Karnataka High Court 
ಸುದ್ದಿಗಳು

"ಟ್ರಯಲ್‌ ರೂಮಿನಲ್ಲಿ ಬಟ್ಟೆ ಬದಲಿಸುವ ಫೋಟೊ ತೆಗೆಯುವುದಾದರೆ ಯಾವ ಮಹಿಳೆ ಸುರಕ್ಷಿತ?" ಹೈಕೋರ್ಟ್‌ ಕಿಡಿ

“ನೀವು, ಆರೋಪಿ ಇನ್ನೂ ಚಿಕ್ಕವನು ಎನ್ನುತ್ತಿದ್ದೀರಿ. ಆದರೆ ಆತ ಚಿಕ್ಕವನೇನಲ್ಲ. ಈ ರೀತಿಯಾದರೆ ಯಾವ ಮಹಿಳೆಯೂ ಸುರಕ್ಷಿತವಾಗಿರಲು ಸಾಧ್ಯವಿಲ್ಲ” ಎಂದ ನ್ಯಾಯಾಲಯ.

Bar & Bench

“ಬಟ್ಟೆ ಅಂಗಡಿಗೆ ಬಂದ ಮಹಿಳಾ ಗ್ರಾಹಕಿಯರು ಟ್ರಯಲ್‌ ರೂಮಿನಲ್ಲಿ ಬಟ್ಟೆ ಬದಲಾಯಿಸುವ ಫೋಟೊಗಳನ್ನು ಅಂಗಡಿಯವನೇ ಕ್ಯಾಮರಾದಲ್ಲಿ ರಹಸ್ಯವಾಗಿ ಸೆರೆ ಹಿಡಿಯುತ್ತಾನೆ ಎಂದಾದರೆ ಇಲ್ಲಿ ಯಾವ ಮಹಿಳೆ ತಾನೆ ಸುರಕ್ಷಿತವಾಗಿದ್ದಾರೆ” ಎಂದು ಕರ್ನಾಟಕ ಹೈಕೋರ್ಟ್‌ ಮಂಗಳವಾರ ಕಿಡಿಕಾರಿದೆ.

ತನ್ನ ವಿರುದ್ಧದ ಕ್ರಿಮಿನಲ್‌ ಪ್ರಕರಣ ರದ್ದತಿ ಎಂದು ಕೋರಿ ಪ್ರಕರಣದ ಆರೋಪಿಯಾದ ಬೆಂಗಳೂರಿನ ದೊಡ್ಡಮಾವಳ್ಳಿಯ ಲಾಲ್‌ಬಾಗ್‌ ಕೋಟೆ ರಸ್ತೆ ನಿವಾಸಿ ಫೈಸಲ್‌ ಉಲ್ಲಾ ಷರೀಫ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲ ಸೈಯದ್‌ ಜಹೀರುದ್ದೀನ್‌ ಬರೀದ್‌ “ಅರ್ಜಿದಾರರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಪಂಚನಾಮೆಯಲ್ಲಿರುವ ಅಂಶಗಳನ್ನು ಪರಿಗಣಿಸಿ ಪ್ರಕರಣವನ್ನು ರದ್ದುಪಡಿಸಬೇಕು” ಎಂದು ಕೋರಿದರು.

ಇದಕ್ಕೆ ಪೀಠವು “ನೀವು, ಆರೋಪಿ ಇನ್ನೂ ಚಿಕ್ಕವನು ಎನ್ನುತ್ತಿದ್ದೀರಿ. ಆದರೆ ಆತ ಚಿಕ್ಕವನೇನಲ್ಲ. ಈ ರೀತಿಯಾದರೆ ಯಾವ ಮಹಿಳೆಯೂ ಸುರಕ್ಷಿತವಾಗಿರಲು ಸಾಧ್ಯವಿಲ್ಲ” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿತು.ೆ

“ಆರೋಪ ಪಟ್ಟಿಯನ್ನೂ ಸಲ್ಲಿಸಲಾಗಿದೆ ಎಂದು ಹೇಳುತ್ತಿದ್ದೀರಲ್ಲಾ? ಹಾಗಾದರೆ ಅಲ್ಲಿಯೇ ಹೋಗಿ ಬಿಡುಗಡೆಯ ಅರ್ಜಿ ಹಾಕಿಕೊಳ್ಳಿ. ಇಂತಹುದನ್ನೆಲ್ಲಾ ಸಹಿಸುವುದಿಲ್ಲ. ಇಂಹತವರಿಗೆ ಸರಿಯಾದ ಪಾಠ ಕಲಿಸಬೇಕು” ಎಂದು ಎಚ್ಚರಿಸಿದರು. ಪ್ರಾಸಿಕ್ಯೂಷನ್‌ ಪರ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್‌ ಬಿ ಎನ್‌ ಜಗದೀಶ್‌ ವಾದಿಸಿದರು.

ಪ್ರಕರಣದ ಹಿನ್ನೆಲೆ: ಪ್ರಕರಣದ ಆರೋಪಿ ಫೈಸಲ್‌ ಉಲ್ಲಾ ಷರೀಫ್‌ ಜಯನಗರ 4ನೇ ಬ್ಲಾಕ್‌ನ 10ನೇ ‘ಎ’ ಮುಖ್ಯ ರಸ್ತೆಯಲ್ಲಿ ಬಟ್ಟೆ ಅಂಗಡಿಯೊಂದನ್ನು ನೋಡಿಕೊಳ್ಳುತ್ತಿದ್ದರು. ದೂರುದಾರರಾದ 28 ವರ್ಷದ ತರುಣಿ 2024ರ ಸೆಪ್ಟೆಂಬರ್ 8ರಂದು ಸಂಜೆ 6.30ರ ಸಮಯದಲ್ಲಿ ಆ ಅಂಗಡಿಯಲ್ಲಿ ಬಟ್ಟೆ ಖರೀದಿಸಲು ಹೋಗಿದ್ದರು. ತಮಗಿಷ್ಟವಾದ ಬಟ್ಟೆ ಆಯ್ಕೆ ಮಾಡಿಕೊಂಡು ಟ್ರಯಲ್‌ ರೂಮ್‌ಗೆ ಹೋಗಿ ಬಾಗಿಲು ಹಾಕಿಕೊಂಡು ಬಟ್ಟೆ ಬದಲಾಯಿಸುತ್ತಿದ್ದ ಸಮಯದಲ್ಲಿ ಟ್ರಯಲ್‌ ರೂಮಿನ ಬಾಗಿಲ ಮೇಲೆ ಸಣ್ಣದಾದ ಸಂದಿ ಇರುವುದು ಕಾಣಿಸಿತು. ಈ ಸಂದಿನಿಂದ ಆರೋಪಿಯು, ತರುಣಿ ಬಟ್ಟೆ ಬದಲಾಯಿಸುತ್ತಿದ್ದ ಖಾಸಗಿ ಫೋಟೊಗಳನ್ನು ತೆಗೆಯಲು ಪ್ರಯತ್ನಿಸುತ್ತಿದ್ದುದು ತನಿಖೆಯಿಂದ ದೃಢಪಟ್ಟಿರುತ್ತದೆ ಎಂದು ಆರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.

ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ–2023ರ (ಬಿಎನ್‌ಎಸ್) ಸೆಕ್ಷನ್‌ 77ರ ಅಡಿಯಲ್ಲಿ 2ನೇ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ (ಸಿಜೆಎಂ) ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದೆ.