Bombay High Court  
ಸುದ್ದಿಗಳು

ಅಕ್ರಮವಾಗಿ ಒಬಿಸಿ ಪ್ರಮಾಣಪತ್ರ ಪಡೆದಿದ್ದರೂ ವೈದ್ಯೆಯ ಎಂಬಿಬಿಎಸ್ ಪದವಿಯನ್ನು ಬಾಂಬೆ ಹೈಕೋರ್ಟ್ ಎತ್ತಿಹಿಡಿದಿದ್ದೇಕೆ?

ಎಂಬಿಬಿಎಸ್ ಕೋರ್ಸ್‌ನಲ್ಲಿ ಅರ್ಜಿದಾರೆಯ ಪ್ರವೇಶಾತಿಯನ್ನು ಮುಕ್ತ ವರ್ಗದಡಿ ಪರಿಗಣಿಸಬೇಕೆ ವಿನಾ ಒಬಿಸಿ ವರ್ಗದಡಿ ಅಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

Bar & Bench

ಅಕ್ರಮ ವಿಧಾನ ಬಳಸಿ ಹಿಂದುಳಿದ ವರ್ಗಗಳ ಅಡಿ ಎಂಬಿಬಿಎಸ್‌ ಕೋರ್ಸ್‌ಗೆ ಪ್ರವೇಶಾತಿ ಪಡೆದ ವೈದ್ಯೆಯೊಬ್ಬರ ಪದವಿಯನ್ನು ಬಾಂಬೆ ಹೈಕೋರ್ಟ್‌ ಕಳೆದ ವಾರ ಮಾನ್ಯಗೊಳಿಸಿದೆ [ಲುಬ್ನಾ ಶೌಕತ್ ಮುಜಾವರ್ ಮತ್ತು ಮಹಾರಾಷ್ಟ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

"ನಮ್ಮ ದೇಶದಲ್ಲಿ, ಜನಸಂಖ್ಯೆಗೆ ತಕ್ಕಂತೆ ವೈದ್ಯರ ಸಂಖ್ಯೆ ಇಲ್ಲವಾಗಿದ್ದು, ಪ್ರವೇಶಾತಿ ಪಡೆದ ವಿಧಾನ ಅನ್ಯಾಯದಿಂದ ಕೂಡಿದ್ದು ಇನ್ನೊಬ್ಬ ಅರ್ಹ ಅಭ್ಯರ್ಥಿಗೆ ವಂಚನೆಯಾಗಿದ್ದರೂ ಈ ದೇಶದ ಜನ ಒಬ್ಬ ವೈದ್ಯರನ್ನು ಕಳೆದುಕೊಳ್ಳುವುದರಿಂದ ಅರ್ಜಿದಾರರು ಪಡೆದ ಅರ್ಹತೆಯನ್ನು ಹಿಂತೆಗೆದುಕೊಳ್ಳುವ ಯಾವುದೇ ಕ್ರಮ ರಾಷ್ಟ್ರೀಯ ನಷ್ಟವಾಗುತ್ತದೆ” ಎಂದು ನ್ಯಾಯಮೂರ್ತಿಗಳಾದ ಎ ಎಸ್ ಚಂದೂರ್‌ಕರ್‌ ಮತ್ತು ಜಿತೇಂದ್ರ ಜೈನ್ ಅವರಿದ್ದ ಪೀಠ ನುಡಿದಿದೆ.

ಆದರೆ ಎಂಬಿಬಿಎಸ್ ಕೋರ್ಸ್‌ನಲ್ಲಿ ಅರ್ಜಿದಾರರ ಪ್ರವೇಶಾತಿಯನ್ನು ಮುಕ್ತ ವರ್ಗದಡಿ ಪರಿಗಣಿಸಬೇಕೆ ವಿನಾ ಒಬಿಸಿ ವರ್ಗದಡಿ ಅಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಸುಳ್ಳು ಕೆನೆಪದರರಹಿತ ಒಬಿಸಿ ಪ್ರಮಾಣಪತ್ರ ಪಡೆದಿರುವ ಅರ್ಜಿದಾರರ ಎಂಬಿಬಿಎಸ್ ಕೋರ್ಸ್‌ ಪ್ರವೇಶಾತಿಯನ್ನು ರದ್ದುಪಡಿಸಲಾಗಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಅ 2012-13ರ ಶೈಕ್ಷಣಿಕ ವರ್ಷದಲ್ಲಿ ಸಿಯಾನ್‌ನಲ್ಲಿರುವ ಲೋಕಮಾನ್ಯ ತಿಲಕ್ ಮುನ್ಸಿಪಲ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ  ಒಬಿಸಿ ವರ್ಗದಡಿ ಅರ್ಜಿದಾರೆ ಸೀಟು ಪಡೆದಿದ್ದನ್ನು ರಿಟ್‌ ಅರ್ಜಿ ಮುಖೇನ ಆಕ್ಷೇಪಿಸಿದ್ದರಿಂದ ಅವರ ಪ್ರವೇಶಾತಿಯನ್ನು ಪರಿಶೀಲನೆಗೆ ಒಳಪಡಿಸಲಾಗಿತ್ತು.  

ಈ ಪ್ರಮಾಣಪತ್ರ ಪಡೆದಿದ್ದ ಅರ್ಜಿದಾರೆಯ ತಂದೆ ತಪ್ಪು ಮಾಹಿತಿ ನೀಡಿದ್ದು ಬಯಲಾಗಿತ್ತು. ಅರ್ಜಿದಾರೆಯ ವೈವಾಹಿಕ ಸ್ಥಿತಿ, ವೇತನ ಕುರಿತು ಸುಳ್ಳು ಮಾಹಿತಿ ನೀಡಿದ್ದಾಗಿ ಸಮಿತಿ ತೀರ್ಮಾನಿಸಿತ್ತು. ಇದರಿಂದಾಗಿ 2013ರಲ್ಲಿ ಜಾತಿ ಪ್ರಮಾಣಪತ್ರ ರದ್ದಾಗಿ ಆಕೆಯ ಕೋರ್ಸ್‌ ಪ್ರವೇಶಾತಿಯನ್ನೂ ರದ್ದುಗೊಳಿಸಲಾಗಿತ್ತು.

ರದ್ದತಿ ಪ್ರಶ್ನಿಸಿ ಅರ್ಜಿದಾರೆ ಹೈಕೋರ್ಟ್‌ ಮೆಟ್ಟಿಲೇರಿದಾಗ 2014ರಲ್ಲಿ ಪ್ರಕರಣದ ಫಲಿತಾಂಶ ಬರುವವರೆಗೆ ಆಕೆ ಎಂಬಿಬಿಎಸ್‌ ಕೋರ್ಸ್‌ ಮುಂದುವರೆಸಲು ಅದು ಮಧ್ಯಂತರ ಆದೇಶ ನೀಡಿತ್ತು.

ಅರ್ಜಿದಾರರ ತಂದೆ ಪಡೆದ ಸುಳ್ಳು ಪ್ರಮಾಣಪತ್ರ ಹಿಂತೆಗೆದುಕೊಳ್ಳುವ ವಿಚಾರಣಾ ಸಮಿತಿಯ ನಿರ್ಧಾರ ಸಮರ್ಥನೀಯವಾಗಿದೆ ಎಂದೇ ಆಗ ನ್ಯಾಯಾಲಯ ನುಡಿದಿತ್ತು.

ಆದರೆ 2014ರ ಮಧ್ಯಂತರ ಆದೇಶದ ದೆಸೆಯಿಂದ, ಅರ್ಜಿದಾರೆ ಎಂಬಿಬಿಎಸ್ ಕೋರ್ಸ್ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು ಆಕೆಯ ವಿದ್ಯಾರ್ಹತೆಯನ್ನು ಈಗ ಹಿಂಪಡೆಯದಿರುವುದು ಸೂಕ್ತ ಎಂದು ನ್ಯಾಯಾಲಯ ಹೇಳಿದೆ.