Justice M Nagaprasanna 
ಸುದ್ದಿಗಳು

“ಆಸ್ತಿಯನ್ನು ದಾನವಾಗಿ ಪಡೆದಿದ್ದ ಪತ್ನಿ ಸಾವನ್ನಪ್ಪಿದ ಬಳಿಕ ಅದು ಪತಿಗೆ ಮರಳುವುದೇ” ಹೈಕೋರ್ಟ್‌ ಹೇಳಿದ್ದೇನು?

ಪುತ್ರ ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ವಂಚಿಸಿ ದಾನ ಪತ್ರ ಮಾಡಿಸಿಕೊಂಡಿದ್ದಾನೆ ಎಂದು ಪೋಷಕರು ಮತ್ತು ಹಿರಿಯ ನಾಗರಿಕರ ಜೀವನಾಂಶ ಮತ್ತು ನಿರ್ವಹಣೆ ಕಾಯಿದೆ ಸೆಕ್ಷನ್‌ 23ರ ಅಡಿ ಶ್ರೀನಿವಾಸ್‌ ಎಂಬುವರು ಎ ಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

Siddesh M S

“ಆಸ್ತಿಯನ್ನು ದಾನವಾಗಿ ಪಡೆದಿದ್ದ ಪತ್ನಿ ಸಾವನ್ನಪ್ಪಿದ ಬಳಿಕ ಅದು ಪತಿಗೆ ಮರಳುವುದೇ” ಎಂಬ ವಿಚಾರಕ್ಕೆ ಸಂಬಂಧಿತರು ಸಕ್ಷಮ ಸಿವಿಲ್‌ ನ್ಯಾಯಾಲಯದಲ್ಲಿ ಪರಿಹಾರ ಪಡೆದುಕೊಳ್ಳಬಹುದು ಎಂದು ಈಚೆಗೆ ಕರ್ನಾಟಕ ಹೈಕೋರ್ಟ್‌ ಆದೇಶಿಸಿದ್ದು, ತಂದೆಯು ಪುತ್ರನಿಗೆ ಮಾಡಿಕೊಟ್ಟಿದ್ದ ದಾನಪತ್ರವನ್ನು ಬದಿಗೆ ಸರಿಸಿ ಉಪವಿಭಾಗಾಧಿಕಾರಿ ಮಾಡಿದ್ದ ಆದೇಶವನ್ನು ರದ್ದುಪಡಿಸಿದೆ.

ಪೋಷಕರು ಮತ್ತು ಹಿರಿಯ ನಾಗರಿಕರಿಗೆ ಜೀವನಾಂಶ ಮತ್ತು ನಿರ್ವಹಣೆ ಕಾಯಿದೆ ಅಡಿ ತಂದೆ ಶ್ರೀನಿವಾಸ್‌ ಪುತ್ರ ಸಿ ಎಸ್‌ ಹರ್ಷಗೆ ಮಾಡಿಕೊಟ್ಟಿದ್ದ ದಾನಪತ್ರ ಮತ್ತು ಆನಂತರ ಪುತ್ರ ರಾಮನಗರದ ವಿವೇಕ್‌ ಜೈನ್‌ ಅವರಿಗೆ ಹರ್ಷ ಮಾಡಿಕೊಟ್ಟಿದ್ದ ಕ್ರಯಪತ್ರವನ್ನು ಉಪವಿಭಾಗಾಧಿಕಾರಿ 2021ರಲ್ಲಿ ರದ್ದುಪಡಿಸಿದ್ದರು. ಇದನ್ನು ಪ್ರಶ್ನಿಸಿ ವಿವೇಕ್‌ ಜೈನ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

“ಉಪವಿಭಾಗಾಧಿಕಾರಿ ಮಾಡಿರುವ ಆದೇಶವನ್ನು ಪ್ರಶ್ನಿಸಿಲು ವಿವೇಕ್‌ ಜೈನ್‌ ಅವರಿಗೆ ಯಾವುದೇ ಹಕ್ಕಿಲ್ಲ ಎಂದು ಶ್ರೀನಿವಾಸ್‌ ಪರ ಹಿರಿಯ ವಕೀಲರು ವಾದಿಸಿದ್ದಾರೆ. ಇದನ್ನು ಸುತಾರಾಂ ಒಪ್ಪಲಾಗದು. ಉಪವಿಭಾಗಾಧಿಕಾರಿಯ ಮುಂದೆ ಜೈನ್‌ ಅವರು ಮೂರನೇ ಪ್ರತಿವಾದಿಯಾಗಿದ್ದಾರೆ. ಕಾನೂನಿನ ಪ್ರಕಾರ ಜೈನ್‌ ಅವರು ಆಸ್ತಿ ಖರೀದಿಸಿರುವುದರಿಂದ ಅವರು ತಮ್ಮ ಆಸ್ತಿಯನ್ನು ರಕ್ಷಣೆ ಮಾಡಿಕೊಳ್ಳಬೇಕಿದೆ. ಹರ್ಷ ಅವರಿಂದ ಜೈನ್‌ ಆಸ್ತಿ ಖರೀದಿಸಿರುವುದು ಕಾನೂನಿಗೆ ವಿರುದ್ಧವಾಗಿಲ್ಲ. ಉಪವಿಭಾಗಾಧಿಕಾರಿ ಜೈನ್‌ ವಿರುದ್ಧ ಆದೇಶ ಮಾಡಿದ ನಂತರ ಅವರು ಜಿಲ್ಲಾ ದಂಡಾಧಿಕಾರಿ ಮುಂದೆ ಮೇಲ್ಮನವಿ ಸಲ್ಲಿಸಿದ್ದು, ಅದು ಅನೂರ್ಜಿತ ಎಂದು ವಜಾಗೊಂಡಿರುವ ಹಿನ್ನೆಲೆಯಲ್ಲಿ ಜೈನ್‌ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ” ಎಂದು ನ್ಯಾಯಾಲಯ ಹೇಳಿದೆ.

“ಜೈನ್‌ ಅವರು ಸಿವಿಲ್‌ ನ್ಯಾಯಾಲಯದ ಮುಂದೆ ಹೋದರೆ ಉಪವಿಭಾಗಾಧಿಕಾರಿ ಮಾಡಿರುವ ಆದೇಶವು ಅವರಿಗೆ ವಿರುದ್ಧವಾಗಿರುತ್ತದೆ. ಏಕೆಂದರೆ, ಉಪವಿಭಾಗಾಧಿಕಾರಿ ಆದೇಶದಿಂದ ಅವರು ಆಸ್ತಿ ಕಳೆದುಕೊಂಡಿರುತ್ತಾರೆ. ಹೀಗಾಗಿ, ಉಪವಿಭಾಗಾಧಿಕಾರಿ ಆದೇಶದಲ್ಲಿ ನೂನ್ಯತೆ ಇದೆ. ಇದಕ್ಕೆ ಪರಿಹಾರ ಹೈಕೋರ್ಟ್‌ನಲ್ಲೇ ಪಡೆಯಬೇಕು” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

“ಪತ್ನಿ ಸಾವನ್ನಪ್ಪಿದ ಬಳಿಕ ಮೊದಲಿಗೆ ದಾನ ಮಾಡಿದ್ದ ಆಸ್ತಿಯು ಪತಿಗೆ ಮರಳುವುದೇ” ಎಂಬ ವಿಚಾರವನ್ನು ಸಂಬಂಧಿತರು ಸಕ್ಷಮ ಸಿವಿಲ್‌ ನ್ಯಾಯಾಲಯದ ಮುಂದೆ ಬಗೆಹರಿಸಿಕೊಳ್ಳಬಹುದಾಗಿದೆ. ತಂದೆಯೇ ಪತ್ನಿಗೆ ಮೊದಲ ದಾನಪತ್ರ ಮಾಡಿದ್ದು, ಅದೇ ಆಸ್ತಿಯನ್ನು ಎರಡನೇ ಬಾರಿಗೆ ದಾನ ಮಾಡಲು ಅಧಿಕಾರ ಹೊಂದಿಲ್ಲ. ಪತ್ನಿ ಸಾವನ್ನಪ್ಪಿದ ಬಳಿಕ ಆಸ್ತಿಯು ಪತಿಗೆ ಮರಳುವುದಿಲ್ಲ. ಹೀಗಾಗಿ, ಅವರು ಎರಡನೇ ಬಾರಿಗೆ ದಾನ ಮಾಡಲಾಗದು. ಪತ್ನಿ ಸಾವನ್ನಪ್ಪಿದ ಬಳಿಕ ದಾನ ಮಾಡಲ್ಪಟ್ಟ ಆಸ್ತಿಯು ಕುಟುಂಬಸ್ಥರಿಗೆ ಸೇರಲಿದ್ದು, ಅವರೆಲ್ಲರೂ ಭಾಗಕ್ಕೆ ಅರ್ಹರಾಗುತ್ತಾರೆ ಎಂದು ತಂದೆಯ ಪರ ವಕೀಲರು ವಾದಿಸಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಪಕ್ಷಕಾರರು ಸಂಬಂಧಿತ ಸಿವಿಲ್‌ ನ್ಯಾಯಾಲಯದಲ್ಲಿ ಎತ್ತುವ ಮೂಲಕ ಪರಿಹಾರ ಪಡೆಯಬಹುದು” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಪ್ರಕರಣದ ಹಿನ್ನೆಲೆ: ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಕುವೆಂಪುನಗರದ ನಿವಾಸಿ ಶ್ರೀನಿವಾಸ್‌ ಅವರು 2000ನೇ ಇಸವಿಯ ಮಾರ್ಚ್‌ 15ರಂದು ತನ್ನ ಆಸ್ತಿಯೊಂದನ್ನು ಪತ್ನಿ ಕಲಾವತಿಗೆ ದಾನ ಮಾಡಿದ್ದರು. ಬದುಕಿದ್ದಾಗ ಕಲಾವತಿ ಅವರು ಸಾಲ ಪಡೆಯಲು 2012ರಲ್ಲಿ ಎಸ್‌ಬಿಐಗೆ ಆ ಆಸ್ತಿಯನ್ನು ಅಡಮಾನ ಮಾಡಿದ್ದರು. ಈ ನಡುವೆ 2015ರ ಅಕ್ಟೋಬರ್‌ನಲ್ಲಿ ಕಲಾವತಿ ಸಾವನ್ನಪ್ಪಿದ್ದರು. ಇದರಿಂದಾಗಿ ಆ ಆಸ್ತಿಯು ದಾನ ಮಾಡಿದ್ದ ಶ್ರೀನಿವಾಸ್‌ ಅವರಿಗೆ ಮರಳಿತ್ತು. ನಾಲ್ಕು ವರ್ಷಗಳ ಕಾಲ ಆಸ್ತಿಯನ್ನು ಅನುಭವಿಸಿದ್ದ ಶ್ರೀನಿವಾಸ್‌ ಅವರು 2019ರ ಜೂನ್‌ 20ರಂದು ಪುತ್ರ ಹರ್ಷ ಅವರಿಗೆ ಎರಡನೇ ಬಾರಿಗೆ ದಾನ ಮಾಡಿದ್ದರು. ಹರ್ಷಗೆ ಸಂಬಂಧಿತ ಆಸ್ತಿಗೆ ಸಂಬಂಧಿಸಿದಂತೆ ಸಹೋದರ ಸಿ ಎಸ್‌ ತಿಲಕ್‌ ಅವರು ರಿಲೀಸ್‌ ಪತ್ರ ಮಾಡಿಕೊಟ್ಟಿದ್ದರು. ಆಸ್ತಿಯ ಸಂಪೂರ್ಣ ಮಾಲೀಕತ್ವ ಪಡೆದಿದ್ದ ಹರ್ಷ ಅವರು ಎಸ್‌ಬಿಐನಲ್ಲಿ ತಾಯಿ ಕಲಾವತಿ ಪಡೆದಿದ್ದ ಸಾಲ ತೀರಿಸಿ, ಸದರಿ ಆಸ್ತಿಯನ್ನು 2019ರ ಡಿಸೆಂಬರ್‌ 19ರಂದು ವಿವೇಕ್‌ ಜೈನ್‌ಗೆ ಮಾರಾಟ ಮಾಡಿದ್ದರು.

ಮಾರಾಟದ ವಿಚಾರ ಶ್ರೀನಿವಾಸ್‌ ಗಮನಕ್ಕೂ ಇದ್ದು, 15 ಲಕ್ಷ ರೂಪಾಯಿಯನ್ನು ಅವರಿಗೆ ಪಾವತಿಸಿ, ಅದನ್ನು ಎಲ್‌ಐಸಿಯಲ್ಲಿ ಠೇವಣಿ ಇಡುವ ಮೂಲಕ ಮಾಸಿಕ 10 ಸಾವಿರ ರೂಪಾಯಿ ಶ್ರೀನಿವಾಸ್‌ ಅವರಿಗೆ ಖರ್ಚಿಗೆ ಬರುವಂತೆ ಮಾಡಲಾಗಿತ್ತು.

ಇದಾದ ಸ್ವಲ್ಪ ದಿನದ ನಂತರ ಶ್ರೀನಿವಾಸ್‌ ಅವರು ಹರ್ಷ ತನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ವಂಚಿಸಿ ದಾನ ಪತ್ರ ಮಾಡಿಸಿಕೊಂಡಿದ್ದಾನೆ ಎಂದು ಪೋಷಕರು ಮತ್ತು ಹಿರಿಯ ನಾಗರಿಕರಿಗೆ ಜೀವನಾಂಶ ಮತ್ತು ನಿರ್ವಹಣೆ ಕಾಯಿದೆ ಸೆಕ್ಷನ್‌ 23ರ ಅಡಿ ಉಪವಿಭಾಗಾಧಿಕಾರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಶ್ರೀನಿವಾಸ್‌ ಕೋರಿಕೆ ಪುರಸ್ಕರಿಸಿ ಉಪವಿಭಾಗಾಧಿಕಾರಿಯು ದಾನಪತ್ರ, ಆನಂತರದ ಕ್ರಯಪತ್ರ ರದ್ದುಪಡಿಸಿ ಆದೇಶಿಸಿದ್ದರು. ಇದನ್ನು ಹೈಕೋರ್ಟ್‌ನಲ್ಲಿ ಜೈನ್‌ ಪ್ರಶ್ನಿಸಿದ್ದು, ಅದು ಈಗ ಪುರಸ್ಕಾರವಾಗಿದೆ.

ವಿವೇಕ್‌ ಜೈನ್‌ ಪರವಾಗಿ ಪಿ ಆರ್‌ ನರೇಂದ್ರ ವಕಾಲತ್ತು ಹಾಕಿದ್ದು, ಹಿರಿಯ ವಕೀಲ ಸಂದೇಶ್‌ ಚೌಟ ವಾದಿಸಿದ್ದರು. ಡಿಸಿ, ಎಸಿ ಪರವಾಗಿ ವಕೀಲೆ ನವ್ಯಾ ಶೇಖರ್‌, ಶ್ರೀನಿವಾಸ್‌ ಮತ್ತು ತಿಲಕ್‌ ಪರವಾಗಿ ವಕೀಲ ಎಂ ಶ್ರೀಕಾಂತ್‌ ವಕಾಲತ್ತು ವಹಿಸಿದ್ದು, ಹಿರಿಯ ವಕೀಲ ಲಕ್ಷ್ಮಿ ಐಯ್ಯಂಗಾರ್‌, ಹರ್ಷ ಪರವಾಗಿ ವಕೀಲ ಸತ್ಯನಾರಾಯಣ ರೆಡ್ಡಿ ವಾದಿಸಿದ್ದರು.