“ಗಾಂಜಾ ಮಾರಾಟ ಮೈಸೂರಿನಲ್ಲೇ ಯಾಕೆ ಜಾಸ್ತಿ?” ಎಂದು ಮೌಖಿಕವಾಗಿ ಸೋಮವಾರ ಪ್ರಶ್ನಿಸಿರುವ ಕರ್ನಾಟಕ ಹೈಕೋರ್ಟ್, 50 ಗ್ರಾಂ ಗಾಂಜಾ ಮಾರಾಟ ಮಾಡಿದ ಪ್ರಕರಣದಲ್ಲಿ ಆರೋಪಿಯೊಬ್ಬನಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಗಾಂಜಾ ಮಾರಾಟದ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಮೈಸೂರಿನ ಸಮೀರ್ ಖಾನ್ ಅಲಿಯಾಸ್ ದಾದು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿತು.
ಅರ್ಜಿದಾರರ ಪರ ವಕೀಲ ಆರ್ ಕೆ ಮಹದೇವ ಅವರು “53 ಗ್ರಾಂ ಗಾಂಜಾ ಮಾರಾಟ ಮಾಡಿದ ಪ್ರಕರಣ ಸಮೀರ್ ಮೇಲಿದೆ. ಒಂದು ಕೆಜಿ ವರೆಗೆ ಗಾಂಜಾ ಕೊಡೊಯ್ಯುಬಹುದು. ಇದಕ್ಕೆ ಒಂದು ವರ್ಷ ಜೈಲು ಶಿಕ್ಷೆ ಮತ್ತು ಒಂದು ಸಾವಿರ ದಂಡ ವಿಧಿಸಬಹುದು ಅಥವಾ ಎರಡನ್ನೂ ವಿಧಿಸಬಹುದು” ಎಂದರು.
ಆಗ ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ಎನ್‌ಡಿಪಿಎಸ್ ಕೇಸಿನಲ್ಲಿ ಈಗಾಗಲೇ ಸಮೀರ್‌ನನ್ನು ಅಪರಾಧಿ ಎಂದು ಘೋಷಿಸಲಾಗಿದೆ” ಎಂದರು.
ಆಗ ಮಹದೇವ ಅವರು “ಲೋಕ ಅದಾಲತ್‌ನಲ್ಲಿ 100 ಗ್ರಾಂ ಗಾಂಜಾ ಮಾರಾಟ ಮಾಡಿದ ಪ್ರಕರಣವನ್ನು ಒಪ್ಪಿಕೊಳ್ಳಲಾಗಿದೆ. ರಾಜೀ ಆಗಿ, ಒಂದು ಸಾವಿರ ದಂಡ ವಿಧಿಸಿದ್ದಾರೆ. ಅದನ್ನು ಅರ್ಜಿದಾರರು ಪಾವತಿಸಿದ್ದಾರೆ” ಎಂದು ಸಮರ್ಥಿಸಿದರು.
ಆಗ ಪೀಠವು “ಲೋಕ ಅದಾಲತ್‌ನಲ್ಲಿ ಗಾಂಜಾ ಪ್ರಕರಣವನ್ನು ರಾಜೀ ಮಾಡಿಸುತ್ತಾರಾ. ಅಲ್ಲಿ ಹೋಗಿ ರಾಜೀ ಮಾಡಿಕೊಳ್ಳುವುದು ಹೇಗೆ ಸಾಧ್ಯ? ಲೋಕ ಅದಾಲತ್‌ನಲ್ಲಿ ರಾಜೀ ಆಗಿ ಎಂದು ನ್ಯಾಯಾಲಯ ಹೇಳಿದೆಯೇ?” ಎಂದು ಆಶ್ಚರ್ಯ ವ್ಯಕ್ತಪಡಿಸಿತು.
“10 ಸಾವಿರ ರೂಪಾಯಿ ಗಾಂಜಾ ಮಾರಿ, ಒಂದು ಸಾವಿರ ದಂಡ ತಾನೆ ಎಂದು ಆರೋಪಿ ಭಾವಿಸುವ ಸಾಧ್ಯತೆ ಇದೆ” ಎಂದು ಶಂಕೆ ವ್ಯಕ್ತಪಡಿಸಿತು.
ಅದಕ್ಕೆ ಅರ್ಜಿದಾರರ ಪರ ವಕೀಲರು “ಇಲ್ಲ ಸ್ವಾಮಿ. ಮುಂದೆ ಇಂಥ ಪ್ರಕರಣದಲ್ಲಿ ಅರ್ಜಿದಾರರು ನಿಮ್ಮ ಮುಂದೆ ಬಂದರೆ ಜಾಮೀನು ರದ್ದುಪಡಿಸಬಹುದು” ಎಂದರು.
ಈ ನಡುವೆ ಪೀಠವು “ಗಾಂಜಾ ಮಾರಾಟ ಮೈಸೂರಿನಲ್ಲೇ ಯಾಕೆ ಜಾಸ್ತಿ?” ಎಂದು ಪ್ರಶ್ನಿಸಿತು.
ಅದಕ್ಕೆ ಮಹದೇವ ಅವರು “ಬರೀ ಮೈಸೂರಿನಲ್ಲಿ ಮಾತ್ರವಲ್ಲ. ಎಲ್ಲಾ ಕಡೆಯೂ ಗಾಂಜಾ ಪ್ರಕರಣಗಳು ಇವೆ” ಎಂದು ಸಮರ್ಥಿಸಿದರು.
“ಅರ್ಜಿದಾರ ಮೈಸೂರಿನ ಬಿಇಒ ಕಚೇರಿ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ಬಂಧಿಸಲಾಗಿದೆ. ಅವರಿಂದ 53 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ದಾಖಲಾಗಿರುವ ಸೆಕ್ಷನ್‌ಗಳು ಜಾಮೀನು ಪಡೆಯಲು ಅರ್ಹವಾಗಿವೆ. ಆದರೆ, ವಿಚಾರಣಾಧೀನ ನ್ಯಾಯಾಲಯವು ಜಾಮೀನು ತಿರಸ್ಕರಿಸಿದೆ. ಆದ್ದರಿಂದ, ಜಾಮೀನು ಮಂಜೂರು ಮಾಡಬೇಕು” ಎಂಬುದು ಅರ್ಜಿದಾರರ ಮನವಿಯಾಗಿದೆ.
ಪ್ರಕರಣದ ಹಿನ್ನೆಲೆ: ಮಾದಕ ದ್ರವ್ಯ ನಿಗ್ರಹ ಕಾಯಿದೆ–1985ರ (ಎನ್‌ಡಿಪಿಎಸ್) ಸೆಕ್ಷನ್ 20(ಬಿ)(ii)ಎ ಅಡಿಯಲ್ಲಿ ಮಂಡಿ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ 2026ರ ಜನವರಿ 13ರಂದು ಸಮೀರ್ ಖಾನ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಮೈಸೂರಿನ 3ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿತ್ತು.