Hospital 
ಸುದ್ದಿಗಳು

ಸರ್ಕಾರದ ನಿರ್ಲಕ್ಷ್ಯದಿಂದ ಪತ್ನಿ ಸಾವು, ಶವ ಸಂಸ್ಕಾರಕ್ಕೂ ಯಾರೂ ಇಲ್ಲ: ಬಹಿರಂಗ ಪತ್ರ ಬರೆದ ನಿವೃತ್ತ ನ್ಯಾಯಾಧೀಶರು!

ಲಖನೌನಲ್ಲಿ ಘಟನೆ ನಡೆದಿದ್ದು, ಅಲ್ಲಿ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಪತ್ನಿಯನ್ನು ಆಸ್ಪತ್ರೆಗೆ ಸೇರಿಸಲು ಸಾಕಷ್ಟು ಪ್ರಯಾಸಪಟ್ಟರೂ ಅದು ಸಾಧ್ಯವಾಗಲಿಲ್ಲ ಎಂಬ ಅಂಶವು ಪತ್ರದಿಂದ ಬಹಿರಂಗವಾಗಿದೆ.

Bar & Bench

ಉತ್ತರ ಪ್ರದೇಶದ ನಿವೃತ್ತ ಜಿಲ್ಲಾ ನ್ಯಾಯಾಧೀಶರ ಪತ್ನಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಪತ್ನಿಯ ಸಾವಿನ ಹಿನ್ನೆಲೆಯಲ್ಲಿ ನಿವೃತ್ತ ಜಿಲ್ಲಾ ನ್ಯಾಯಾಧೀಶರು ಬರೆದಿರುವ ಬಹಿರಂಗ ಪತ್ರವು ಉತ್ತರ ಪ್ರದೇಶದಲ್ಲಿನ ದಯನೀಯ ಸ್ಥಿತಿಯನ್ನು ದೇಶದ ಮುಂದಿಟ್ಟಿದೆ.

“ಸರ್ಕಾರದ ನಿರ್ಲಕ್ಷ್ಯದಿಂದ ಪತ್ನಿ ಮಧು ಚಂದ್ರ ಸಾವನ್ನಪ್ಪಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಯಾರೊಬ್ಬರೂ ಸಾವನ್ನಪ್ಪಿದ ದೇಹದ ಅಂತ್ಯ ಸಂಸ್ಕಾರಕ್ಕೆ ಮುಂದಾಗುತ್ತಿಲ್ಲ. ದಯವಿಟ್ಟು ಸಹಾಯ ಮಾಡಿ” ಎಂದು ಪತಿ ರಮೇಶ್‌ ಚಂದ್ರ ಅವರು ಪತ್ರದ ಮುಖೇನ ಮೊರೆ ಇಟ್ಟಿದ್ದಾರೆ.

ನ್ಯಾಯಾಧೀಶರ ಕುಟುಂಬವು ಉತ್ತರ ಪ್ರದೇಶದ ಲಖನೌನಲ್ಲಿ ನೆಲೆಸಿದ್ದು, ಅಲ್ಲಿ ಈ ಘಟನೆ ನಡೆದಿದೆ. ರಮೇಶ್ ಚಂದ್ರ ಅವರ ಪತ್ರದ ಪ್ರಕಾರ ಅವರ ಪತ್ನಿ ಹಾಗೂ ಸ್ವತಃ ರಮೇಶ್‌ ಚಂದ್ರ ಅವರು ಕೋವಿಡ್‌ ಸೋಂಕಿತರಾಗಿದ್ದು, ತಮ್ಮ ನಿವಾಸದಲ್ಲೇ ಕ್ವಾರಂಟೈನ್‌ಗೆ ಒಳಗಾಗಿದ್ದರು.

“ನಿನ್ನೆಯಿಂದ ಎಲ್ಲರನ್ನೂ ಸಂಪರ್ಕಿಸಲು ನಾನು ಯತ್ನಿಸುತ್ತಿದ್ದೇನೆ. ಆದರೆ, ಯಾರೂ ನನ್ನ ಕರೆ ಪ್ರತಿಕ್ರಿಯಿಸುತ್ತಿಲ್ಲ. ಮನೆಯಲ್ಲಿ ಪ್ರತ್ಯೇಕವಾಸ ಮಾಡಲು ಅಗತ್ಯವಾದ ಪ್ರಾಥಮಿಕ ಕೋವಿಡ್‌ ಔಷಧಗಳನ್ನು ಸಹ ಮನೆಗೆ ತಲುಪಿಸಿಲ್ಲ” ಎಂದು ಪತ್ರದಲ್ಲಿ ಪರಿಸ್ಥಿತಿಯನ್ನು ಅನಾವರಣಗೊಳಿಸಿದ್ದಾರೆ.

ರೋಗಿಯನ್ನು ಆಸ್ಪತ್ರೆಗೆ ದಾಖಲಿಸುವ ಯಾವ ಪ್ರಯತ್ನವೂ ನಡೆಯುತ್ತಿಲ್ಲ. ಅಗತ್ಯ ಔಷಧಗಳನ್ನೂ ಪೂರೈಸಲಾಗುತ್ತಿಲ್ಲ ಎಂಬ ವಿಚಾರವು ಪತ್ರದಿಂದ ಬಹಿರಂಗವಾಗಿದೆ.

ದಿವಂಗತ ಮಧು ಚಂದ್ರ ಅವರಿಗೆ ಲಸಿಕೆ ನೀಡಲಾಗಿತ್ತು ಎಂದು ವಕೀಲ ಹೈದರ್‌ ಅಲಿ “ಬಾರ್‌ ಅಂಡ್‌ ಬೆಂಚ್‌”ಗೆ ತಿಳಿಸಿದ್ದಾರೆ. “ನನ್ನ ಆಪ್ತ ಸ್ನೇಹಿತನ ಅಮ್ಮ ಇಂದು ಕೋವಿಡ್‌ಗೆ ಬಲಿಯಾಗಿದ್ದಾರೆ. ಆಸ್ಪತ್ರೆಯಲ್ಲಿ ಅವರಿಗೆ ಕನಿಷ್ಠ ಹಾಸಿಗೆ ಸಹ ಸಿಕ್ಕಿಲ್ಲ. ಆಕೆಯ ಪತಿ ನಿವೃತ್ತ ಜಿಲ್ಲಾ ನ್ಯಾಯಾಧೀಶರಾಗಿದ್ದು, ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಲು ಸಾಕಷ್ಟು ಪ್ರಯಾಸಪಟ್ಟಿದ್ದಾರೆ. ಆದರೆ, ಪರಿಸ್ಥಿತಿಯು ಅತ್ಯಂತ ಹೀನಾಯವಾಗಿದ್ದು, ಅವರಿಗೆ ಕನಿಷ್ಠ ಅಗತ್ಯ ಔಷಧಗಳನ್ನು ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗಿಲ್ಲ. ಮುಂಚೆಯೇ ಅವರಿಗೆ ಕೋವಿಡ್‌ ಲಸಿಕೆ (ಎರಡೂ ಡೋಸ್‌ಗಳನ್ನು) ನೀಡಲಾಗಿತ್ತು” ಎಂದು ಘಟನೆಯ ಬಗ್ಗೆ ವಿವರಿಸಿದ್ದಾರೆ.