ವಿಚ್ಛೇದನ 
ಸುದ್ದಿಗಳು

ಪತಿಯನ್ನು ನಪುಂಸಕ ಎನ್ನುವುದು, ಲೈಂಗಿಕ ಬದುಕಿನ ಬಗ್ಗೆ ಬಹಿರಂಗವಾಗಿ ಚರ್ಚಿಸುವುದು ಕ್ರೌರ್ಯ: ದೆಹಲಿ ಹೈಕೋರ್ಟ್

ತನ್ನ ಕುಟುಂಬ ಸದಸ್ಯರ ಮುಂದೆಯೇ ಪತ್ನಿಯು 'ನಪುಂಸಕ' ಎಂದು ಆರೋಪಿಸಿ ಅವಮಾನಿಸಿದ್ದ ಹಿನ್ನೆಲೆಯಲ್ಲಿ ಪತಿಗೆ ಹೈಕೋರ್ಟ್ ವಿಚ್ಛೇದನ ನೀಡಿದೆ.

Bar & Bench

ಪತಿಯನ್ನು ಹೆಂಡತಿಯು 'ನಪುಂಸಕ' ಎಂದು ಕರೆಯುವುದು, ಕುಟುಂಬ ಸದಸ್ಯರ ಸಮ್ಮುಖದಲ್ಲಿ ತಮ್ಮ ಲೈಂಗಿಕ ಜೀವನದ ಬಗ್ಗೆ ಚರ್ಚಿಸುವ ಮೂಲಕ ಬಹಿರಂಗವಾಗಿ ಅವಮಾನಿಸುವುದು ಮಾನಸಿಕ ಕ್ರೌರ್ಯ ಎನಿಸಿಕೊಳ್ಳಲಿದ್ದು ವಿಚ್ಛೇದನಕ್ಕೆ ಆಸ್ಪದ ನೀಡಲಿದೆ ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.

ಪತ್ನಿಯು ಪತಿಯ ಖಾಸಗಿತನವನ್ನು ಗೌರವಿಸಬೇಕು ಮತ್ತು ಹೆಚ್ಚು ಗೋಪ್ಯತೆಯಿಂದ ವರ್ತಿಸಬೇಕು ಎಂದು ನಿರೀಕ್ಷಿಸಲಾಗಿದೆ ಎಂಬುದಾಗಿ ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಮತ್ತು ನೀನಾ ಬನ್ಸಾಲ್ ಕೃಷ್ಣ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.

ಕುಟುಂಬ ಸದಸ್ಯರೆದುರು ಕೂಡ ಹೀಗೆ ಮಾತನಾಡುವುದು ಪತಿಗೆ ಮಾಡುವ ಅಪಮಾನವಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಹಿಂದೂ ವಿವಾಹ ಕಾಯಿದೆಯಡಿ ಕ್ರೌರ್ಯದ ಆಧಾರದ ಮೇಲೆ ವ್ಯಕ್ತಿಗೆ ವಿಚ್ಛೇದನ ನೀಡುವಾಗ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಇದೇ ವೇಳೆ ದಂಪತಿಗೆ ವಿಚ್ಛೇದನ ನೀಡಲು ನಿರಾಕರಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನೂ ಪೀಠ ತಳ್ಳಿಹಾಕಿದೆ.

ಸಾಮಾನ್ಯ ಭಾಷೆಯಲ್ಲಿ ನಪುಂಸಕತೆ ಎಂದು ಕರೆಯಲಾಗುವ ಪತಿಯ ಪುರುಷ ಬಂಜೆತನವನ್ನು ಇಬ್ಬರ ಜೀವನದಲ್ಲಿ ತೊಡಕುಗಳು ಎದುರಾಗಿರುವುದನ್ನು ನ್ಯಾಯಾಲಯ ಕಂಡುಕೊಂಡಿತು.

ಪತ್ನಿ ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದರೂ ಅದನ್ನು ಸಾಬೀತುಪಡಿಸಲು ಯಾವುದೇ ಆಧಾರಗಳಿಲ್ಲ ಎಂದು ನ್ಯಾಯಾಲಯ ತಿಳಿಸಿತು.

ಪತ್ನಿ ಮೇಲ್ಮನವಿದಾರನ ಸಂತಾನಶಕ್ತಿ ಹೀನತೆಯ ಕಾರಣಕ್ಕಾಗಿ ಆತನಿಂದ ದೂರವಾಗಿದ್ದು ವೈವಾಹಿಕ ಸಂಬಂಧ ಕಡಿದುಕೊಂಡಿದ್ದಾಳೆ. ಯಾವುದೇ ಕಾರಣ ಅಥವಾ ಆಧಾರ ಇಲ್ಲದೆ ಪತಿಯಿಂದ ಏಕಪಕ್ಷೀಯವಾಗಿ ವೈವಾಹಿಕ ಸಂಬಂಧ ಕಡಿದುಕೊಳ್ಳುವುದು ಅಕ್ಟೋಬರ್ 2013 ರಿಂದ ಈವರೆಗೆ ಸಾಂಸಾರಿಕ ಸುಖದಿಂದ ವಂಚಿತರನ್ನಾಗಿ ಮಾಡುವುದು ಕ್ರೌರ್ಯದ ಕೃತ್ಯ ಎಂದು ನ್ಯಾಯಾಲಯ ನುಡಿದಿದೆ.

ಈ ಹಿನ್ನೆಲೆಯಲ್ಲಿ ಅದು ಕುಟುಂಬ ನ್ಯಾಯಾಲಯದ ಆದೇಶವನ್ನು ಬದಿಗೆ ಸರಿಸಿ ಪತಿಗೆ ವಿಚ್ಛೇದನಕ್ಕೆ ಅವಕಾಶ ಕಲ್ಪಿಸಿತು.

[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

SJ v NJ.pdf
Preview