BBMP and Karnataka HC 
ಸುದ್ದಿಗಳು

ಚಾಮರಾಜಪೇಟೆ ವಾರ್ಡ್‌ ರಸ್ತೆಗಳ ವೈಟ್‌ ಟಾಪಿಂಗ್‌ ಕಾಮಗಾರಿ ಸ್ಥಗಿತಕ್ಕೆ ಕೋರಿಕೆ: ಬಿಬಿಎಂಪಿಗೆ ಹೈಕೋರ್ಟ್‌ನಿಂದ ನೋಟಿಸ್

ವಾರ್ಡ್‌ನ 8 ಪ್ರಮುಖ ರಸ್ತೆಗಳ ಸಮಗ್ರ ಅಭಿವೃದ್ದಿಗೆ ಕರೆದಿರುವ ಟೆಂಡರ್ ರದ್ದುಪಡಿಸಬೇಕು. ಈ ಸಂಬಂಧ ಅರ್ಜಿದಾರರು 2024ರ ಡಿ.19ರಂದು ಸಲ್ಲಿಸಿರುವ ಮನವಿ ಪರಿಗಣಿಸಲು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ನಿರ್ದೇಶನ ನೀಡಬೇಕು ಎಂದು ಕೋರಲಾಗಿದೆ.

Bar & Bench

ಚಾಮರಾಜಪೇಟೆ ವಾರ್ಡ್ ಸಂಖ್ಯೆ 140ರ ರಸ್ತೆಗಳ ವೈಟ್ ಟಾಪಿಂಗ್ ಕಾಮಗಾರಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ಬಿಬಿಎಂಪಿಗೆ ಇತ್ತೀಚೆಗೆ ಕರ್ನಾಟಕ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಚಾಮರಾಜಪೇಟೆ ವಿಠಲನಗರ ನಿವಾಸಿ ಶಶಾಂಕ ಜೆ ಶ್ರೀಧರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಬಿ ಎಂ ಶ್ಯಾಮ್ ಪ್ರಸಾದ್ ಮತ್ತು ವಿ ಶ್ರೀಶಾನಂದ ಅವರ ರಜಾಕಾಲೀನ ವಿಭಾಗೀಯ ಪೀಠವು ಮಂಗಳವಾರ ವಿಚಾರಣೆ ನಡೆಸಿತು.

ಕೆಲ ಕಾಲ ವಾದ ಆಲಿಸಿದ ಪೀಠವು ಬಿಬಿಎಂಪಿ ಮುಖ್ಯ ಆಯುಕ್ತ ಹಾಗೂ ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿತು.

ವಾರ್ಡ್ ಸಂಖ್ಯೆ 137, 138 ಮತ್ತು 140ರ ರಸ್ತೆಗಳಿಗೆ ಡಾಂಬರೀಕರಣ ಮಾಡಲು 2024ರ ಫೆಬ್ರವರಿ 8ರಂದು 29.31 ಕೋಟಿ ರೂಪಾಯಿ ಮೊತ್ತದ ಕಾಮಗಾರಿಗೆ ಟೆಂಡರ್ ಕರೆದು, ಕಾರ್ಯಾದೇಶ ನೀಡಲಾಗಿದ್ದು, 2-3 ತಿಂಗಳ ಹಿಂದೆ 8 ಕೋಟಿ ರೂಪಾಯಿ ಸಹ ಪಾವತಿಸಲಾಗಿದೆ. ಈ ಮಧ್ಯೆ, ಆರೆಂಟು ತಿಂಗಳ ಅಂತರದಲ್ಲಿ ಇದೇ ವಾರ್ಡ್‌ನ ರಸ್ತೆಗಳ ವೈಟ್ ಟಾಪಿಂಗ್ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಇದರಿಂದ ಸ್ಥಳೀಯರಿಗೆ ಸಾಕಷ್ಟು ಅನಾನುಕೂಲ ಆಗುವುದರ ಜೊತೆಗೆ ಸಾರ್ವಜನಿಕರ ತೆರಿಗೆ ಹಣ ಅಪವ್ಯಯವಾಗಲಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ವಾರ್ಡ್‌ನ 8 ಪ್ರಮುಖ ರಸ್ತೆಗಳ ಸಮಗ್ರ ಅಭಿವೃದ್ದಿಗೆ ಕರೆದಿರುವ ಟೆಂಡರ್ ರದ್ದುಪಡಿಸಬೇಕು. ಈ ಸಂಬಂಧ ಅರ್ಜಿದಾರರು 2024ರ ಡಿಸೆಂಬರ್ 19ರಂದು ಸಲ್ಲಿಸಿರುವ ಮನವಿ ಪರಿಗಣಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ನಿರ್ದೇಶನ ನೀಡಬೇಕು. ವೈಟ್ ಟಾಪಿಂಗ್ ಕಾಮಗಾರಿ ಸ್ಥಗಿತಗೊಳಿಸುವಂತೆ ನಿರ್ದೇಶನ ನೀಡಬೇಕು. ಈ ರೀತಿ ಸಾರ್ವಜನಿಕ ತೆರಿಗೆ ಹಣದ ದುರ್ಬಳಕೆ ಕುರಿತು ಸಮಗ್ರ ತನಿಖೆ ನಡೆಸುವಂತೆ ಸಂಬಂಧಪಟ್ಟವರಿಗೆ ಆದೇಶ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.