ” ಎಂದು ಪೀಠ ತಿಳಿಸಿದೆ.

“ಕಾನೂನಿನ ಅಡಿಯಲ್ಲಿ ನಿಯಮಗಳನ್ನು ಪಾಲಿಸದೆ ಬಂಧಿಸಲಾಗಿದೆ ಎಂಬಂತಹ ಸಂದರ್ಭಗಳಲ್ಲಿ ಸಂವಿಧಾನದ 21ನೇ ವಿಧಿಯನ್ನು ಪರಿಗಣಿಸಬಹುದು. ಆಗ ಅಂತಹ ವ್ಯಕ್ತಿ ತನ್ನ ಸ್ವಾತಂತ್ರ್ಯದ ಹಕ್ಕಿಗಾಗಿ ಕಾನೂನು ಹೋರಾಟ ನಡೆಸಬಹುದು. ಆದರೆ, ಗುರುತರ ಆರೋಪಗಳಡಿ ಬಂಧನಕ್ಕೆ ಒಳಗಾಗಿದ್ದಲ್ಲಿ ಅದನ್ನು ಕಾನೂನಿನ ಅಡಿಯಲ್ಲಿ ಪರಿಗಣಿಸಬೇಕೇ ಹೊರತು, ವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನಡಿ ಪರಿಗಣಿಸಲು ಸಾಧ್ಯವಿಲ್ಲ” ಎಂದು ಅಭಿಪ್ರಾಯಪಟ್ಟಿದೆ.

ಆರೋಪಿ ಪರ ಎಸ್‌ ಬಾಲಕೃಷ್ಣನ್‌ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ ಪರ ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನ ಕುಮಾರ್‌ ಹಾಗೂ ಸಿ.ಸಚಿನ್‌ ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: ಶಿವಮೊಗ್ಗದ ದೊಡ್ಡಪೇಟೆಯಲ್ಲಿ ಪ್ರೇಮ್‌ ಸಿಂಗ್ ಎಂಬ ಯುವಕನಿಗೆ ಚಾಕುವಿನಿಂದ ಇರಿದ ಆರೋಪದಡಿ 2022ರ ಆಗಸ್ಟ್‌ 15ರಂದು ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿತ್ತು. ಈ ಪ್ರಕರಣವನ್ನು ಕೇಂದ್ರ ಸರ್ಕಾರ 2022ರ ನವೆಂಬರ್ 14ರಂದು ಎನ್‌ಐಎಗೆ ವಹಿಸಿತ್ತು.

ತನಿಖೆಯ ಸಂದರ್ಭದಲ್ಲಿ ಅರಾಫತ್‌ ಅಲಿ (10ನೇ ಆರೋಪಿ) ಯುವಕರನ್ನು ಉಗ್ರ ಚಟುವಟಿಕೆಗಳಿಗೆ ಪ್ರೇರೇಪಿಸಿದ ಮತ್ತು ಐಎಸ್‌ಐಎಸ್‌ ಸಂಘಟನೆಗೆ ಉತ್ತೇಜನ ನೀಡಿದ ಮಾಹಿತಿ ಲಭ್ಯವಾಗಿತ್ತು. ಆದರೆ, ಆತ ಕೀನ್ಯ ಮತ್ತು ದುಬೈನಲ್ಲಿ ಇದ್ದ ಕಾರಣದಿಂದ ಬಂಧಿಸಲಾಗಿರಲಿಲ್ಲ ಎಂದು ಎನ್‌ಐಎ ವಿಚಾರಣೆ ವೇಳೆ ಪೀಠಕ್ಕೆ ವಿವರಿಸಿತ್ತು.

ಅರಫಾತ್ ಅಲಿಯನ್ನು 2023ರ ಸೆಪ್ಟೆಂಬರ್ 14ರಂದು ಬಂಧಿಸಿದ್ದ ಪೊಲೀಸರು, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ  ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿ ವಿಚಾರಣಾಧೀನ ನ್ಯಾಯಾಲಯಕ್ಕೆ ಹೆಚ್ಚುವರಿ ಆರೋಪ ಪಟ್ಟಿ ಸಲ್ಲಿಸಿದ್ದರು, ಅರಾಫತ್‌ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಎನ್‌ಐಎ ವಿಶೇಷ ನ್ಯಾಯಾಲಯ 2024ರ ಫೆಬ್ರವರಿಯಲ್ಲಿ ವಜಾಗೊಳಿಸಿತ್ತು.

Arafath Ali Vs NIA.pdf
Preview