ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಮುಂಭಾಗದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಲ್ಲಿಸಿರುವ ಸ್ಥಿತಿಗತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಏಕೆ ಇಡಬೇಕು ಎಂದು ರಾಜ್ಯ ಸರ್ಕಾರವನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ಪ್ರಶ್ನಿಸಿತು.
ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ ಕಾಮೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು “ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಅಮಿಕಸ್ ಕ್ಯೂರಿ ಎಸ್ ಸುಶೀಲಾ ಅವರಿಗೆ ಸಲ್ಲಿಸಲಾಗಿದೆ. ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರವು ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಕುನ್ಹಾ ನೇತೃತ್ವದದಲ್ಲಿ ವಿಚಾರಣಾ ಆಯೋಗ ರಚಿಸಿದ್ದು, ಕೆಲವೇ ದಿನಗಳಲ್ಲಿ ಆ ವರದಿಯೂ ಕೈಸೇರಲಿದೆ. ಇದನ್ನು ನ್ಯಾಯಾಲಯದ ಮುಂದೆ ಇಡಲಾಗದು. ಅದಕ್ಕಾಗಿ 10 ದಿನ ಕಾಲಾವಕಾಶ ನೀಡಬೇಕು” ಎಂದು ಮನವಿ ಮಾಡಿದರು.
ಆಗ ಪೀಠವು ದಾಖಲೆಗಳನ್ನು ಏಕೆ ಮುಚ್ಚಿದ ಲಕೋಟೆಯಲ್ಲಿ ಇಡಬೇಕು ಎಂದು ಪ್ರಶ್ನಿಸಿತು. ಅಮಿಕಸ್ ಕ್ಯೂರಿ ಸುಶೀಲಾ ಅವರು “ಹಲವು ಬಾರಿ ವಿಚಾರಣೆ ಮುಂದೂಡಲಾಗಿದೆ. ಯಾವುದೇ ಸಮರ್ಥನೀಯ ಕಾರಣಗಳಿಲ್ಲದೇ ರಾಜ್ಯ ಸರ್ಕಾರವು ಏತಕ್ಕಾಗಿ ವಸ್ತುಸ್ಥಿತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಇಡಲು ಕೋರುತ್ತಿದೆ” ಎಂದು ಪ್ರಶ್ನಿಸಿದರು.
ಮುಂದುವರಿದು, “10-15 ದಿನಗಳ ಬಳಿಕ ದಾಖಲೆಗಳನ್ನು ಬಹಿರಂಗಗೊಳಿಸಬಹುದು ಎಂಬ ರಾಜ್ಯ ಸರ್ಕಾರದ ನಿಲುವನ್ನು ನಮ್ಮ ನ್ಯಾಯದಾನ ವ್ಯವಸ್ಥೆಯು ಒಪ್ಪುವುದಿಲ್ಲ. ಪಾರದರ್ಶಕತೆ ಅಗತ್ಯ. ನ್ಯಾಯಾಲಯಕ್ಕೆ ಮಾತ್ರ ಮಾಹಿತಿ ಇದೆ. ರಾಜ್ಯ ಸರ್ಕಾರಕ್ಕೆ ಮಾತ್ರ ಆ ಮಾಹಿತಿ ಇದೆ. ವಿಸ್ತೃತ ನೆಲೆಯಲ್ಲಿ ಇಂಥ ಸಂದರ್ಭದಲ್ಲಿ ಅನುಪಾತ ತತ್ವ, ಸಕಾರಣ ಮತ್ತು ಗೌಪ್ಯತೆಯ ವಿಚಾರಗಳನ್ನು ನೋಡಬೇಕಿದೆ” ಎಂದರು.
ಆಗ ಎಜಿ ಅವರು “ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿರುವ ವಸ್ತುಸ್ಥಿತಿ ವರದಿಯನ್ನು ಮ್ಯಾಜಿಸ್ಟೀರಿಯಲ್ ಅಥವಾ ನ್ಯಾಯಾಂಗ ವಿಚಾರಣಾ ಆಯೋಗವು ಬಳಕೆ ಮಾಡಬಾರದು. ರಚನೆ ಮಾಡಿರುವ ಆಯೋಗಗಳು ಸ್ವತಂತ್ರವಾಗಿ ತನಿಖೆ ನಡೆಸಬೇಕು. ಇಲ್ಲಿ ರಾಜ್ಯ ಸರ್ಕಾರ ಪೂರ್ವಾಗ್ರಹದಿಂದ ವರ್ತಿಸುತ್ತದೆ ಎಂಬುದಲ್ಲ. ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕು ಎಂಬುದಾಗಿದೆ. ವಸ್ತುಸ್ಥಿತಿ ವರದಿಯನ್ನು ನೀಡಬಾರದು ಎಂದು ಸರ್ಕಾರ ಹೇಳುತ್ತಿಲ್ಲ. ಇದು ಸ್ವತಂತ್ರ ತನಿಖೆಗೆ ಸಂಬಂಧಿಸಿದ್ದಾಗಿದೆ. ಕಾಲ್ತುಳಿತ ವಿಚಾರದಲ್ಲಿ ದೇಶದ ಯಾವುದೇ ರಾಜ್ಯದಲ್ಲಿ ಮಾಡದ ಕೆಲಸವನ್ನು ಸರ್ಕಾರ ಮಾಡಿದೆ” ಎಂದು ಕೋರಿದರು.
ವಾದ-ಪ್ರತಿವಾದ ಆಲಿಸಿದ ಪೀಠವು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಪರವಾಗಿ ಹಿರಿಯ ವಕೀಲ ಎಂ ಎಸ್ ಶ್ಯಾಮ್‌ಸುಂದರ್ ತನ್ನ ವಾದಾಂಶ, ಆರ್‌ಸಿಬಿಯ ಪರವಾಗಿ ಹಿರಿಯ ವಕೀಲ ಸಿ ಕೆ ನಂದಕುಮಾರ್ ಅವರು ಆಕ್ಷೇಪಣೆ ಸಲ್ಲಿಸಿರುವುದನ್ನು ದಾಖಲೆಯಲ್ಲಿ ಸ್ವೀಕರಿಸಿತು. ಡಿಎನ್ ಎಂಟರ್‌ಟೈನ್‌ಮೆಂಟ್ ನೆಟವರ್ಕ್ಸ್ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಸಂಪತ್ ಕುಮಾರ್ ಅವರಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿದ ನ್ಯಾಯಾಲಯವು, ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.