A1
A1
ಸುದ್ದಿಗಳು

ನ್ಯಾಯಮೂರ್ತಿ ಹುದ್ದೆಗಳು ಖಾಲಿಯಾಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಬಾಂಬೆ ಹೈಕೋರ್ಟ್

Bar & Bench

ಪ್ರಸಕ್ತ ಸಾಲಿನಲ್ಲಿ ಒಂಬತ್ತು ನ್ಯಾಯಮೂರ್ತಿಗಳ ನಿವೃತ್ತಿ ಒಂದು ರಾಜೀನಾಮೆ ಹಾಗೂ ಹೊಸ ನೇಮಕಾತಿ ಇಲ್ಲದಿರುವುದರಿಂದ ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಗಳ ತೀವ್ರ ಕೊರತೆ ಎದುರಿಸುತ್ತಿದೆ.

ಸಂಸದರು ಮತ್ತು ಶಾಸಕರ ವಿರುದ್ಧ ಬಾಕಿ ಉಳಿದಿರುವ ಕ್ರಿಮಿನಲ್ ಮೊಕದ್ದಮೆಗಳಿಗೆ ಸಂಬಂಧಿಸಿದ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಶುಕ್ರವಾರ ಮುಖ್ಯ ನ್ಯಾಯಮೂರ್ತಿ (ಸಿಜೆ) ದೀಪಂಕರ್ ದತ್ತಾ ಬೇಸರ ತೋಡಿಕೊಂಡರು. ಅವರು ಈ ಕುರಿತು ಬೇಸರ ವ್ಯಕ್ತಪಡಿಸುತ್ತಿರುವುದು ಇದೇ ಮೊದಲಲ್ಲ. ಈ ತಿಂಗಳ ಆರಂಭದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ತುರ್ತು ವಿಚಾರಣೆ ಎದುರಾದಗಲೂ ಇದೇ ಬಗೆಯ ಸಮಸ್ಯೆಯನ್ನು ಪ್ರಸ್ತಾಪಿಸಿದ್ದರು.

ಅಡ್ವೊಕೇಟ್ ಜನರಲ್ ಅಶುತೋಷ್ ಕುಂಭಕೋಣಿ ಅವರು ಮಧ್ಯಂತರ ತಡೆ ನೀಡಿರುವ ವಿಷಯಗಳನ್ನು ಸೂಕ್ತ ಪೀಠಗಳ ಮುಂದೆ ವಿಚಾರಣೆಗೆ ಪಟ್ಟಿ ಮಾಡಬಹುದು ಎಂದಾಗ ನ್ಯಾ. ದತ್ತಾ ಅವರು “ನ್ಯಾಯಮೂರ್ತಿಗಳು ಎಲ್ಲಿದ್ದಾರೆ? ತಿಂಗಳು, ಹದಿನೈದು ದಿನಗಳಿಗೊಮ್ಮೆ ನಮ್ಮ ಒಬ್ಬರು ಸದಸ್ಯರನ್ನು (ನಿವೃತ್ತಿಯ ಕಾರಣಕ್ಕೆ) ಕಳೆದುಕೊಳ್ಳುತ್ತಿದ್ದೇವೆ. ಪರಿಶೀಲನಾ ಸಭೆಗಳಲ್ಲಿ ನ್ಯಾಯಮೂರ್ತಿಗಳಿಗೆ ಶನಿವಾರವೂ ಕೆಲಸ ಮಾಡಲು ಹೇಳಲಾಗುತ್ತಿದೆ. ಅಧಿಕ ಕಾರ್ಯಭಾರದಿಂದ ಅವರು ಈಗಾಗಲೇ ತತ್ತರಿಸಿದ್ದಾರೆ. ಪ್ರತಿನಿತ್ಯ ಸಂಜೆ 7-8 ರವರೆಗೆ ಕೆಲಸ ಮಾಡುವ ಅವರನ್ನು ಶನಿವಾರವೂ ಕಾರ್ಯ ನಿರ್ವಹಿಸಿ ಎಂದು ಹೇಳಲಾಗದು. ಸಹೋದ್ಯೋಗಿ ನ್ಯಾಯಮೂರ್ತಿಗಳ ಮೇಲೆ ಕೆಲಸದ ಹೊರೆ ಹೆಚ್ಚಿಸಲು ನನಗೆ ಸಾಧ್ಯವಿಲ್ಲ. ಹದಿನೈದು ದಿನದೊಳಗೆ ಏನಾದರೂ ಸಂಭವಿಸಿದರೆ ಈ ವಿಚಾರವಾಗಿ ಪರಿಶೀಲಿಸುತ್ತೇವೆ ಅಲ್ಲಿಯವರೆಗೆ ಏನನ್ನೂ ಮಾಡಲಾಗದು” ಎಂದು ಅವರು ಹೇಳಿದರು.

ಈ ವರ್ಷಾಂತ್ಯಕ್ಕೆ ಹೊಸ ನೇಮಕಾತಿ ನಡೆಯದಿದ್ದರೆ ಹೈಕೋರ್ಟ್‌ಗೆ ಮಂಜೂರಾಗಿದ್ದ 94 ನ್ಯಾಯಮೂರ್ತಿ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುವ ನ್ಯಾಯಮೂರ್ತಿಗಳ ಸಂಖ್ಯೆ 46ಕ್ಕೆ ಕುಸಿಯಲಿದೆ. ಈಗ 57 ನ್ಯಾಯಮೂರ್ತಿಗಳು ಕೆಲಸ ಮಾಡುತ್ತಿದ್ದಾರೆ.