Madhya Pradesh High Court (Gwalior Bench)  
ಸುದ್ದಿಗಳು

ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವಾತನ ಪತ್ನಿ ವಿಚ್ಛೇದನ ಪಡೆಯಲು ಅರ್ಹಳು: ಮಧ್ಯಪ್ರದೇಶ ಹೈಕೋರ್ಟ್

2011ರಲ್ಲಿ ವಿವಾಹವಾಗಿದ್ದ ದಂಪತಿಗೆ ಒಂದು ಹೆಣ್ಣು ಮಗುವಿದೆ. ಕೊಲೆ ಪ್ರಕರಣದಲ್ಲಿ ತನ್ನ ಗಂಡನಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದರಿಂದ ವಿಚ್ಛೇದನ ಕೋರಿ ಪತ್ನಿ 2020ರಲ್ಲಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. --

Bar & Bench

ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ತನ್ನ ತಂದೆಯನ್ನೇ ಕೊಂದ ಪತಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಆತನಿಂದ ವಿಚ್ಛೇದನ ಪಡೆಯಲು ಪತ್ನಿಗೆ ಮಧ್ಯಪ್ರದೇಶ ಹೈಕೋರ್ಟ್ ಇತ್ತೀಚೆಗೆ ಅನುಮತಿಸಿದೆ.

ಪತ್ನಿ ಅಥವಾ ಪತಿಗೆ ಶಿಕ್ಷೆಯ ಆಧಾರದ ಮೇಲೆ ವಿಚ್ಛೇದನ ನೀಡಲು ಅವಕಾಶವಿಲ್ಲದಿದ್ದರೂ ಮಾನಸಿಕ ಕ್ರೌರ್ಯದ ಕಾರಣಕ್ಕೆ ಅಂತಹ ಪ್ರಕರಣಗಳಲ್ಲಿ ಪರಿಹಾರ ನೀಡಬಹುದು ಎಂದು ನ್ಯಾಯಮೂರ್ತಿಗಳಾದ ವಿವೇಕ್ ರುಷಿಯಾ ಮತ್ತು ರಾಜೇಂದ್ರ ಕುಮಾರ್ ವಾಣಿ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.

ಐಪಿಸಿಯ ಸೆಕ್ಷನ್ 302 ರ ಅಡಿಯಲ್ಲಿ ಗಂಡನ ಅಪರಾಧ ಮತ್ತು ಆತನಿಗೆ ವಿಧಿಸಲಾದ ಜೀವಾವಧಿ ಶಿಕ್ಷೆ ಹೆಂಡತಿಗೆ ಉಂಟಾಗುವ ಮಾನಸಿಕ ಕ್ರೌರ್ಯಕ್ಕೆ ಸಮಾನವಾಗಿದ್ದು ಇದು ತನ್ನ ಪತಿಯಿಂದ ವಿಚ್ಛೇದನ ಪಡೆಯುವಂತೆ ಮಾಡುತ್ತದೆ " ಎಂದು ನ್ಯಾಯಾಲಯ ಹೇಳಿದೆ.

2011ರಲ್ಲಿ ವಿವಾಹವಾಗಿದ್ದ ದಂಪತಿಗೆ ಒಂದು ಹೆಣ್ಣು ಮಗುವಿದೆ. ಕೊಲೆ ಪ್ರಕರಣದಲ್ಲಿ ತನ್ನ ಗಂಡನಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದರಿಂದ ವಿಚ್ಛೇದನ ಕೋರಿ ಪತ್ನಿ 2020ರಲ್ಲಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ಪತಿ ತನ್ನೊಂದಿಗೆ ಕ್ರೂರವಾಗಿ ಮತ್ತು ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದಾನೆಂದೂ ಆರೋಪಿಸಲಾಗಿತ್ತು.

ಆದರೆ ಪತ್ನಿಯ ವಿಚ್ಛೇದನ ಮನವಿ ತಿರಸ್ಕರಿಸಿದ್ದ ಕೌಟುಂಬಿಕ ನ್ಯಾಯಾಲಯ ಕ್ರಿಮಿನಲ್ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗುವುದು ಕ್ರೌರ್ಯ ಎನಿಸದು. ಜೊತೆಗೆ ಪತಿ ಆಕೆಯ ಮೇಲೆ ಕ್ರೌರ್ಯ ಎಸಗಿದ್ದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದಿತ್ತು. ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.

ಮೇಲ್ಮನವಿಯ ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯ “ಶಿಕ್ಷೆಯನ್ನು ಅಮಾನತುಗೊಳಿಸುವ ಮೂಲಕ ಜಾಮೀನಿನ ಮೇಲೆ ಬಿಡುಗಡೆ ಮಾಡಲು ಅವಕಾಶವಿದ್ದರೂ, ಐಪಿಸಿಯ ಸೆಕ್ಷನ್ 307ರ ಅಡಿಯಲ್ಲಿ ವಿಚಾರಣೆ ಎದುರಿಸುತ್ತಿರುವ ಮತ್ತು ಐಪಿಸಿಯ ಸೆಕ್ಷನ್ 302 ರ ಅಡಿಯಲ್ಲಿ ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿಯೊಂದಿಗೆ ಪತ್ನಿ ಬದುಕುವುದು ತುಂಬಾ ಕಷ್ಟಕರವಾಗಿರುತ್ತದೆತನ್ನ ತಂದೆಯನ್ನೇ ಪತಿ ಕೊಂದಿರುವುದು ಖಂಡಿತವಾಗಿಯೂ ಅವಳಿಗೆ ಮಾನಸಿಕ ಕ್ರೌರ್ಯ ಉಂಟುಮಾಡುತ್ತದೆ “ ಎಂದಿದೆ.  

ಆಸ್ತಿ ವಿವಾದದ ಕಾರಣಕ್ಕೆ ಪತಿ ತನ್ನ ತಂದೆಯನ್ನೇ ಕೊಂದಿದ್ದಾನೆ ಎಂಬ ಅಂಶವನ್ನು ಗಣನೆಗೆ ತೆಗೆದುಕೊಂಡ ನ್ಯಾಯಾಲಯ, ಮೂಗಿನ ತುದಿಯಲ್ಲಿ ಕೋಪ ಇರುವಂತಹ ಅಪರಾಧಿ ವ್ಯಕ್ತಿಯೊಂದಿಗೆ ಯಾವುದೇ ಹೆಂಡತಿ ಸಂಸಾರ ನಡೆಸುವುದು ಸಾಧ್ಯವಿಲ್ಲ. ಆಕೆಯ ಆರು ವರ್ಷದ ಹೆಣ್ಣು ಮಗು ಕೂಡ ಅಂತಹ ವ್ಯಕ್ತಿಯೊಂದಿಗೆ ಬದುಕುವುದು ಆಕೆಯ ಮಾನಸಿಕ ಯೋಗಕ್ಷೇಮಕ್ಕೆ ಸೂಕ್ತವಲ್ಲ  ಎಂದು ವಿವರಿಸಿತು.

ಹೀಗಾಗಿ ಕೌಟುಂಬಿಕ ನ್ಯಾಯಾಲಯ ಪ್ರಕರಣವನ್ನು ವಜಾಗೊಳಿಸಿರುವುದು ಸರಿಯಲ್ಲ. 2017ರಲ್ಲಿ ಪತಿಯನ್ನು ಬಂಧಿಸಿ ಕಳೆದ ಆರು ವರ್ಷಗಳಿಂದ ದಂಪತಿ ಪತಿ-ಪತ್ನಿಯಾಗಿ ಒಟ್ಟಿಗೆ ವಾಸಿಸುತ್ತಿಲ್ಲವಾದ್ದರಿಂದ ಇದು ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಪರಿತ್ಯಕ್ತವಾಗಿರುವ ಪ್ರಕರಣ. ಈ ನೆಲೆಯಲ್ಲಿಯೂ ಆಕೆ ವಿಚ್ಛೇದನ ಪಡೆಯಲು ಅರ್ಹಳು ಎಂದು ಪೀಠ ನುಡಿಯಿತು.