ಒಪ್ಪಿತ ಲೈಂಗಿಕ ಕ್ರಿಯೆಯನ್ನು ಅತ್ಯಾಚಾರ ಎನ್ನಲಾಗದು ಎಂದು ಈಚೆಗೆ ಅಭಿಪ್ರಾಯಪಟ್ಟಿರುವ ಕರ್ನಾಟಕ ಹೈಕೋರ್ಟ್, ವ್ಯಕ್ತಿಯೊಬ್ಬರ ವಿರುದ್ಧದ ಅತ್ಯಾಚಾರ ಪ್ರಕರಣವನ್ನು ರದ್ದುಪಡಿಸಿದೆ.
ಬೆಂಗಳೂರಿನ ವ್ಯಕ್ತಿಯೊಬ್ಬರ ವಿರುದ್ಧ ಅತ್ಯಾಚಾರ, ಮದುವೆಯಾಗುವ ಭರವಸೆ ನೀಡಿ ವಂಚಿಸಿರುವುದು, ಕ್ರಿಮಿನಲ್ ಬೆದರಿಕೆ ಸೇರಿದಂತೆ ವಿವಿಧ ಅಪರಾಧಗಳ ಅಡಿ ದಾಖಲಾಗಿದ್ದ ಪ್ರಕರಣವನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ರದ್ದುಪಡಿಸಿದೆ.
“ದೂರುದಾರೆ ಮತ್ತು ಅರ್ಜಿದಾರನ ನಡುವಿನ ಒಪ್ಪಿತ ಲೈಂಗಿಕ ಕೃತ್ಯಗಳು ಅತ್ಯಾಚಾರವಾಗುವುದಿಲ್ಲ. ಪಕ್ಷಕಾರರು ಆರು ವರ್ಷಗಳ ಕಾಲ ಪ್ರಣಯದಲ್ಲಿ ಸಂಬಂಧ ಮುಂದುವರಿಸಿದ್ದು, ಕಾಲಾನುಕ್ರಮದಲ್ಲಿ ದೂರುದಾರೆ ಅಥವಾ ಅರ್ಜಿದಾರನಿಂದ ಪ್ರೀತಿ ಬತ್ತಿದ ಮಾತ್ರಕ್ಕೆ ಒಪ್ಪಿತವಾಗಿ ಇಬ್ಬರ ನಡುವೆ ನಡೆದ ಕೃತ್ಯವನ್ನು ಅತ್ಯಾಚಾರ ಎನ್ನಲಾಗದು. ಹಾಗಾಗಿ, ಮದುವೆಯ ಭರವಸೆ ಅಥವಾ ಬೇರೆ ಏನೇ ಆದರೂ ಅರ್ಜಿದಾರ ಮತ್ತು ದೂರುದಾರೆಯ ನಡುವಿನ ಕೃತ್ಯವು ಸಂಪೂರ್ಣವಾಗಿ ಒಪ್ಪಿತವಾಗಿದೆ. ಹೀಗಾಗಿ, ಅರ್ಜಿದಾರರ ವಿರುದ್ಧ ಐಪಿಸಿ ಸೆಕ್ಷನ್ 376 ಅನ್ನು ತಪ್ಪಾಗಿ ಅನ್ವಯಿಸಲಾಗಿದ್ದು, ಅದರ ಪ್ರಕ್ರಿಯೆ ಮುಂದುವರಿಸಲು ಅನುಮತಿಸಲಾಗದು” ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಪಾದರಾಯನಪುರ ನಿವಾಸಿಗಳಾದ ದೂರುದಾರೆ ಮತ್ತು ಅರ್ಜಿದಾರರಿಗೆ 2012ರಲ್ಲಿ ಮೊಬೈಲ್ ಅಂಗಡಿಯ ಮೂಲಕ ಪರಿಚಯವಾಗಿತ್ತು. ಅರ್ಜಿದಾರ ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದು, ದೂರುದಾರೆಯು ತಮ್ಮ ಮೊಬೈಲ್ ರಿಚಾರ್ಜ್‌ಗಾಗಿ ಅರ್ಜಿದಾರನ ಅಂಗಡಿಗೆ ಭೇಟಿ ನೀಡುತ್ತಿದ್ದರು. ಈ ಸಂದರ್ಭದಲ್ಲಿ ಇಬ್ಬರ ನಡುವೆ ಸ್ನೇಹ ಬೆಳೆದು, ಪ್ರೇಮಾಂಕುರವಾಗಿತ್ತು. ಅದು ದೈಹಿಕ ಸಂಬಂಧಕ್ಕೆ ತಿರುಗಿತ್ತು. ಆನಂತರ 2018ರ ಏಪ್ರಿಲ್ ದೂರುದಾರೆಗೆ ಅರ್ಜಿದಾರ ಮತ್ತೊಬ್ಬ ಯುವತಿಯೊಂದಿಗೆ ಮದುವೆಯ ವಿಚಾರ ತಿಳಿದಿತ್ತು. ಹೀಗಾಗಿ, ಆಕೆಯು ಅರ್ಜಿದಾರನ ವಿರುದ್ಧ ಮದುವೆಯ ಆಮಿಷವೊಡ್ಡಿ ದೈಹಿಕ ಸಂಬಂಧ ನಡೆಸಿರುವುದಾಗಿ ಆರೋಪಿ ದೂರು ನೀಡಿದ್ದರು.
ಇದನ್ನು ಆಧರಿಸಿ, ಜಗಜೀವನರಾಮ್ ಠಾಣೆಯ ಪೊಲೀಸರು ಅರ್ಜಿದಾರನ ವಿರುದ್ಧ 417 (ವಂಚನೆ), 376 (ಅತ್ಯಾಚಾರ), 493 (ಮದುವೆಯ ಭರವಸೆ ನೀಡಿ ವಂಚಿಸುವುದು) ಮತ್ತು 506ರ (ಕ್ರಿಮಿನಲ್ ಬೆದರಿಕೆ) ಅಡಿ ಪ್ರಕರಣ ದಾಖಲಿಸಿದ್ದರು.