Karnataka High Court 
ಸುದ್ದಿಗಳು

ʼಪೊಲೀಸ್‌ ಪಬ್ಲಿಕ್‌ ಪ್ರೆಸ್‌ ಆರ್ಮಿʼ ಹೆಸರಲ್ಲಿ ಟ್ರಸ್ಟ್‌ ಮಾಡಲು ಅಧಿಕಾರ ನೀಡಿದವರು ಯಾರು? ರೌಡಿ ಶೀಟರ್‌ ಅರ್ಜಿ ವಜಾ

“ಏನಿದು ಪೊಲೀಸ್‌ ಪಬ್ಲಿಕ್‌ ಪ್ರೆಸ್‌ ಆರ್ಮಿ ಟ್ರಸ್ಟ್‌? ಈ ಟ್ರಸ್ಟ್‌ಗೆ ತಡೆ ನೀಡುವ ಪ್ರಶ್ನೆಯೇ ಇಲ್ಲ. ಈ ಟ್ರಸ್ಟ್‌ಗೆ ನಿಮಗೆ ಅಧಿಕಾರ ನೀಡಿದವರು ಯಾರು? ದೇಣಿಗೆಗೆ ಏನು ಬೇಕಾದರೂ ಮಾಡಬಹುದೇ?” ಎಂದು ಕಿಡಿಕಾರಿದ ನ್ಯಾಯಾಲಯ.

Bar & Bench

ʼಪೊಲೀಸ್‌ ಪಬ್ಲಿಕ್‌ ಪ್ರೆಸ್‌ ಆರ್ಮಿʼ ಹೆಸರಿನಲ್ಲಿ ಟ್ರಸ್ಟ್‌ ಆರಂಭಿಸಿ ನೈತಿಕ ಪೊಲೀಸ್‌ಗಿರಿ ಮಾಡುತ್ತಿದ್ದ ಆರೋಪದ ಮೇಲೆ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ರೌಡಿ ಶೀಟರ್‌ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಬುಧವಾರ ವಜಾಗೊಳಿಸಿದೆ.

ತುಮಕೂರಿನ ಪಿ ಎಚ್‌ ಕಾಲೊನಿಯ ಶನ್ನು ಅಲಿಯಾಸ್‌ ಮೊಹಮ್ಮದ್‌ ಕಾಕ್ಲಂಡೈಲ್‌, ಬೆಂಗಳೂರು ದಕ್ಷಿಣದ ಬಾಗ್‌ ಲೇಔಟ್‌ನ ಗೌಸ್‌ ಪಾಷಾ ಹಾಗೂ ಬೆಂಗಳೂರು ಉತ್ತರದ ಡಿ ಗ್ರೂಪ್‌ ಲೇಔಟ್‌ನ ಆಶಿಯಾ ರಿನ್ಯಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸಸ್ಯ ಪೀಠ ನಡೆಸಿತು.

ಅರ್ಜಿದಾರರ ಪರ ವಕೀಲ ಜಿ ಎ ಪ್ರೇಮ್‌ ಕುಮಾರ್‌ ಅವರು “ಟ್ರಸ್ಟ್‌ ನೋಂದಣಿ ಮಾಡಿಸಿ ರಕ್ತದಾನ ಕ್ಯಾಂಪ್‌ ಮಾಡಲಾಗುತ್ತದೆ” ಎಂದರು.

ಆಗ ಪೀಠವು “ಏನಿದು ಪೊಲೀಸ್‌ ಪಬ್ಲಿಕ್‌ ಪ್ರೆಸ್‌ ಆರ್ಮಿ ಟ್ರಸ್ಟ್‌? ಈ ಟ್ರಸ್ಟ್‌ಗೆ ತಡೆ ನೀಡುವ ಪ್ರಶ್ನೆಯೇ ಇಲ್ಲ. ಈ ಟ್ರಸ್ಟ್‌ಗೆ ನಿಮಗೆ ಅಧಿಕಾರ ನೀಡಿದವರು ಯಾರು? ದೇಣಿಗೆಗೆ ಏನು ಬೇಕಾದರೂ ಮಾಡಬಹುದೇ?” ಎಂದು ಕಿಡಿಕಾರಿತು.

ಸರ್ಕಾರದ ಪರ ವಕೀಲರು “ಆರೋಪಿಯು ರೌಡಿ ಶೀಟರ್‌ ಆಗಿದ್ದಾನೆ” ಎಂದರು.

ಇದನ್ನು ಆಲಿಸಿದ ಪೀಠವು ಆರೋಪ ಮುಕ್ತಿ ಕೋರಿ ಸಕ್ಷಮ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿ, ಅರ್ಜಿ ವಜಾಗೊಳಿಸಿತು.

ಪ್ರಕರಣದ ಹಿನ್ನೆಲೆ: ಅರ್ಜಿದಾರರು ಪೊಲೀಸ್‌ ಪಬ್ಲಿಕ್‌ ಪ್ರೆಸ್‌ ಆರ್ಮಿ ಎಂಬ ಟ್ರಸ್ಟ್‌ ಹೆಸರು ಹಾಕಿಕೊಂಡು ಅಮಾಯಕ ಯುವಕರಿಗೆ ಪ್ರಚೋದನೆ ನೀಡುತ್ತಾ, ಅವರುಗಳನ್ನು ಸದಾಶಿವನಗರದ ಕನ್ನಿಕಾ ಶಾಲೆಯ ಬಳಿ ಸೇರಿಸಿಕೊಂಡು, ನಾವು ಪೊಲೀಸರಿದ್ದಂತೆ ಎಂದು ಸುಳ್ಳು ಹೇಳುತ್ತಾ, ನಿಮ್ಮ ದೂರುಗಳೇನಾದರೂ ಇದ್ದಲ್ಲಿ ನಮ್ಮ ಪೊಲೀಸ್‌ ಪಬ್ಲಿಕ್‌ ಪ್ರೆಸ್‌ ಆರ್ಮಿ ಸದಸ್ಯರಿಗೆ ಹೇಳಿದರೆ ನಾವು ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳಿ, ಆ ಸಂಸ್ಥೆಯ ಸದಸ್ಯರುಗಳು ತಾವುಗಳು ಲೋಕ ನೌಕರರಂತೆ ಎಂದು ಹೇಳಿಕೊಂಡು ನಟಿಸುತ್ತಾ, ಪೊಲೀಸ್‌ ಇಲಾಖೆ ಹೆಸರು ಹೇಳಿಕೊಂಡು, ಇಲಾಖೆಯ ಹೆಸರಿಗೆ ಮಸಿ ಬಳಿಯುವ ಕೃತ್ಯ ಹಾಗೂ ಸಾರ್ವಜನಿಕ ಕೇಡಿಗೆ ಕಾರಣವಾಗುವ ಹೇಳಿಕೆ ನೀಡುತ್ತಾ, ನೈತಿಕ ಪೊಲೀಸ್‌ಗಿರಿ ಮಾಡುತ್ತಿದ್ದರು ಎಂದು ಆರೋಪಿಸಿ ಸ್ವಯಂಪ್ರೇರಿತವಾಗಿ ತುಮಕೂರಿನ ತಿಲಕ್‌ ನಗರ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಬಿಎನ್‌ಎಸ್‌ ಸೆಕ್ಷನ್‌ಗಳಾದ 204, 353(1)(b), 190 ಅಡಿ ಪ್ರಕರಣ ದಾಖಲಾಗಿದೆ.