JSK movie poster 
ಸುದ್ದಿಗಳು

ʼಸಿನಿಮಾದಲ್ಲಿ ಅತ್ಯಾಚಾರ ಸಂತ್ರಸ್ತೆ ಪಾತ್ರಕ್ಕೆ ಜಾನಕಿ ಎಂದು ಹೆಸರಿಸಬಾರದೆ?ʼ ಕೇರಳ ಹೈಕೋರ್ಟ್ ಪ್ರಶ್ನೆ

ಅತ್ಯಾಚಾರಿಯ ಹೆಸರು ರಾಮ, ಕೃಷ್ಣ ಎಂದು ಇದ್ದಿದ್ದರೆ ಆಗ ಬೇರೆಯದೇ ಅರ್ಥಬರುತ್ತಿತ್ತು. ಇಲ್ಲಿ ಸಂತ್ರಸ್ತೆಯು ನ್ಯಾಯಕ್ಕಾಗಿ ಹೋರಾಡುವ ನಾಯಕಿ ಎಂದು ನ್ಯಾಯಮೂರ್ತಿ ನಗರೇಶ್ ಹೇಳಿದರು.

Bar & Bench

ಕೇಂದ್ರ ಸಚಿವ ಸುರೇಶ್ ಗೋಪಿ ನಟಿಸಿರುವ ಇನ್ನಷ್ಟೇ ತೆರೆ ಕಾಣಬೇಕಿರುವ ಜೆ ಎಸ್ ಕೆ ಜಾನಕಿ ವರ್ಸಸ್ ಸ್ಟೇಟ್ ಆಫ್ ಕೇರಳ ಚಿತ್ರದ ಪ್ರಧಾನ ಪಾತ್ರದ ಹೆಸರಿಗೆ ಸಂಬಂಧಿಸಿದಂತೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಎತ್ತಿದ ಆಕ್ಷೇಪಣೆ ಕುರಿತಂತೆ ಕೇರಳ ಹೈಕೋರ್ಟ್ ಹಲವು ಪ್ರಶ್ನೆಗಳನ್ನು ಸೋಮವಾರ ಕೇಳಿದೆ.

ಜಾನಕಿ ಎಂಬ ಹೆಸರು ಹಿಂದೂ ದೇವತೆ ಸೀತೆಯನ್ನು ನೆನಪಿಸುತ್ತಿದ್ದು ಚಿತ್ರದಲ್ಲಿ ಆ ಹೆಸರಿನ ಬಳಕೆ ಧರ್ಮಗಳನ್ನು ಅವಹೇಳನ ಮಾಡುವ ಹೆಸರು ಮತ್ತು ವಸ್ತುವಿಷಯಗಳ ನಿಯಮಾವಳಿಯ ಉಲ್ಲಂಘನೆಯಾಗಿದೆ ಎಂದು ಉಪ ಸಾಲಿಸಿಟರ್ ಜನರಲ್ (ಡಿಎಸ್‌ಜಿಐ) ಒ ಎಂ ಶಾಲಿನಾ ತಿಳಿಸಿದರು.

ನ್ಯಾಯಕ್ಕಾಗಿ ಹೋರಾಡುತ್ತಿರುವ ಅತ್ಯಾಚಾರ ಸಂತ್ರಸ್ತೆಯ ಪಾತ್ರಕ್ಕೆ ಜಾನಕಿ ಎಂದು ಏಕೆ ಹೆಸರಿಸಬಾರದು ಎಂದು ಅರ್ಥವಾಗುತ್ತಿಲ್ಲ ಎಂಬುದಾಗಿ ನ್ಯಾಯಮೂರ್ತಿ ಎನ್ ನಾಗರೇಶ್ ಈ ವೇಳೆ ಹೇಳಿದರು.

"ಆಕೆ ಸಂತ್ರಸ್ತೆ ತಾನೆ? ಅತ್ಯಾಚಾರಿಯ ಹೆಸರು ರಾಮ, ಕೃಷ್ಣ, ಜಾನಕಿ ಅಂತ ಇದ್ದಿದ್ದರೆ ನನಗೆ ಅರ್ಥವಾಗುತ್ತಿತ್ತು. ಇಲ್ಲಿ ಆಕೆ ನ್ಯಾಯಕ್ಕಾಗಿ ಹೋರಾಡುವ ನಾಯಕಿ" ಎಂದು ನ್ಯಾಯಮೂರ್ತಿ ನಗರೇಶ್ ಹೇಳಿದರು.

ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿಗೆ ಸಂಬಂಧಿಸಿದಂತೆ ಸಿಬಿಎಫ್‌ಸಿ ಹಸ್ತಕ್ಷೇಪ ಮಾಡುತ್ತಿದೆ ಎಂದು ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದರು.

"ನೀರ್ದೇಶಕರು ಹಾಗೂ ಕಲಾವಿದರಿಗೆ ನೀವು ಈಗ ಯಾವ ಹೆಸರನ್ನು ಬಳಸಬೇಕು, ಯಾವ ಕತೆ ಹೇಳಬೇಕು ಎಂದು ಆದೇಶಿಸಲು ಹೊರಟಿದ್ದೀರೇನು? ಅವರೇಕೆ ಹೆಸರು ಬದಲಾಯಿಸಬೇಕು? ಜಾನಕಿ ಎನ್ನುವ ಹೆಸರಿನಲ್ಲಿ ತಪ್ಪೇನಿದೆ? ಇದು ಹೇಗೆ ಧರ್ಮವೊಂದರ ಅವಹೇಳನವಾಗುತ್ತದೆ?... ಇದು ಕಲಾವಿದರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಚಾರ. ಇದರೊಳಗೆ ನೀವು ಮಧ್ಯಪ್ರವೇಶಿಸುವಂತಿಲ್ಲ. ಹಾಗೆಂದು ಇದೇನೂ ಪರಿಪೂರ್ಣವಲ್ಲ, ಆದರೆ, ನಿಮ್ಮ ಬಳಿ ಸಮರ್ಥನೀಯ ಕಾರಣವಿಲ್ಲ," ಎಂದು ನ್ಯಾಯಮೂರ್ತಿಗಳು ಮೌಖಿಕವಾಗಿ ತಮ್ಮ ಅಸಮಾಧಾನ ಸೂಚಿಸಿದರು.

ಪ್ರಕರಣದ ಬಗ್ಗೆ ಸಿಬಿಎಫ್‌ಸಿ ತಳೆದಿರುವ ನಿಲುವಿಗೆ ಕಾರಣ ಏನು ಎಂಬುದನ್ನು ವಿವರಿಸುವ ಹೇಳಿಕೆ ಅಥವಾ ಪ್ರತಿ-ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯ ಇಂದು ಡಿಎಸ್‌ಜಿಐ ಅವರಿಗೆ ನಿರ್ದೇಶನ ನೀಡಿತು.

ಸಿನಿಮಾದ ಸೆನ್ಸಾರ್ ಪ್ರಮಾಣೀಕರಣ ವಿಳಂಬವಾಗುತ್ತಿರುವ ಬಗ್ಗೆ ಚಿತ್ರ ನಿರ್ಮಾಣ ಕಂಪನಿ ಕಾಸ್ಮೋಸ್ ಎಂಟರ್‌ಟೇನ್‌ಮೆಂಟ್‌ ಅರ್ಜಿ ಸಲ್ಲಿಸಿತ್ತು.