Domestic Violence Act 
ಸುದ್ದಿಗಳು

ಪತ್ನಿಯು ಒಪ್ಪಂದದ ಮೂಲಕ ಜೀವನಾಂಶ ತ್ಯಜಿಸಿದ್ದರೂ ಡಿವಿ ಕಾಯಿದೆ ಅಡಿ ಅದನ್ನು ಪಡೆಯಲು ಅರ್ಹಳು: ಕೇರಳ ಹೈಕೋರ್ಟ್‌

ಜೀವನಾಂಶವನ್ನು ಬಿಟ್ಟುಕೊಡುವ ಅಥವಾ ತ್ಯಜಿಸುವ ಪತಿ ಮತ್ತು ಪತ್ನಿಯ ನಡುವಿನ ಯಾವುದೇ ಬಗೆಯ ಒಪ್ಪಂದವು ಕಾನೂನುಬದ್ಧವಾಗಿ ಅಮಾನ್ಯವಾದದ್ದು ಎಂದ ನ್ಯಾಯಪೀಠ.

Bar & Bench

ವೈವಾಹಿಕ ವ್ಯಾಜ್ಯ ಪ್ರಕರಣಗಳಲ್ಲಿ ಜೀವನಾಂಶ ಕೋರುವ ತನ್ನ ಹಕ್ಕನ್ನು ಪತ್ನಿಯು ಪತಿಯೊಂದಿಗಿನ ಒಪ್ಪಂದದ ಮೂಲಕ ತ್ಯಜಿಸಿದ್ದರೂ ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣೆ ಕಾಯ್ದೆ (ಡಿವಿ ಕಾಯ್ದೆ) - 2005 ರ ಅಡಿಯಲ್ಲಿ ಜೀವನಾಂಶ ಪಡೆಯುವ ಹಕ್ಕನ್ನು ಹೊಂದಿರುತ್ತಾಳೆ ಎಂದು ಇತ್ತೀಚೆಗೆ ಕೇರಳ ಹೈಕೋರ್ಟ್ ಹೇಳಿದೆ.

ಪ್ರಸಕ್ತ ಪ್ರಕರಣದಲ್ಲಿ ಪತಿ ಪತ್ನಿ ನಡುವೆ ನೋಟರಿ ಒಪ್ಪಂದ ನಡೆದಿದ್ದು ಪತ್ನಿಯು ಜೀವನಾಂಶ ನಿರಾಕರಣೆ ಮಾಡಿದ್ದರು. ಆದರೆ, ಪತ್ನಿಯ ಕಾನೂನುಬದ್ಧ ಜೀವನಾಂಶದ ಹಕ್ಕನ್ನು ನಿರಾಕರಿಸಲು ಪ್ರಯತ್ನಿಸುವ ಪತಿ ಮತ್ತು ಪತ್ನಿಯ ನಡುವಿನ ಯಾವುದೇ ಒಪ್ಪಂದವು ಮಾನ್ಯವಾಗುವುದಿಲ್ಲ ಎಂದು ನ್ಯಾಯಮೂರ್ತಿ ಎ ಬದರುದ್ದೀನ್ ಒತ್ತಿ ಹೇಳಿದರು.

ಸುಪ್ರೀಂ ಕೋರ್ಟ್ ಮತ್ತು ಕೇರಳ ಹೈಕೋರ್ಟ್‌ನ ಪೂರ್ವನಿದರ್ಶನಗಳನ್ನು ಉಲ್ಲೇಖಿಸಿ, ಡಿವಿ ಕಾಯ್ದೆಯಡಿಯಲ್ಲಿ ತನ್ನ ಹೆಂಡತಿ ಅಥವಾ ಮಕ್ಕಳಿಗೆ ಜೀವನಾಂಶವನ್ನು ಒದಗಿಸುವ ಪತಿ ಹೊಂದಿರುವ ಶಾಸನಬದ್ಧ ಕರ್ತವ್ಯವನ್ನು ಯಾವುದೇ ಒಪ್ಪಂದದಿಂದ ತಪ್ಪಿಸಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಪುನರುಚ್ಚರಿಸಿದರು.

"ಹೀಗಾಗಿ, ನ್ಯಾಯಾಲಯದಲ್ಲಿ ಸಲ್ಲಿಸಿದ ರಾಜಿಯ ಭಾಗವಾಗಿ ಅಥವಾ ಇನ್ಯಾವುದೇ ರೀತಿಯಲ್ಲಿ ಪತ್ನಿ ಮತ್ತು ಪತಿ ನಡುವೆ ಒಪ್ಪಂದವಾದಾಗ, ಭವಿಷ್ಯದಲ್ಲಿ ಪತಿಯಿಂದ ಜೀವನಾಂಶವನ್ನು ಪಡೆಯುವ ಹಕ್ಕನ್ನು ಪತ್ನಿ ತ್ಯಜಿಸುತ್ತಾಳೆ ಅಥವಾ ಮನ್ನಾ ಮಾಡುತ್ತಾಳೆ ಎನ್ನುವಂತಹ ಒಪ್ಪಂದವು ಸಾರ್ವಜನಿಕ ನೀತಿಗೆ ವಿರುದ್ಧವಾಗಿರುತ್ತದೆ ಹಾಗೂ ಅದು ಜೀವನಾಂಶವನ್ನು ಪಡೆಯುವುದನ್ನು ತಡೆಯುವುದಿಲ್ಲ. ಆದ್ದರಿಂದ ಪತ್ನಿಯಿಂದ ಜೀವನಾಂಶದ ಹಕ್ಕನ್ನು ಮನ್ನಾ ಮಾಡುವುದು ಅಥವಾ ತ್ಯಜಿಸುವಂತಹ ಒಪ್ಪಂದವು ಪತ್ನಿ ಅಥವಾ ಮಗು/ಮಕ್ಕಳಿಗೆ ಜೀವನಾಂಶದ ಕೋರಿಕೆಯ ಹಕ್ಕನ್ನು ನಿರಾಕರಿಸುವುದಿಲ್ಲ ಎಂಬ ಅಂಶದ ಬಗ್ಗೆ ಕಾನೂನು ನಿಲುವು ಸುಸ್ಪಷ್ಟವಾಗಿದೆ" ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ವಿವರಿಸಿತು.

ಮಹಿಳೆಯೊಬ್ಬರು ಡಿವಿ ಕಾಯ್ದೆಯ ಸೆಕ್ಷನ್ 20 ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಅರ್ಜಿ ಸಲ್ಲಿಸಿದ್ದರು, ಕಾಯ್ದೆಯ ಸೆಕ್ಷನ್ 23 ರ ಅಡಿಯಲ್ಲಿ ಮಧ್ಯಂತರ ಜೀವನಾಂಶ ಸೇರಿದಂತೆ ವಿವಿಧ ಪರಿಹಾರವನ್ನು ಅವರು ಕೋರಿದ್ದರು. ತನ್ನ ಮಾಜಿ ಪತಿಯಿಂದ 2018 ರಲ್ಲಿ ವಿಚ್ಛೇದನ ಪಡೆದಿದ್ದಾಗಿ ಅವರು ಹೇಳಿದ್ದರು. ತನಗೆ ಸ್ವಂತ ಆದಾಯವಿಲ್ಲ ಎಂದು ಹೇಳಿಕೊಂಡಿದ್ದ ಅವರು ಪತಿಯಿಂದ ಮಧ್ಯಂತರ ಬೆಂಬಲವನ್ನು ಕೋರಿದ್ದರು. ತನ್ನ ಮಾಜಿ ಪತಿ ತಿಂಗಳಿಗೆ ₹15 ಲಕ್ಷಕ್ಕೂ ಹೆಚ್ಚು ಸಂಪಾದಿಸುತ್ತಾರೆ ಎಂದು ಅವರು ಪ್ರತಿಪಾದಿಸಿದ್ದರು.

ಇತ್ತ ದೂರುದಾರೆಯ ಮಾಜಿ ಪತಿಯು, ವಿಚ್ಛೇದನ ಇತ್ಯರ್ಥದ ಭಾಗವಾಗಿ ಅಕ್ಟೋಬರ್ 28, 2017 ರಂದು ಮಾಡಿಕೊಂಡಿರುವ ನೋಟರಿ ಒಪ್ಪಂದದಲ್ಲಿ ತನ್ನ ಮಾಜಿ ಪತ್ನಿ ಜೀವನಾಂಶದ ಹಕ್ಕನ್ನು ಮನ್ನಾ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದರು. ತನ್ನ ಮಾಜಿ ಪತ್ನಿಯು ಯೋಗ ಕೇಂದ್ರ ನಡೆಸುತ್ತಿದ್ದು, ತಿಂಗಳಿಗೆ ₹2 ಲಕ್ಷ ಗಳಿಸುತ್ತಾರೆ ಎಂದು ವಾದಸಿದ್ದರು. ಆದರೆ ಈ ವಾದವನ್ನು ಮನ್ನಿಸದ ಮ್ಯಾಜಿಸ್ಟ್ರೇಟ್ ಮಹಿಳೆಗೆ ಮಾಸಿಕ ಮಧ್ಯಂತರ ಜೀವನಾಂಶವಾಗಿ ₹30,000 ನೀಡುವಂತೆ ನಿಗದಿಪಡಿಸಿದ್ದರು.

ಈ ಆದೇಶದ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿ ವಜಾಗೊಂಡಿದ್ದು ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿಯಲಾಗಿತ್ತು. ಎರಡೂ ಅಧೀನ ನ್ಯಾಯಾಲಯಗಳು ಆಕೆಯ ಆದಾಯದ ಬಗ್ಗೆ ಪತಿ ಎತ್ತಿದ್ದ ಪ್ರಶ್ನೆಯನ್ನು ತಿರಸ್ಕರಿಸಿದ್ದವು. ಅಲ್ಲದೆ, ನೋಟರಿ ಒಪ್ಪಂದವು ಜೀವನಾಂಶವನ್ನು ಪಡೆಯುವ ಅವಳ ಶಾಸನಬದ್ಧ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದ್ದವು.

ಈ ಅವಲೋಕನಗಳನ್ನು ಪ್ರಶ್ನಿಸಿ, ಪತಿಯು ಹೈಕೋರ್ಟ್ ಮೆಟ್ಟಿಲೇರಿದ್ದರು. ತನ್ನ ಮುಂದೆ ಸಲ್ಲಿಸಲಾದ ಅಂಶಗಳನ್ನು ಪರಿಶೀಲಿಸಿದ ನಂತರ, ನೋಟರಿ ಮುಖಾಂತರ ಮಾಡಿಕೊಂಡ ಒಪ್ಪಂದವು ಜೀವನಾಂಶಕ್ಕಾಗಿ ಯಾವುದೇ ಪರಿಹಾರವನ್ನು ಸ್ಪಷ್ಟವಾಗಿ ಒದಗಿಸಿಲ್ಲ ಎಂಬುದನ್ನು ನ್ಯಾಯಾಲಯವು ಗಮನಿಸಿತು.

ಜೀವನಾಂಶವನ್ನು ಬಿಟ್ಟುಕೊಡುವ ಅಥವಾ ತ್ಯಜಿಸುವ ಪತಿ ಮತ್ತು ಪತ್ನಿಯ ನಡುವಿಯ ಯಾವುದೇ ಬಗೆಯ ಒಪ್ಪಂದವು ಕಾನೂನುಬದ್ಧವಾಗಿ ಅಮಾನ್ಯವಾಗಿದೆ, ಏಕೆಂದರೆ ಅದು ಜೀವನಾಂಶದ ಶಾಸನಬದ್ಧ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಾಲಯ ಹೇಳಿತು. ವಿಚ್ಛೇದನದ ತೀರ್ಪಿನ ನಂತರವೂ ಜೀವನಾಂಶದ ಹಕ್ಕಿನಂತಹ ಡಿವಿ ಕಾಯ್ದೆಯಡಿಯಲ್ಲಿನ ಬಾಧ್ಯತೆಗಳು ಉಳಿದುಕೊಳ್ಳುತ್ತವೆ, ಮದುವೆಯ ವಿಸರ್ಜನೆಯನ್ನು ಲೆಕ್ಕಿಸದೆ ಸಂಗಾತಿಯ ಹಕ್ಕುಗಳು ರಕ್ಷಿಸಲ್ಪಡುತ್ತವೆ ಎಂದು ನ್ಯಾಯಾಲಯ ಒತ್ತಿ ಹೇಳಿತು.