ಆರ್.ರವಿ, ತಮಿಳುನಾಡು ಮತ್ತು ಸುಪ್ರೀಂ ಕೋರ್ಟ್
ಆರ್.ರವಿ, ತಮಿಳುನಾಡು ಮತ್ತು ಸುಪ್ರೀಂ ಕೋರ್ಟ್ 
ಸುದ್ದಿಗಳು

ತನ್ನ ಆದೇಶ ಧಿಕ್ಕರಿಸಿದ ತಮಿಳುನಾಡು ರಾಜ್ಯಪಾಲ ಆರ್‌ ಎನ್‌ ರವಿ ವಿರುದ್ಧ ಸುಪ್ರೀಂ ಕೋರ್ಟ್‌ ಕೆಂಡಾಮಂಡಲ

Bar & Bench

ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮುಖಂಡ ಕೆ ಪೊನ್ಮುಡಿ ಅವರಿಗೆ ಕ್ರಿಮಿನಲ್ ಪ್ರಕರಣವೊಂದರಲ್ಲಿ ವಿಧಿಸಲಾಗಿದ್ದ ಶಿಕ್ಷೆಗೆ ಸುಪ್ರೀಂ ಕೋರ್ಟ್ ಕಳೆದ ವಾರ ತಡೆಯಾಜ್ಞೆ ನೀಡಿದ ನಂತರವೂ ಅವರನ್ನು ಮತ್ತೆ ರಾಜ್ಯ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿದ ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಅವರ ನಡವಳಿಕೆಯ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ತೀವ್ರ ಕಳವಳ ವ್ಯಕ್ತಪಡಿಸಿದೆ [ತಮಿಳುನಾಡು ರಾಜ್ಯ ವಿರುದ್ಧ ತಮಿಳುನಾಡು ರಾಜ್ಯಪಾಲರು ಮತ್ತು ಎಎನ್ಆರ್].

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ , ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠವು ರಾಜ್ಯಪಾಲರನ್ನು ಈ ವಿಚಾರವಾಗಿ ತರಾಟೆಗೆ ತೆಗೆದುಕೊಂಡಿತು.

ನ್ಯಾಯಾಲಯವು ಶಿಕ್ಷೆಯನ್ನು ತಡೆಹಿಡಿದಿರುವಾಗ, ರಾಜ್ಯಪಾಲರಿಗೆ ಅದಕ್ಕೆ ವ್ಯತಿರಿಕ್ತವಾಗಿ ಹೇಳಲು ಏನೂ ಇರುವುದಿಲ್ಲ ಎಂದು ನ್ಯಾಯಾಲಯ ಹೇಳಿತು.

"ರಾಜ್ಯಪಾಲರ ನಡವಳಿಕೆಯ ಬಗ್ಗೆ ನಾವು ಗಂಭೀರವಾಗಿ ಕಳವಳ ಹೊಂದಿದ್ದೇವೆ. ಅವರು ಭಾರತದ ಸರ್ವೋಚ್ಚ ನ್ಯಾಯಾಲಯವನ್ನು ಧಿಕ್ಕರಿಸುತ್ತಿದ್ದಾರೆ. ಶಿಕ್ಷೆಯನ್ನು ತಡೆಹಿಡಿದಿರುವಾಗ ರಾಜ್ಯಪಾಲರಿಗೆ ಅದಕ್ಕೆ ವ್ಯತಿರಿಕ್ತವಾಗಿ ಹೇಳುವುದು ಏನೂ ಇರುವುದಿಲ್ಲ. ನಮ್ಮ ಆದೇಶವನ್ನು ಜಾರಿಗಷ್ಟೇ ತರಬೇಕು" ಎಂದು ನ್ಯಾಯಾಲಯ ತಾಕೀತು ಮಾಡಿತು.

ಸಾಂವಿಧಾನಿಕ ಅಧಿಕಾರಿಯೊಬ್ಬರು ಈ ರೀತಿ ಹೇಗೆ ವರ್ತಿಸಬಹುದೇ ಎಂದು ಪ್ರಶ್ನಿಸಿದ ನ್ಯಾಯಾಲಯವು, ಚುನಾಯಿತ ಸರ್ಕಾರದ ನಿರ್ಧಾರಗಳನ್ನು ಕಾರ್ಯಗತಗೊಳಿಸುವ ನಾಮಮಾತ್ರದ ಮುಖ್ಯಸ್ಥರು ರಾಜ್ಯಪಾಲರು ಎಂದು ಪುನರುಚ್ಚರಿಸಿತು.

"ಯಾವುದೇ ಸಾಂವಿಧಾನಿಕ ಅಧಿಕಾರಿ ಈ ರೀತಿ ಹೇಳಲು ಹೇಗೆ ಸಾಧ್ಯ.. ನಮ್ಮ ಆದೇಶವನ್ನು ಜಾರಿಗೆ ತರಬೇಕು... ಇದು ಸಚಿವರ ಬಗ್ಗೆ  ವ್ಯಕ್ತಿನಿಷ್ಠ ಗ್ರಹಿಕೆಯ ಬಗ್ಗೆ ಅಲ್ಲ. ರಾಜ್ಯಪಾಲರು ನಾಮಮಾತ್ರದ ಮುಖ್ಯಸ್ಥರು ಮತ್ತು ಅವರಿಗೆ (ಸರ್ಕಾರಕ್ಕೆ) ಸಲಹೆ ನೀಡುವ ಅಧಿಕಾರವಿದೆ. ಅಷ್ಟೆ" ಎಂದು ಸಿಜೆಐ ಹೇಳಿದರು.

ರವಿ ಅವರ ನಡವಳಿಕೆಯನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಲಿದೆ ಎಂದು ಕೇಂದ್ರ ಸರ್ಕಾರದ ಉನ್ನತ ಕಾನೂನು ಅಧಿಕಾರಿ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರಿಗೆ ನ್ಯಾಯಾಲಯ ಇದೇ ವೇಳೆ ತಿಳಿಸಿತು.

"ಮಿಸ್ಟರ್ ಅಟಾರ್ನಿ ಜನರಲ್, ನೀವು ಏನು ಮಾಡುತ್ತಿದ್ದೀರಿ? ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿದೆ ಮತ್ತು ಅವರು [ರಾಜ್ಯಪಾಲರು] ಪ್ರಮಾಣ ವಚನ ಸ್ವೀಕರಿಸಲಾಗದು ಎಂದು ಹೇಳುತ್ತಾರೆಯೇ? ಆ ನಾವು ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ದಯವಿಟ್ಟು ನಿಮ್ಮ ರಾಜ್ಯಪಾಲರಿಗೆ ಹೇಳಿ" ಎಂದು ಎಜಿ ಅವರಿಗೆ ಪೀಠ ಹೇಳಿತು. ವೆಂಕಟರಮಣಿ ಅವರು ಈ ವಿಷಯವನ್ನು ನಾಳೆಗೆ ಇರಿಸುವಂತೆ ಇದೇ ವೇಳೆ ಮನವಿ ಮಾಡಿದರು.

ಸಿಜೆಐ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿ ಜೆ.ಬಿ.ಪರ್ಡಿವಾಲಾ, ನ್ಯಾಯಮೂರ್ತಿ ಮನೋಜ್ ಮಿಶ್ರಾ

ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಶಿಫಾರಸಿನ ಆಧಾರದ ಮೇಲೆ ಪೊನ್ಮುಡಿ ಅವರನ್ನು ರಾಜ್ಯ ಸಚಿವ ಸಂಪುಟಕ್ಕೆ ಮರು ಸೇರಿಸಿಕೊಳ್ಳಲು ರಾಜ್ಯಪಾಲರಿಗೆ ನಿರ್ದೇಶನ ನೀಡುವಂತೆ ಕೋರಿ ತಮಿಳುನಾಡು (ಟಿಎನ್) ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು.

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಪೊನ್ಮುಡಿ ಅವರ ಶಿಕ್ಷೆಯನ್ನು ಮಾರ್ಚ್ 11 ರಂದು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ನಂತರ ಅವರನ್ನು ಸಚಿವರನ್ನಾಗಿ ನೇಮಿಸಲು ರಾಜ್ಯಪಾಲರು ನಿರಾಕರಿಸಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. 

ಕಳೆದ ವಾರ ಉನ್ನತ ನ್ಯಾಯಾಲಯವು ಅವರ ಶಿಕ್ಷೆಗೆ ತಡೆಯಾಜ್ಞೆ ನೀಡಿದ ನಂತರ, ಪೊನ್ಮುಡಿ ಅವರ ಶಾಸಕಾಂಗ ಸದಸ್ಯತ್ವವನ್ನು ಪುನಃಸ್ಥಾಪಿಸಲಾಯಿತು.

ಪೊನ್ಮುಡಿ ಅವರಿಗೆ ಮತ್ತೊಮ್ಮೆ ಪ್ರಮಾಣ ವಚನ ಬೋಧಿಸುವಂತೆ ಸಿಎಂ ಸ್ಟಾಲಿನ್ ರಾಜ್ಯಪಾಲರನ್ನು ಕೋರಿದರು. ಆದರೆ, ಪೊನ್ಮುಡಿ ಅವರ ಶಿಕ್ಷೆಯನ್ನು ತಡೆಹಿಡಿಯಲಾಗಿದೆ ಮತ್ತು ಬದಿಗಿಡಲಾಗಿಲ್ಲ ಎಂಬ ಕಾರಣ ನೀಡಿ ರಾಜ್ಯಪಾಲ ರವಿ ನಿರಾಕರಿಸಿದ್ದರು.

ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ.