ಸುದ್ದಿಗಳು

ಕೃತಕ ಬುದ್ಧಿಮತ್ತೆಯು ವಕೀಲರು ಅಥವಾ ನ್ಯಾಯಾಧೀಶರಿಗೆ ಪರ್ಯಾಯವಲ್ಲ, ನಮ್ಮ ಅನುಕೂಲಕ್ಕಾಗಿ ಕಲಿಯಬೇಕು: ನ್ಯಾ. ಜೋಶಿ

“ಕಾನೂನು ಸಮುದಾಯವು ತ್ವರಿತ ತಾಂತ್ರಿಕ ಪ್ರಗತಿಯೊಂದಿಗೆ ಹೋರಾಡುತ್ತಲೇ ಇದೆ. ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಲು ಅಗತ್ಯವಾದ ಕೌಶಲ್ಯಗಳೊಂದಿಗೆ ನಾವು ನಮ್ಮನ್ನು ಸಜ್ಜುಗೊಳಿಸಿಕೊಳ್ಳುವುದು ಅಗತ್ಯ” ಎಂದ ನ್ಯಾ. ಜೋಶಿ.

Bar & Bench

“ಕೃತಕ ಬುದ್ಧಿಮತ್ತೆಯು ವಕೀಲರು ಅಥವಾ ನ್ಯಾಯಾಧೀಶರಿಗೆ ಪರ್ಯಾಯವಲ್ಲ. ಅದನ್ನು ನಮ್ಮ ಅನುಕೂಲಕ್ಕೆ ಬಳಸಿಕೊಳ್ಳಲು ಕಲಿಯುವುದು ಅತ್ಯಗತ್ಯ” ಎಂದು ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಸಿ ಎಂ ಜೋಶಿ ಹೇಳಿದರು.

ಕರ್ತವ್ಯದಿಂದ ನಿವೃತ್ತಿ ಹೊಂದುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್‌ನ ಕೋರ್ಟ್‌ ಹಾಲ್‌ ಒಂದರಲ್ಲಿ ರಾಜ್ಯ ವಕೀಲರ ಪರಿಷತ್‌ ವತಿಯಿಂದ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

“ಕಾನೂನು ಸಮುದಾಯವು ತ್ವರಿತ ತಾಂತ್ರಿಕ ಪ್ರಗತಿಯೊಂದಿಗೆ ಹೋರಾಡುತ್ತಲೇ ಇದೆ. ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಲು ಅಗತ್ಯವಾದ ಕೌಶಲ್ಯಗಳೊಂದಿಗೆ ನಾವು ನಮ್ಮನ್ನು ಸಜ್ಜುಗೊಳಿಸಿಕೊಳ್ಳುವುದು ಅಗತ್ಯ. ಕೃತಕ ಬುದ್ಧಿಮತ್ತೆಯು ವಕೀಲರು ಅಥವಾ ನ್ಯಾಯಾಧೀಶರಿಗೆ ಪರ್ಯಾಯವಲ್ಲ. ಅದನ್ನು ನಮ್ಮ ಅನುಕೂಲಕ್ಕೆ ಬಳಸಿಕೊಳ್ಳಲು ಕಲಿಯುವುದು ಅತ್ಯಗತ್ಯ. ನಮ್ಮ ಸಂಸ್ಥೆಯಲ್ಲಿ ದಕ್ಷತೆಯನ್ನು ಹೆಚ್ಚಿಸಲು ಸಮಗ್ರ ಮಾನವ ಸಂಪನ್ಮೂಲ ನಿರ್ವಹಣಾ ನೀತಿಗಳ ಅವಶ್ಯಕತೆಯಿದೆ. ಅತ್ಯುತ್ತಮ ಸಾಂಸ್ಥಿಕ ಫಲಿತಾಂಶ ಖಚಿತಪಡಿಸಿಕೊಳ್ಳಲು ವೈಯಕ್ತಿಕ ಕಾರ್ಯಕ್ಷಮತೆಯ ಮಾಪನಗಳು ವಿಶಾಲವಾದ ಸಾಂಸ್ಥಿಕ ಉದ್ದೇಶಗಳೊಂದಿಗೆ ಹೊಂದಿಕೆಯಾಗಬೇಕು” ಎಂದರು.

“ವಿನೀತ ಭಾವನೆ ಮತ್ತು ಜವಾಬ್ದಾರಿಯ ಪ್ರಜ್ಞೆಯೊಂದಿಗೆ ಕೆಲವು ವರ್ಷಗಳ ಹಿಂದೆ ನಾನು ಈ ನ್ಯಾಯಾಲಯವನ್ನು ಮೊದಲು ಪ್ರವೇಶಿಸಿದೆ. ವ್ಯಕ್ತಿಗಳ ಹಕ್ಕುಗಳನ್ನು ನಿರ್ಧರಿಸುವ ಕಾರ್ಯವು ಒಂದು ಗಂಭೀರ ಬಾಧ್ಯತೆಯಾಗಿದೆ - ಯಾವುದೇ ನ್ಯಾಯಾಧೀಶರು ಅದನ್ನು ಲಘುವಾಗಿ ಪರಿಗಣಿಸಲಾಗದು. ನ್ಯಾಯಮೂರ್ತಿಯಾಗಿ ನನ್ನ ಅವಧಿಯಲ್ಲಿ ನ್ಯಾಯಯುತವಾಗಿ ಮತ್ತು ಸಮತೋಲನದಿಂದ ನಿರ್ವಹಿಸಲು ಸಾಧ್ಯವಾಗಿದ್ದರೆ ಅದು ಸಂಪೂರ್ಣವಾಗಿ ಈ ನ್ಯಾಯಾಲಯ ಮತ್ತು ನಾನು ಕೆಲಸ ಮಾಡಿದ ಪ್ರತಿಯೊಂದು ಸ್ಥಳದಿಂದ ಪಡೆದ ಮಾರ್ಗದರ್ಶನ ಪ್ರೋತ್ಸಾಹ ಮತ್ತು ಸಾಂಸ್ಥಿಕ ಬೆಂಬಲದಿಂದಾಗಿ ಮಾತ್ರ” ಎಂದರು.

ಸಹೋದ್ಯೋಗಿ ನ್ಯಾಯಮೂರ್ತಿಗಳು, ವಕೀಲರು, ಕುಟುಂಬಸ್ಥರು ಮತ್ತು ತಮ್ಮ ಸುದೀರ್ಘ ನ್ಯಾಯಾಂಗ ಸೇವೆಯಲ್ಲಿ ಹೆಜ್ಜೆ ಹಾಕಿದ ಎಲ್ಲರನ್ನೂ ಕೃತಜ್ಞತಾಪೂರ್ವಕವಾಗಿ ನ್ಯಾ. ಜೋಶಿ ನೆನೆದರು.

ನ್ಯಾ. ಜೋಶಿ ಅವರು 24.01.1964ರಲ್ಲಿ ಹುಬ್ಬಳ್ಳಿಯಲ್ಲಿ ಜನಿಸಿದ್ದು, ಅಲ್ಲಿಯೇ ವಕೀಲರಾಗಿ ನೋಂದಾಯಿಸಿ ಪ್ರಾಕ್ಟೀಸ್‌ ಆರಂಭಿಸಿದರು. 08.02.1995ರಲ್ಲಿ ಮುನ್ಸಿಫ್‌ ಆಗಿ ವೃತ್ತಿ ಆರಂಭಿಸಿದ ಅವರು 06.07.2009ರಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ಕಾನೂನು ಸೇವಾ ಪ್ರಾಧಿಕಾರದ ಉಪ ಕಾರ್ಯದರ್ಶಿ, ಕರ್ನಾಟಕ ಹೈಕೋರ್ಟ್‌ನ ಕಂಪ್ಯೂಟರ್ಸ್‌ ವಿಭಾಗದ ರಿಜಿಸ್ಟ್ರಾರ್‌, ಕಂಪ್ಯೂಟರ್‌ ವಿಭಾಗದ ಕೇಂದ್ರೀಯ ಯೋಜನಾ ಸಂಚಾಲಕ, ಉಡುಪಿ, ಬೆಳಗಾವಿ ಮತ್ತು ಬೆಂಗಳೂರು ಪ್ರಧಾನ ಜಿಲ್ಲಾ ನ್ಯಾಯಾಲಯಗಳ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. 16.08.2022ರಲ್ಲಿ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದ ನ್ಯಾ. ಜೋಶಿ, 16.04.2024ರಂದು ಕಾಯಂಗೊಂಡಿದ್ದರು.