ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಸಲ್ಲಿಸಲಾದ ಅರ್ಜಿಗಳನ್ನು ಯಾವ ನ್ಯಾಯಾಲಯ ವಿಚಾರಣೆ ನಡೆಸಬೇಕು ಎಂಬುದನ್ನು ನಿರ್ಧರಿಸುವುದಕ್ಕಾಗಿ ದೆಹಲಿ ಹೈಕೋರ್ಟ್ ಮಂಗಳವಾರ ತನ್ನ ರಿಜಿಸ್ಟ್ರಾರ್ ಜನರಲ್ ಮತ್ತು ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿದೆ.
ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯ ಸಂಸದರು ಮತ್ತು ಶಾಸಕರ ವಿರುದ್ಧದ ಪ್ರಕರಣಗಳನ್ನು ಆಲಿಸುತ್ತದೆ. ಆದರೆ ಪೋಕ್ಸೊ ಕಾಯಿದೆಯಡಿಯ ಅಪರಾಧಗಳನ್ನು ವಿಚಾರಣೆ ನಡೆಸುವ ಅಧಿಕಾರ ವ್ಯಾಪ್ತಿ ಇರುವುದು ನಗರದ ಪಟಿಯಾಲಾ ಹೌಸ್ ನ್ಯಾಯಾಲಯಕ್ಕೆ.
ನ್ಯಾಯಾಂಗ ತನಿಖೆ ನಡೆಸಬೇಕೆಂದು ಕೋರಿ ಕುಸ್ತಿಪಟುಗಳು ಸಿಆರ್‌ಪಿಸಿಸ ಸೆಕ್ಷನ್ 156 (3) ಅಡಿ ರೌಸ್ ಅವೆನ್ಯೂ ನ್ಯಾಯಾಲಯಕ್ಕೆ ಎರಡು ಅರ್ಜಿಗಳನ್ನು ಸಲ್ಲಿಸಿದ್ದರು. ಈ ಅರ್ಜಿಗಳಲ್ಲಿ ಒಂದು, 18 ವರ್ಷಕ್ಕಿಂತ ಮೇಲ್ಪಟ್ಟ ಮಹಿಳಾ ಕುಸ್ತಿಪಟುಗಳು ಸಲ್ಲಿಸಿರುವುದಾದರೆ, ಮತ್ತೊಂದು ಅಪ್ರಾಪ್ತ ಕುಸ್ತಿಪಟುಗಳು ಸಲ್ಲಿಸಿರುವ ಮನವಿಯಾಗಿದೆ.
ವಯಸ್ಕ ಕುಸ್ತಿಪಟುಗಳ ಮನವಿಗೆ ಸಂಬಂಧಿಸಿದಂತೆ ನೋಟಿಸ್ ಜಾರಿಗೊಳಿಸಿದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ನ್ಯಾಯಾಧೀಶ (ಎಸಿಎಂಎಂ) ಹರ್ಜಿತ್ ಸಿಂಗ್ ಜಸ್‌ಪಾಲ್ ಅವರು ಅಪ್ರಾಪ್ತರ ಮನವಿಯನ್ನು ಸೂಕ್ತ ನಿರ್ದೇಶನಕ್ಕಾಗಿ ಹೈಕೋರ್ಟ್ ಮುಂದಿರಿಸಲು ಶಿಫಾರಸ್ಸು ಮಾಡಿದ್ದರು.
ಇಂದು ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಅವರು ರಿಜಿಸ್ಟ್ರಾರ್ ಜನರಲ್ ಮತ್ತು ದೆಹಲಿ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದಾರೆ. ಜುಲೈ 6ರ ಒಳಗೆ ಪ್ರತಿಕ್ರಿಯೆ ನೀಡುವಂತೆ ಪ್ರತಿವಾದಿಗಳಿಗೆ ನ್ಯಾಯಾಲಯ ಸೂಚಿಸಿದೆ.