Passport 
ಸುದ್ದಿಗಳು

ಪತಿಯ ಅನುಮತಿ ಇಲ್ಲದೆ ಪತ್ನಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬಹುದು: ಮದ್ರಾಸ್ ಹೈಕೋರ್ಟ್

"ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಗಂಡನಿಂದ ಅನುಮತಿ ಕೇಳಬೇಕು ಎಂಬುದು ಯಾವ ಪುರುಷ ಪ್ರಧಾನತೆಗೂ ಕಡಿಮೆಯಲ್ಲದ ಸಂಗತಿ" ಎಂದು ನ್ಯಾಯಾಲಯ ಹೇಳಿತು.

Bar & Bench

ಮದುವೆಯ ನಂತರ ಮಹಿಳೆ ತನ್ನ ವ್ಯಕ್ತಿತ್ವ ಕಳೆದುಕೊಳ್ಳುವುದಿಲ್ಲ. ಆಕೆಗೆ ತನ್ನ ಪತಿಯ ಅನುಮತಿ ಅಥವಾ ಸಹಿ ಇಲ್ಲದೆ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ ಸಂಪೂರ್ಣ ಕಾನೂನುಬದ್ಧ ಹಕ್ಕು ಇದೆ ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ [ಜೆ ರೇವತಿ ಮತ್ತು ಭಾರತ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಗಂಡನ ಅನುಮತಿ ಪಡೆಯಬೇಕೆಂದು ಒತ್ತಾಯಿಸುವ ರೂಢಿ ಮಹಿಳಾ ವಿಮೋಚನೆಗಾಗಿ ಶ್ರಮಿಸುತ್ತಿರುವ ಸಮಾಜಕ್ಕೆ ಒಳ್ಳೆಯದಲ್ಲ, ಅದು ಯಾವ ಪುರುಷ ಪ್ರಧಾನತೆಗೂ ಕಡಿಮೆ ಇಲ್ಲ ಎಂದು ನ್ಯಾ. ಎನ್‌ ಆನಂದ್‌ ವೆಂಕಟೇಶ್‌ ತಿಳಿಸಿದರು.

ಮೋಹನಕೃಷ್ಣನ್ ಎಂಬುವವರನ್ನು ಮದುವೆಯಾಗಿದ್ದ ಅರ್ಜಿದಾರೆ ರೇವತಿ ತಮ್ಮ ವ್ಯಕ್ತಿತ್ವ ಕಳೆದುಕೊಳ್ಳುವುದಿಲ್ಲ. ಯಾವುದೇ ರೂಪದಲ್ಲಿ ಪತಿಯ ಅನುಮತಿ ಅಥವಾ ಸಹಿ ಇಲ್ಲದೆ ಪತ್ನಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬಹುದು ಎಂದು ಅದು ಹೇಳಿದೆ.  

ವೈವಾಹಿಕ ಕಲಹದಿಂದಾಗಿ ಮೋಹನಕೃಷ್ಣನ್‌ ವಿಚ್ಛೇದನ ಕೋರಿದ್ದು ಆ ಪ್ರಕರಣದ ತೀರ್ಪು ಇನ್ನಷ್ಟೇ ಬರಬೇಕಿತ್ತು. ಈ ಮಧ್ಯೆ ರೇವತಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಪತಿ ಸಹಿ ಇಲ್ಲ ಎಂಬ ಕಾರಣಕ್ಕೆ ಚೆನ್ನೈನ ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿ ಅರ್ಜಿ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ರೇವತಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಕಚೇರಿಯ ನಡೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಾಲಯ ಮದುವೆಯ ನಂತರವೂ ಮಹಿಳೆ ತನ್ನ ಕಾನೂನುಬದ್ಧ ಪ್ರತ್ಯೇಕತೆಯನ್ನು ಉಳಿಸಿಕೊಳ್ಳುತ್ತಾಳೆ. ಜೊತೆಗೆ ತನ್ನ ಜೀವನದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸ್ವತಂತ್ರ ಹಕ್ಕು ಆಕೆಗೆ ಇದೆ ಎಂದಿದೆ.

ಪಾಸ್‌ಪೋರ್ಟ್ ಒದಗಿಸಲು ಪತಿಯ ಸಹಿ ಪಡೆಯುವಂತೆ ಪಾಸ್‌ಪೋರ್ಟ್‌ ಕಚೇರಿ ಒತ್ತಾಯಿಸುವುದು ವಿವಾಹಿತ ಮಹಿಳೆಯರನ್ನು ಗಂಡಂದಿರಿಗೆ ಸೇರಿದ ಆಸ್ತಿ ಎಂದು ನೋಡುವ ಸಾಮಾಜಿಕ ಮನಸ್ಥಿತಿಯನ್ನು ಹೇಳುತ್ತದೆ ಎಂದು ನ್ಯಾಯಾಲಯ ಕಿಡಿಕಾರಿತು.

ಹಾಗೆ ಸಹಿ ಇಲ್ಲವೇ ಅನುಮತಿ ಪಡೆಯಲು ಕಚೇರಿ ಒತ್ತಾಯಿಸಿರುವುದು ಆಘಾತಕಾರಿ ಎಂದ ಅದು ವಿಧಿ ವಿಧಾನಗಳು ಸರಿ ಇದ್ದರೆ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಿ ರೇವತಿ ಅವರಿಗೆ ನಾಲ್ಕು ವಾರಗಳಲ್ಲಿ ಪಾಸ್‌ಪೋರ್ಟ್‌ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿತು.

[ತೀರ್ಪಿನ ಪ್ರತಿ]

J_Revathy_v_The_Government_of_India_and_Others.pdf
Preview