Justice Yashwant Varma  
ಸುದ್ದಿಗಳು

ಆಂತರಿಕ ಸಮಿತಿ ಸಂವಿಧಾನಬಾಹಿರವಾಗಿದ್ದರೆ ಅದರೆದುರು ನೀವೇಕೆ ಹಾಜರಾದಿರಿ? ನ್ಯಾ. ವರ್ಮಾಗೆ ಸುಪ್ರೀಂ ಪ್ರಶ್ನೆ

ಸಮಿತಿಯ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ನೀವು, ಸಮಿತಿ ತನಿಖೆ ಮುಗಿಸಿ ವರದಿ ಸಲ್ಲಿಸುವವರೆಗೆ ಏಕೆ ಕಾಯುತ್ತಿದ್ದೀರಿ ಎಂದು ನ್ಯಾಯಮೂರ್ತಿ ವರ್ಮಾ ಅವರನ್ನು ಪೀಠ ಕೇಳಿತು.

Bar & Bench

ದೆಹಲಿಯ ತಮ್ಮ ಅಧಿಕೃತ ನಿವಾಸದಲ್ಲಿ ಅಪಾರ ಪ್ರಮಾಣದ ನಗದು ದೊರೆತ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ವರದಿ ನೀಡಿದ ತ್ರಿಸದಸ್ಯ ನ್ಯಾಯಾಂಗ ಆಂತರಿಕ ಸಮಿತಿಯ ಕಾನೂನುಬದ್ಧತೆಯನ್ನು ನ್ಯಾ ಯಶವಂತ್‌ ವರ್ಮಾ ಪ್ರಶ್ನೆ ಮಾಡಿರುವುದಕ್ಕೆ ಸುಪ್ರೀಂ ಕೋರ್ಟ್‌ ಸೋಮವಾರ ಆಕ್ಷೇಪ ವ್ಯಕ್ತಪಡಿಸಿದೆ.

ಸಮಿತಿ ತನ್ನ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸುವವರೆಗೂ ಕಾದು ನಂತರ ಸಮಿತಿಯ ಕಾನೂನು ಬದ್ಧತೆ ಪ್ರಶ್ನಿಸಲು ಕಾರಣವೇನು ಎಂದು ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಎ ಜಿ ಮಸೀಹ್‌ ಅವರಿದ್ದ ಪೀಠ ಪ್ರಶ್ನಿಸಿತು.

ಸಮಿತಿಯನ್ನು ನೇಮಿಸಿದಾಗಲೇ ನೀವೇಕೆ ಪ್ರಶ್ನೆ ಮಾಡಲಿಲ್ಲ? ಏಕೆ ಕಾಯುತಿದ್ದಿರಿ? ನ್ಯಾಯಮೂರ್ತಿಗಳು ಹಿಂದೆ ಇಂತಹ ವಿಚಾರಣೆಗಳಿಗೆ ಹಾಜರಾಗದೆ ದೂರ ಇದ್ದರು” ಎಂದು ನ್ಯಾ. ದತ್ತ ಪ್ರಶ್ನಿಸಿದರು.

ನ್ಯಾ. ವರ್ಮಾ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಕಪಿಲ್‌ ಸಿಬಲ್‌ “ ನ್ಯಾ. ವರ್ಮಾ ಅವರ ವಿರುದ್ಧ ಹಾಗೆ ಆರೋಪ ಮಾಡಲಾಗದು. ನಗದು ಯಾರಿಗೆ ಸೇರಿದೆ ಎಂಬುದನ್ನು ಸಮಿತಿ ಪತ್ತೆ ಹಚ್ಚುತ್ತದೆ ಎಂದು ಭಾವಿಸಿ ನ್ಯಾ. ವರ್ಮಾ ವಿಚಾರಣೆಗೆ ಹಾಜರಾಗಿದ್ದರು ಎಂದು ಸಮರ್ಥಿಸಿಕೊಂಡರು.

ಸಮಿತಿಯನ್ನು ನೇಮಿಸಿದಾಗಲೇ ನೀವೇಕೆ ಪ್ರಶ್ನೆ ಮಾಡಲಿಲ್ಲ? ಏಕೆ ಕಾಯುತಿದ್ದಿರಿ?

ನ್ಯಾ. ವರ್ಮಾ ಅವರಿಗೆ ಸುಪ್ರೀಂ ಕೋರ್ಟ್‌ ಪ್ರಶ್ನೆ

ನಗದು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ನ್ಯಾಯಮೂರ್ತಿ ಹುದ್ದೆಯಿಂದ ತಮ್ಮನ್ನು ವಜಾಗೊಳಿಸುವಂತೆ ಸುಪ್ರೀಂ ಕೋರ್ಟ್‌ ನಿಕಟಪೂರ್ವ ಮುಖ್ಯ ನ್ಯಾಯಮೂರ್ತಿ ಸಂಜೀವ್‌ ಖನ್ನಾ ಅವರು ಮಾಡಿರುವ ಶಿಫಾರಸು ಸಂವಿಧಾನ ಬಾಹಿರ ಮತ್ತು ಅದು ಅವರ ಅಧಿಕಾರ ವ್ಯಾಪ್ತಿ ಮೀರಿದ್ದು ಎಂಬುದಾಗಿ ಘೋಷಿಸಬೇಕು ಎಂದು ನ್ಯಾ. ವರ್ಮಾ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.

ಯಾವುದೇ ಔಪಚಾರಿಕ ದೂರು ಇಲ್ಲದಿದ್ದರೂ ತಮ್ಮ ವಿರುದ್ಧ ಆಂತರಿಕ ಸಮಿತಿ ವರದಿ ನೀಡಿರುವುದು ಅನುಚಿತ ಮತ್ತು ಅಮಾನ್ಯವಾದುದು. ಅಲ್ಲದೆ ಘಟನೆಗೆ ಸಂಬಂಧಿಸಿದ ವಿವರಗಳನ್ನು ಸುಪ್ರೀಂ ಕೋರ್ಟ್‌ ಪತ್ರಿಕಾ ಪ್ರಕಟಣೆ ಮೂಲಕ ಬಹಿರಂಗಪಡಿಸಿದ್ದರಿಂದ ತಾವು ಹಿಂದೆಂದೂ ನಡೆಯದಂತಹ ಮಾಧ್ಯಮ ವಿಚಾರಣೆಗೆ ತುತ್ತಾಗುವಂತಾಯಿತು ಎಂದು ಅವರು ದೂರಿದ್ದರು.

ನ್ಯಾ. ವರ್ಮಾ ಅವರು ಸಲ್ಲಿಸಿರುವ ಅರ್ಜಿಯಲ್ಲಿ ನ್ಯೂನತೆಗಳಿವೆ ಎಂದು ಇಂದಿನ ವಿಚಾರಣೆ ವೇಳೆ ಪೀಠ ಹೇಳಿತು. ಅಲ್ಲದೆ ಸಮಿತಿಯ ವರದಿಯನ್ನು ಕೂಡ ನ್ಯಾ. ವರ್ಮಾ ಅವರು ದಾಖಲೆಯಲ್ಲಿ ಸಲ್ಲಿಸಿಲ್ಲ ಎಂದಿತು. ಆದರೆ ಅದನ್ನು ಸಲ್ಲಿಸಲಾಗಿದೆ ಎಂಬುದಾಗಿ ಸಿಬಲ್‌ ಹೇಳಿದರು.

ನ್ಯಾಯಮೂರ್ತಿ ವರ್ಮಾ ವಿರುದ್ಧ ನಡೆದ ವಿಚಾರಣೆಯಿಂದ ಹೇಗೆ ಸಂವಿಧಾನದ ಉಲ್ಲಂಘನೆಯಾಗುತ್ತದೆ ಎಂಬುದನ್ನು ವಿವರಿಸುವಂತೆ ನ್ಯಾಯಾಲಯ ಸಿಬಲ್‌ ಅವರನ್ನು ಕೇಳಿತು.

ಕಾನೂನಿನಲ್ಲಿ ನಿಗದಿಪಡಿಸಿದ ಪ್ರಕ್ರಿಯೆಯನ್ನು ಹೊರತುಪಡಿಸಿ ನ್ಯಾಯಮೂರ್ತಿ ವರ್ಮಾ ಅವರ ನಡೆಯನ್ನು ವಿಚಾರಣೆ ನಡೆಸಲಾಗದು ಎಂದು ಅವರು ವಾದಿಸಿದರು. ದುಷ್ಕೃತ್ಯ ಸಾಬೀತಾಗದ ಹೊರತು ಸಂಸತ್ತಿನಲ್ಲಿಯೂ ನ್ಯಾಯಾಧೀಶರ ನಡವಳಿಕೆಯನ್ನು ಚರ್ಚಿಸಬಾರದು ಎಂಬುದು ಸಾಂವಿಧಾನಿಕ ಯೋಜನೆಯಾಗಿದ್ದರೆ ಅದನ್ನು ಬೇರೆಡೆ ಚರ್ಚಿಸುವುದು ಸ್ವೀಕಾರಾರ್ಹವಲ್ಲ. ನ್ಯಾ ವರ್ಮಾ ಮನೆಯಲ್ಲಿ ನಗದು ಪತ್ತೆಯಾದ ಪ್ರಕರಣದ ದೃಶ್ಯಾವಳಿಯನ್ನು ಬಿಡುಗಡೆ ಮಾಡುವುದು ಅದನ್ನು ಜಾಲತಾಣದಲ್ಲಿ ಪ್ರಕಟಿಸುವುದು ಪರಿಣಾಮ ಸಾರ್ವಜನಿಕರಲ್ಲಿ ಕೋಲಾಹಲ ಉಂಟು ಮಾಡುವುದು, ನ್ಯಾಯಾಧೀಶರ ವಿರುದ್ಧ ಮಾಧ್ಯಮಗಳಲ್ಲಿ ಆರೋಪ ಮಾಡುವುದು, ಸಾರ್ವಜನಿಕರ ಅವಲೋಕನಗಳು ಹಾಗೂ ನ್ಯಾಯಾಧೀಶರ ನಡೆ ಬಗ್ಗೆ ಚರ್ಚಿಸುವುದು ಎಲ್ಲವೂ ನಿಷಿದ್ಧ. ಹಾಗೆಲ್ಲಾ ನಡೆಯಲು ವಿಚಾರಣಾ ಪ್ರಕ್ರಿಯೆ ಅವಕಾಶ ಮಾಡಿಕೊಟ್ಟಿದ್ದರೆ ಅದು ಸಾಂವಿಧಾನಿಕ ಪೀಠ ನೀಡಿದ್ದ ತೀರ್ಪಿನ ಉಲ್ಲಂಘನೆಯಾಗುತ್ತದೆ ಎಂದು ಸಿಬಲ್‌ ಹೇಳಿದರು.

ಆದರೆ ಆಂತರಿಕ ವಿಚಾರಣೆ ನಡೆಸಬಾರದು ಎಂದು ತೀರ್ಪು ಹೇಳಿದೆಯೇ ಎಂಬುದಾಗಿ ಪೀಠ ಕೇಳಿತು. ಇದಕ್ಕೆ ಪ್ರತಿಕ್ರಿಯಿಸಿದ ಸಿಬಲ್‌ ಆ ವರದಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬಹುದೇ ಅದನ್ನು ರಾಜಕೀಯಗೊಳಿಸಬಹುದೇ ಎಂದು ಪ್ರಶ್ನಿಸಿದರು.

 ನಂತರ ನ್ಯಾಯಾಲಯ ನ್ಯಾ ವರ್ಮಾ ಅವರು ಸಮಿತಿಯೆದುರು ಹಾಜರಾಗಿದ್ದೇಕೆ ಮೊದಲೇ ಏಕೆ ಆಕ್ಷೇಪಿಸಲಿಲ್ಲ ಎಂದು ಕೇಳಿತು. ಪ್ರಕರಣದ ಮುಂದಿನ ವಿಚಾರಣೆ ಜುಲೈ 30ರಂದು ನಡೆಯಲಿದೆ.