ಹಿಂದೂ ಉತ್ತರಾಧಿಕಾರ ಕಾಯಿದೆ ಸೆಕ್ಷನ್ 8ರ ಅಡಿ ಮೃತ ಪುತ್ರನ ಆಸ್ತಿಯಲ್ಲಿ ವಿಧವೆ ತಾಯಿಗೂ ಹಕ್ಕಿದೆ ಎಂದು ಈಚೆಗೆ ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಆದೇಶ ಮಾಡಿದೆ. ಪುತ್ರ ಸಾವನ್ನಪ್ಪಿರುವುದನ್ನು ಪರಿಗಣಿಸಲು ವಿಫಲವಾಗಿ ಆದೇಶ ಮಾಡಿದ್ದ ಎರಡು ಅಧೀನ ನ್ಯಾಯಾಲಯಗಳ ಆದೇಶದಲ್ಲಿ ಹೈಕೋರ್ಟ್ ಮಾರ್ಪಾಡು ಮಾಡಿದೆ.
ಬೀದರ್ ಜಿಲ್ಲೆಯ ಹುಮ್ನಾಬಾದ್‌ನವರಾದ ಆಸ್ತಿಯ ಮೂಲ ವಾರಸುದಾರರಾದ ಮೃತಪಟ್ಟಿರುವ ಹನುಮಂತ ರೆಡ್ಡಿ ಅವರ ಪತ್ನಿ 65 ವರ್ಷದ ಈರಮ್ಮ ಅವರು ಅಧೀನ ನ್ಯಾಯಾಲಯಗಳು ಆಸ್ತಿ ವಿಭಾಗ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ.
ಮಕ್ಕಳು 6/75ನೇ ಭಾಗಕ್ಕೆ ಅರ್ಹರಾಗಿದ್ದು, ಈರಮ್ಮ ಅವರು 6/75ನೇ ಪಾಲು ಜೊತೆಗೆ 1/25ರಷ್ಟು ಭಾಗಕ್ಕೆ ಅರ್ಹರಾಗಿದ್ದಾರೆ. ಒಟ್ಟಾರೆ ಇದು 9/75ರಷ್ಟು ಆಸ್ತಿ ಆಗಲಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ. ಈ ನಿಟ್ಟಿನಲ್ಲಿ ರಿಜಿಸ್ಟ್ರಿಯು ಡಿಕ್ರಿ ರೂಪಿಸಬೇಕು ಎಂದು ಹೈಕೋರ್ಟ್ ಆದೇಶ ಮಾಡಿದೆ.
ಪ್ರಕರಣದ ಹಿನ್ನೆಲೆ: ಹನುಮಂತರೆಡ್ಡಿ-ಈರಮ್ಮ ದಂಪತಿಗೆ ಪೊರಸರೆಡ್ಡಿ, ಭೀಮರೆಡ್ಡಿ (ಮೃತಪಟ್ಟಿದ್ದಾರೆ), ರೇವಮ್ಮ ಮತ್ತು ಬಸವರೆಡ್ಡಿ ಎಂಬ ನಾಲ್ಕು ಮಕ್ಕಳಿದ್ದಾರೆ. ಹನುಮಂತ ರೆಡ್ಡಿ ಮೃತರಾಗಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಧವೆ ಪತ್ನಿಯರಿಗೆ ಆಸ್ತಿಯಲ್ಲಿ ಸ್ವತಂತ್ರ ಪಾಲು ಇರುವುದಿಲ್ಲ. ಗಂಡನ ಪಾಲಿನಲ್ಲಿ ಅವರಿಗೆ ಹಕ್ಕಿರುತ್ತದೆ. ಪ್ರಸಕ್ತ ಪ್ರಕರಣದಲ್ಲಿ ದಂಪತಿಯ ಮತ್ತೊಬ್ಬ ಪುತ್ರ ಭೀಮರೆಡ್ಡಿ ಸಹ ಮೃತ ಪಟ್ಟಿದ್ದಾರೆ. ಆಸ್ತಿ ವಿಭಾಗ ಮಾಡುವಾಗ ಎರಡು ಅಧೀನ ನ್ಯಾಯಾಲಯಗಳು ಎರಡನೇ ಪುತ್ರ ಭೀಮರೆಡ್ಡಿ ನಿಧನರಾಗಿರುವ ವಿಚಾರ ಪರಿಗಣಿಸುವಲ್ಲಿ ವಿಫಲವಾಗಿದ್ದವು. ಮೃತ ಪುತ್ರನ ಆಸ್ತಿಯ ಪಾಲಿನಲ್ಲಿ ತಾಯಿಗೂ ಹಕ್ಕಿರುವುದನ್ನು ಕೆಳ ನ್ಯಾಯಾಲಯಗಳು ಗಮನಿಸಿರಲಿಲ್ಲ. ಇದೆಲ್ಲವನ್ನೂ ಪರಿಗಣಿಸಿದ ಹೈಕೋರ್ಟ್ ವಿಧವೆ ಈರಮ್ಮ ಅವರಿಗೆ ಹಾಗೂ ಇತರರಿಗೆ ಆಸ್ತಿಯಲ್ಲಿ ಸಲ್ಲಬೇಕಾದ ಪಾಲಿನ ಬಗ್ಗೆ ವಿವರವಾಗಿ ಆದೇಶಿಸಿದೆ. ಹನಮಂತರೆಡ್ಡಿ ಹಾಗೂ ಅವರ ನಾಲ್ಕು ಮಂದಿ ಮಕ್ಕಳು ಆಸ್ತಿಯಲ್ಲಿ ಪ್ರತಿಯೊಬ್ಬರೂ 1/5ನೇ ಭಾಗಕ್ಕೆ ಅರ್ಹರಾಗಿದ್ದಾರೆ. ಹನಮಂತರೆಡ್ಡಿ ಮರಣ ಹೊಂದಿರುವ ಹಿನ್ನೆಲೆಯಲ್ಲಿ ಅವರ ಪಾಲಿನ 1/5ನೇ ಭಾಗದ ಆಸ್ತಿಯನ್ನು ಪತ್ನಿ ಹಾಗೂ ನಾಲ್ವರು ಮಕ್ಕಳಿಗೆ ಸಮಾನವಾಗಿ ಹಂಚಿಕೆ ಮಾಡಬೇಕು. ಇದರ ಅನ್ವಯ ಮಕ್ಕಳು ತಮ್ಮ ಪಾಲಿನ 1/5ನೇ ಭಾಗ ಹಾಗೂ 1/25ನೇ ಭಾಗದ ಆಸ್ತಿಗೆ ಅರ್ಹರಾಗುತ್ತಾರೆ.
ಈರಮ್ಮ ಅವರು ಪತಿಯ ಆಸ್ತಿಯಲ್ಲಿನ ಭಾಗದ ಪೈಕಿ 1/25ನೇ ಭಾಗಕ್ಕೆ ಅರ್ಹರಾಗುತ್ತಾರೆ. ಮೃತ ಪುತ್ರ ಭೀಮರೆಡ್ಡಿಯ ಒಟ್ಟಾರೆ 6/25ನೇ ಭಾಗದಲ್ಲಿ (1/5 + 1/25) ಅವರ ಪತ್ನಿ, ಪುತ್ರಿ ಹಾಗೂ ಈರಮ್ಮ ಅವರು ಸಮಾನ ಪಾಲಿಗೆ ಅರ್ಹರಾಗಿದ್ದಾರೆ. ಹೀಗಾದಾಗ ಈರಮ್ಮ ಅವರು ಪಾಲು 6/75ನೇ ಭಾಗದಷ್ಟಾಗುತ್ತದೆ.
ಆಸ್ತಿ ವಿಭಜಿಸುವಾಗ ಎರಡೂ ಕೆಳ ಹಂತದ ನ್ಯಾಯಾಲಯಗಳು ಮೃತಪಟ್ಟಿರುವ ಎರಡನೇ ಪುತ್ರ ಭೀಮರೆಡ್ಡಿಯ ಪಾಲಿನಲ್ಲಿ ತಾಯಿ ಈರಮ್ಮ ಅವರಿಗೆ ಪಾಲು ನೀಡದೇ ಪ್ರಮಾದ ಎಸಗಿವೆ. ಹೀಗಾಗಿ, ಎರಡೂ ನ್ಯಾಯಾಲಯಗಳು ರೂಪಿಸಿರುವ ಪ್ರಾಥಮಿಕ ಡಿಕ್ರಿಯಲ್ಲಿ ಮಾರ್ಪಾಡು ಮಾಡಲಾಗಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.