Lawyers 
ಸುದ್ದಿಗಳು

ಗೊಂದಲ ನಿವಾರಣೆಗೆ ಕ್ರಮ: ಇಂಟರ್ನ್‌ಗಳಿಗಾಗಿ ಡಿ. 1ರಿಂದ ಹೊಸ ವಸ್ತ್ರಸಂಹಿತೆ ಜಾರಿಗೆ ತಂದ ಶಾಹ್‌ದರಾ ವಕೀಲರ ಸಂಘ

ವಕೀಲರನ್ನು ಮತ್ತು ತರಬೇತಿ ಪಡೆಯುವ ಇಂಟರ್ನ್‌ಗಳನ್ನು ಪ್ರತ್ಯೇಕಿಸುವ ಸಲುವಾಗಿ ಬಿಳಿ ಅಂಗಿ, ನೀಲಿ ಕೋಟ್ ಹಾಗೂ ಪ್ಯಾಂಟ್ ಧರಿಸುವಂತೆ ಸಂಘ ಸೂಚಿಸಿದೆ.

Bar & Bench

ದೆಹಲಿಯ ಕಡ್‌ಕಡ್‌ಡೂಮ ನ್ಯಾಯಾಲಯಗಳಲ್ಲಿ ಪ್ರಾಕ್ಟೀಸ್‌ ಮಾಡುವ ವಕೀಲರಿಂದ ಭಿನ್ನವಾಗಿ ತೋರುವಂತೆ ಮಾಡಲು ತರಬೇತಿಗೆ ಹಾಜರಾಗುವ ಇಂಟರ್ನ್‌ಗಳಿಗೆ (ಕಲಿಕಾರ್ಥಿ) ಪ್ರತ್ಯೇಕ ವಸ್ತ್ರ ಸಂಹಿತೆ ಜಾರಿಗೆ ತರುವ ನಿರ್ಣಯವನ್ನು ನಗರದ ಶಾಹ್‌ದಾರ ವಕೀಲರ ಸಂಘ ಇತ್ತೀಚೆಗೆ ಅಂಗೀಕರಿಸಿದೆ.

ವಕೀಲರು ಧರಿಸುವ ಕಪ್ಪು ಕೋಟ್‌ಗಳನ್ನು ಇಂಟರ್ನ್‌ಗಳು (ಕಲಿಕಾರ್ಥಿಗಳು) ಧರಿಸುವುದರಿಂದ ಗೊಂದಲ ಉಂಟಾಗುತ್ತದೆ ಎಂದು ನವೆಂಬರ್ 24ರಂದು ಹೊರಡಿಸಿದ ಅಧಿಸೂಚನೆಯಲ್ಲಿ, ಸಂಘ ಕಳವಳ ವ್ಯಕ್ತಪಡಿಸಿದ್ದು ಸಮಸ್ಯೆಗೆ ಪರಿಹಾರವಾಗಿ ಕಲಿಕಾರ್ಥಿಗಳು ಬಿಳಿ ಶರ್ಟ್, ನೀಲಿ ಕೋಟ್ ಮತ್ತು ಪ್ಯಾಂಟ್ ಧರಿಸಬೇಕು ಎಂದಿದೆ.

ನಿರ್ಣಯವನ್ನು ಕಾರ್ಯಕಾರಿ ಸಮಿತಿ ಸರ್ವಾನುಮತದಿಂದ ಅಂಗೀಕರಿಸಿರುವುದಾಗಿ ಸಂಘ ಪ್ರಕಟಿಸಿದ್ದು  ಡಿಸೆಂಬರ್ 1ರಿಂದ ವಸ್ತ್ರಸಂಹಿತೆ ತಮ್ಮ ಕಚೇರಿಗಳಿಗೆ ಬರುವ ವಕೀಲರು ವಸ್ತ್ರ ಸಂಹಿತೆ ಪಾಲಿಸುವಂತೆ ನೋಡಿಕೊಳ್ಳಬೇಕೆಂದು ಸಂಘದ ವಕೀಲರಿಗೆ ಅದು ಒತ್ತಾಯಿಸಿದೆ.  ಒಂದು ವೇಳೆ ವಸ್ತ್ರಸಂಹಿತೆ ಪಾಲಿಸಲು ಕಲಿಕಾರ್ಥಿಗಳು ವಿಫಲವಾದರೆ ಅವರು ನ್ಯಾಯಾಲಯಕ್ಕೆ ಹಾಜರಾಗಲು ಅನುಮತಿ ಇರುವುದಿಲ್ಲ ಎಂದು ಅಧಿಸೂಚನೆ ತಿಳಿಸಿದೆ.