ತಮ್ಮ ನಡುವಿನ ವಿವಾದಗಳನ್ನು ಬಗೆಹರಿಸಲು ಮಧ್ಯಸ್ಥಗಾರರನ್ನು ನೇಮಿಸುವಂತೆ ಕೋರಿ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಸಲ್ಲಿಸಿದ್ದ ಮನವಿಯ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಮಂಗಳವಾರ ರಿಯಲ್ ಎಸ್ಟೇಟ್ ಸಂಸ್ಥೆಯೊಂದಕ್ಕೆ ನೋಟಿಸ್ ಜಾರಿ ಮಾಡಿದೆ.
ಮನವಿಯನ್ನು ಸಂಕ್ಷಿಪ್ತವಾಗಿ ಆಲಿಸಿದ ನ್ಯಾಯಮೂರ್ತಿ ಸಿ ಹರಿ ಶಂಕರ್ ಅವರು ಅರ್ಜಿಗೆ ಪ್ರತಿಕ್ರಿಯಿಸುವಂತೆ ಸೂಚಿಸಿ ರಿಯಲ್ ಎಸ್ಟೇಟ್ ಸಂಸ್ಥೆಯಾದ ಬ್ರಿಲಿಯಂಟ್ ಎಟೊಯಿಲ್ ಪ್ರೈವೇಟ್ ಲಿಮಿಟೆಡ್‌ಗೆ ನೋಟಿಸ್ ನೀಡಿದರು.
ತಮ್ಮ ವೈಯಕ್ತಿಕ ಹಕ್ಕುಗಳ ಉಲ್ಲಂಘನೆಯಾಗಿದ್ದು ಕಂಪೆನಿಯಿಂದ ಖರೀದಿಸಿದ್ದ ಫ್ಲಾಟ್ ವಿತರಿಸಲು ರಿಯಲ್ ಎಸ್ಟೇಟ್ ಸಂಸ್ಥೆ ವಿಳಂಬ ಮಾಡುತ್ತಿದೆ ಎಂದು ಸಿಂಗ್ ದೂರಿದ್ದಾರೆ.
ಯುವರಾಜ್ ಅವರು 2021 ರಲ್ಲಿ ದೆಹಲಿಯ ಹೌಜ್ ಖಾಸ್‌ನಲ್ಲಿ ರಿಯಲ್ ಎಸ್ಟೇಟ್ ಸಂಸ್ಥೆಯ ಫ್ಲ್ಯಾಟ್ ಖರೀದಿಸಿದ್ದರು. ಆ ಸಮಯದಲ್ಲಿ, ಫ್ಲಾಟ್‌ನ ಮೌಲ್ಯ ಸುಮಾರು ₹14.10 ಕೋಟಿ ಇತ್ತು ಎಂದು ಹೇಳಲಾಗಿದೆ.
ನವೆಂಬರ್ 2023 ರಲ್ಲಿ ಯುವರಾಜ್ ಅವರು ಸ್ವಾಧೀನ ಪತ್ರ ಪಡೆದರಾದರೂ ಫ್ಲ್ಯಾಟ್ ಕಳಪೆ ಗುಣಮಟ್ಟದ್ದಾಗಿರುವುದು ಕಂಡುಬಂದಿತ್ತು. ಬಿಲ್ಡರ್ ವಸ್ತುಗಳ ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಿದ್ದು ಅಪಾರ್ಟ್‌ಮೆಂಟ್‌ನ ಫಿಟ್ಟಿಂಗ್‌ಗಳು, ಪೀಠೋಪಕರಣಗಳು, ಲೈಟಿಂಗ್ ಹಾಗೂ ಫಿನಿಶಿಂಗ್ ಗುಣಮಟ್ಟ ಕಳಪೆಯಾಗಿದೆ ಎಂದು ಯುವರಾಜ್ ದೂರಿದ್ದಾರೆ.
ಫ್ಲಾಟ್ ವಿತರಣೆಯಲ್ಲಿ ವಿಳಂಬ ಮತ್ತು ಕಳಪೆ ಗುಣಮಟ್ಟದ ವಸ್ತುಗಳನ್ನು ಮನೆ ನಿರ್ಮಾಣಕ್ಕೆ ಬಳಸಿರುವುದರಿಂದ ನಷ್ಟ ಪರಿಹಾರ ನೀಡುವಂತೆ ಅವರು ಕೋರಿದ್ದಾರೆ.
ಅಲ್ಲದೆ, ಸಂಸ್ಥೆಯಿಂದ ತಮ್ಮ ವ್ಯಕ್ತಿತ್ವ ಹಕ್ಕು ಉಲ್ಲಂಘನೆಯಾಗಿರುವುದನ್ನು ಕೂಡ ಯುವರಾಜ್ ಪ್ರಸ್ತಾಪಿಸಿದ್ದಾರೆ. ತಮ್ಮ ಬ್ರಾಂಡ್ ಮೌಲ್ಯವನ್ನು ರಿಯಲ್ ಎಸ್ಟೇಟ್ ಸಂಸ್ಥೆ ದುರುಪಯೋಗ ಪಡಿಸಿಕೊಂಡಿದ್ದು ರಿಯಲ್ ಎಸ್ಟೇಟ್ ಯೋಜನೆಯನ್ನು ಉತ್ತೇಜಿಸುವುದಕ್ಕಾಗಿ ಒಪ್ಪಂದದ ಅವಧಿ ಮೀರಿ ತಮ್ಮ ವ್ಯಕ್ತಿತ್ವವನ್ನು ಬಳಸಿಕೊಳ್ಳಲಾಗಿದೆ ಎಂದಿದ್ದಾರೆ.