Supreme Court, West Bengal  
ಸುದ್ದಿಗಳು

24 ಸಾವಿರ ಶಿಕ್ಷಕರ ನೇಮಕಾತಿ ರದ್ದತಿ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಪ. ಬಂಗಾಳ ಸರ್ಕಾರ

ಕೇವಲ ಮೌಖಿಕ ವಾದ ಆಧರಿಸಿ ಯಾವುದೇ ಅಫಿಡವಿಟ್‌ ಸಹ ದಾಖಲೆಯಲ್ಲಿ ಪಡೆಯದೆ ಹೈಕೋರ್ಟ್‌ ಮನಸೋ ಇಚ್ಛೆಯಿಂದ ನೇಮಕಾತಿ ರದ್ದುಗೊಳಿಸಿದೆ ಎಂದು ಪಶ್ಚಿಮ ಬಂಗಾಳ ಸರ್ಕಾರದ ಆಕ್ಷೇಪಿಸಿದೆ.

Bar & Bench

ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗ (ಡಬ್ಲ್ಯುಬಿಎಸ್‌ಎಸ್‌ಸಿ) 2016 ರಲ್ಲಿ ಮಾಡಿದ ಸುಮಾರು 24,000 ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿಗಳನ್ನು ಈಚೆಗೆ ರದ್ದುಗೊಳಿಸಿದ ಕಲ್ಕತ್ತಾ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ಬುಧವಾರ ಸುಪ್ರೀಂ ಕೋರ್ಟ್‌ ಕದ ತಟ್ಟಿದೆ.

ನೇಮಕಾತಿಯನ್ನು ಅಸಿಂಧುಗೊಳಿಸಿದ್ದ ಹೈಕೋರ್ಟ್‌ ಅಕ್ರಮವಾಗಿ ನೇಮಕಗೊಂಡಿರುವ ಅಭ್ಯರ್ಥಿಗಳು ಈವರೆಗೆ ಪಡೆದ ವೇತನ ಮರಳಿಸುವಂತೆ ಆದೇಶಿಸಿತ್ತು.

ಕೇವಲ ಮೌಖಿಕ ವಾದ ಆಧರಿಸಿ ಮತ್ತು ದಾಖಲೆಯಲ್ಲಿ ಯಾವುದೇ ಅಫಿಡವಿಟ್‌ ಪಡೆಯದೆ ಹೈಕೋರ್ಟ್‌ ಮನಸೋ ಇಚ್ಛೆಯಿಂದ ನೇಮಕಾತಿ ರದ್ದುಗೊಳಿಸಿದೆ ಎಂಬುದಾಗಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ವಿಶೇಷ ಅನುಮತಿ ಅರ್ಜಿಯಲ್ಲಿ ರಾಜ್ಯ ಸರ್ಕಾರ ದೂರಿದೆ.

ಹೀಗೆ ನೇಮಕಾತಿ ಹಿಂಪಡೆದರೆ ಶಾಲೆಗಳಲ್ಲಿ ದೊಡ್ಡ ನಿರ್ವಾತ ಸೃಷ್ಟಿಯಾಗುತ್ತದೆ ಎಂಬುದನ್ನು ನಿರ್ಲಕ್ಷಿಸಿ ಈ ರದ್ದತಿ ಮಾಡಲಾಗಿದೆ. ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಹದಿನೈದು ದಿನದೊಳಗೆ ಖಾಲಿ ಹುದ್ದೆ ಭರ್ತಿ ಮಾಡುವಂತೆ ಹೈಕೋರ್ಟ್‌ ನೀಡಿರುವ ನಿರ್ದೇಶನವನ್ನೂ ಅದು ಪ್ರಶ್ನಿಸಿದೆ.