“ಬಸ್ ಪ್ರಯಾಣ ಉಚಿತ ಕೊಡಲು ನಿಮಗೆ ಕೇಳಿದ್ದವರು ಯಾರು? ಸರ್ಕಾರಿ ನೌಕರರಿಗೆ ಸಂಬಳ ಕೊಡಲು ರಾಜ್ಯ ಸರ್ಕಾರದ ಬಳಿ ಹಣವಿಲ್ಲದಂತಾಗಿದೆ” ಎಂದು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯನ್ನು ಮೌಖಿಕವಾಗಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಲ್ಲ ಜನೌಷಧ ಕೇಂದ್ರಗಳನ್ನು ನಿಷೇಧಿಸಿ ರಾಜ್ಯ ಆರೋಗ್ಯ ಇಲಾಖೆ ಹೊರಡಿಸಿದ್ದ ಆದೇಶವನ್ನು ಸಾರಾಸಗಟಾಗಿ ರದ್ದುಗೊಳಿಸಿರುವ ನ್ಯಾಯಾಲಯವು ರಾಜ್ಯ ಸರ್ಕಾರದ ನಿಲುವನ್ನು ಕಟುವಾಗಿ ಖಂಡಿಸಿದೆ.
ಜನೌಷಧಿ ಕೇಂದ್ರ ನಿಷೇಧಿಸಿದ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಹಾವೇರಿ ಜಿಲ್ಲೆ ಕುಸನೂರಿನ ಎಂ ರಾಕೇಶ್ ಸೇರಿದಂತೆ ಒಟ್ಟು 34ಕ್ಕೂ ಹೆಚ್ಚು ಜನರು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.
ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಜೆ ಎಂ ಗಂಗಾಧರ ಅವರು “ರಾಜ್ಯ ಸರ್ಕಾರದ ನೀತಿಗಳು ಜನಪರವಾಗಿಯೇ ಇವೆ. ಜನೌಷಧಿ ಕೇಂದ್ರಗಳು ಸಬ್ಸಿಡಿ ದರದಲ್ಲಿ ಔಷಧಿ ವಿತರಿಸಿದರೆ ರಾಜ್ಯ ಸರ್ಕಾರ ಸಂಪೂರ್ಣ ಪುಕ್ಕಟೆಯಾಗಿ ಔಷಧಿಗಳನ್ನು ಪೂರೈಸುತ್ತಿದೆ” ಎಂದು ಸರ್ಕಾರದ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು.
ಇದನ್ನು ಆಕ್ಷೇಪಿಸಿದ ಅರ್ಜಿದಾರರ ಪರ ವಕೀಲ ಅನಿರುದ್ಧ ಎ.ಕುಲಕರ್ಣಿ ಅವರು “ಸರ್ಕಾರದ ನೀತಿ ಹೇಗೆ ಜನವಿರೋಧಿ ನಿಲುವಿನಿಂದ ಕೂಡಿದೆ” ಎಂದರು.
ಒಂದು ಹಂತದಲ್ಲಿ ಸರ್ಕಾರದ ಸಮರ್ಥನೆಯನ್ನು ತಳ್ಳಿ ಹಾಕಿದ ಪೀಠವು “ಕೇಂದ್ರ ಸರ್ಕಾರವೂ ಜನರ ಕಲ್ಯಾಣಕ್ಕಾಗಿಯೇ ಅಲ್ಲವೇ ಜನೌಷಧಿ ಯೋಜನೆ ಜಾರಿಗೆ ತಂದಿರುವುದು? ಜನೌಷಧಿ ಕೇಂದ್ರಗಳನ್ನು ತೆರವುಗೊಳಿಸಬೇಕು ಎಂದು ಯಾರಾದರೂ ನಿಮಗೆ ದೂರು ಕೊಟ್ಟಿದ್ದರಾ? ಇಲ್ಲವಲ್ಲಾ? ಹಾಗೆಯೇ, ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕೊಡಿ ಎಂದು ಯಾರಾದರೂ ಕೇಳಿದ್ದರಾ ಇಲ್ಲವಲ್ಲಾ?’ ಎಂದಿತು.
“ಬೇರೆ ಇಲಾಖೆಗಳಲ್ಲಿ ನೌಕರರಿಗೆ ಸಂಬಳ ಕೊಡಲು ರಾಜ್ಯ ಸರ್ಕಾರದ ಬಳಿ ದುಡ್ಡಿಲ್ಲದಂತಾಗಿದೆ. ಅವರು ಜೀವನ ನಡೆಸುವುದು ಬೇಡವೇ? ಎಲ್ಲವೂ ಉಚಿತ ಕೊಡುಗೆಗಳಿಗೆ ಹೋಗಿದೆ. ಜನ ಕಲ್ಯಾಣಕ್ಕಾಗಿ ಇರುವ ಕೇಂದ್ರದ ಕಾರ್ಯಕ್ರಮದಲ್ಲಿ ನೀವು ರಾಜಕೀಯ ಮಾಡಲು ಬಯಸುತ್ತಿದ್ದೀರಾ. ಇದೆಲ್ಲಾ ಸಲ್ಲದು. ಜನರ ಹಿತ ಕಾಪಾಡುವ ಕಡೆ ಗಮನ ಕೊಡಿ” ಎಂದಿತು.
“ಕ್ಯಾನ್ಸರ್‌ನಂತಹ ಔಷಧಗಳು ದುಬಾರಿ ಎಂದೇ ಅಲ್ಲವೇ ಅವುಗಳಿಗೆ ಸಬ್ಸಿಡಿ ನೀಡಲಾಗುತ್ತಿದೆ. ಇವೆಲ್ಲಾ ಜನ ಕಲ್ಯಾಣ ಕಾರ್ಯಕ್ರಮ. ಅದನ್ನು ರಾಜ್ಯವೇ ಮಾಡಲಿ ಕೇಂದ್ರವೇ ಮಾಡಲಿ ಅದರಲ್ಲಿ ಸಣ್ಣತನ ಸಲ್ಲದು. ನೀವು ವಾಸ್ತವದಲ್ಲಿ ಶಿಕ್ಷಣ, ಔಷಧಗಳನ್ನು ಉಚಿತವಾಗಿ ನೀಡಬೇಕಿತ್ತು. ಅದು ಬಿಟ್ಟು ಬಸ್ ಫ್ರೀ... ಅದು ಫ್ರೀ, ಇದು ಫ್ರೀ ಎಂದು ಎಲ್ಲವನ್ನೂ ಫ್ರೀ ಮಾಡುವ ಯೋಚನೆ ನಿಮ್ಮದು” ಎಂದು ಕುಟುಕಿತು.
“ಸರ್ಕಾರಿ ಆಸ್ಪತ್ರೆಗಳಲ್ಲಿನ ಜನೌಷಧಿ ಕೇಂದ್ರಗಳನ್ನು ತೆರವುಗೊಳಿಸುವುದರಿಂದ ನೀವು ಸಾಧಿಸುವುದಾದರೂ ಏನಿದೆ? ಪ್ರಧಾನಿಯವರ ಹೆಸರಿನಲ್ಲಿ ಜನೌಷಧಿ ಯೋಜನೆ ಇದೆ ಎಂಬ ಏಕೈಕ ಕಾರಣಕ್ಕಾಗಿ ಅವುಗಳನ್ನು ರಾಜ್ಯದಲ್ಲಿರುವ ಸರ್ಕಾರಿ ಆಸ್ಪತ್ರೆಗಳ ಆವರಣದಿಂದ ಎತ್ತಂಗಡಿ ಮಾಡಿಸುತ್ತಿದ್ದೀರಾ” ಎಂದ ಪೀಠ ಸರ್ಕಾರದ ಆದೇಶವನ್ನು ರದ್ದುಗೊಳಿಸಿ ಆದೇಶಿಸಿತು.
ಇಂತಹುದೇ ಅರ್ಜಿಗಳು ಬೆಂಗಳೂರಿನ ಪ್ರಧಾನ ಪೀಠ ಮತ್ತು ಕಲಬುರ್ಗಿಯ ಪೀಠಗಳಲ್ಲೂ ದಾಖಲಾಗಿದ್ದವು. ಈ ಅರ್ಜಿಗಳ ವಿಚಾರಣೆ ನಡೆಸಿದ್ದ ಸಮನ್ವಯ ಪೀಠಗಳು ಅರ್ಜಿದಾರರ ವಿರುದ್ಧ ಆತುರದ ಕ್ರಮ ಬೇಡ ಎಂಬ ಮಧ್ಯಂತರ ಆದೇಶ ನೀಡಿದ್ದವು. ಆದರೆ ಇದೀಗ ನ್ಯಾ. ನಾಗಪ್ರಸನ್ನ ಅವರ ಆದೇಶದಿಂದಾಗಿ ಈ ಎಲ್ಲಾ ಅರ್ಜಿಗಳೂ ಅನೂರ್ಜಿತವಾಗಲಿವೆ.
ಜನೌಷಧ ಕೇಂದ್ರಗಳು ಶೇ 50 ರಿಂದ 90ರವರೆಗೂ ಕಡಿಮೆ ದರದಲ್ಲಿ ಔಷಧಗಳನ್ನು ಒದಗಿಸುತ್ತವೆ. ಇದರಿಂದ ಬಡತನ ರೇಖೆಗಿಂತ ಕೆಳಗಿರುವವರು, ಹಿರಿಯ ನಾಗರಿಕರು, ದಿನಗೂಲಿ ನೌಕರರು, ದೀರ್ಘಕಾಲದ ರೋಗಗಳಿಂದ ಬಳಲುತ್ತಿರುವವರು ಮತ್ತು ನಿತ್ಯವೂ ಔಷಧಗಳ ಅಗತ್ಯ ಹೊಂದಿರುವವರಿಗೆ ಈ ಸೇವೆ ಅತ್ಯಂತ ಸಹಕಾರಿಯಾಗಿದೆ. ಇಂತಹ ಔಷಧ ಮಳಿಗೆಗಳನ್ನು ಸ್ಥಗಿತಗೊಳಿಸಿರುವುದು ಸಾರ್ವಜನಿಕರ ಆರೋಗ್ಯದ ಹಕ್ಕಿನ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿತ್ತು.