ಮದುವೆ
ಮದುವೆ 
ಸುದ್ದಿಗಳು

ಕರ್ವಾ ಚೌತ್ ದಿನ ಪತ್ನಿ ಉಪವಾಸ ಮಾಡದಿರುವುದು ಕ್ರೌರ್ಯವಲ್ಲ: ದೆಹಲಿ ಹೈಕೋರ್ಟ್

Bar & Bench

ಕರ್ವಾ ಚೌತ್‌ನಲ್ಲಿ ಉಪವಾಸ ಮಾಡದಿರುವುದು ವ್ಯಕ್ತಿಯ ಆಯ್ಕೆಯ ವಿಚಾರವಾಗಿದ್ದು ಅದು ಕ್ರೌರ್ಯವಾಗುವುದಿಲ್ಲ ಅಥವಾ ವೈವಾಹಿಕ ಸಂಬಂಧಗಳನ್ನು ಕಡಿದುಕೊಳ್ಳಲು ಆಧಾರವಾಗದು ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ.

ವಿಭಿನ್ನ ಧಾರ್ಮಿಕ ನಂಬಿಕೆಗಳನ್ನು ಹೊಂದಿರುವುದು ಮತ್ತು ಕೆಲವು ಧಾರ್ಮಿಕ ಕರ್ತವ್ಯಗಳನ್ನು ನಿರ್ವಹಿಸದಿರುವುದು ಕೂಡ ಕ್ರೌರ್ಯವಲ್ಲ ಎಂದು ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಮತ್ತು ನೀನಾ ಬನ್ಸಾಲ್ ಕೃಷ್ಣ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.

"ಕರ್ವಾ ಚೌತ್‌ನಲ್ಲಿ ಉಪವಾಸ ಮಾಡುವುದು ಅಥವಾ ಉಪವಾಸ ಮಾಡದಿರುವುದು ವೈಯಕ್ತಿಕ ಆಯ್ಕೆಯಾಗಿರಬಹುದಾಗಿದ್ದು ನಿಷ್ಪಕ್ಷಪಾತವಾಗಿ ಪರಿಗಣಿಸಿಸುವುದಾದರೆ, ಅದನ್ನು ಕ್ರೌರ್ಯದ ಕೃತ್ಯ ಎಂದು ಕರೆಯಲಾಗದು. ವಿಭಿನ್ನ ಧಾರ್ಮಿಕ ನಂಬಿಕೆಗಳನ್ನು ಹೊಂದಿರುವುದು ಮತ್ತು ಕೆಲವು ಧಾರ್ಮಿಕ ಕರ್ತವ್ಯಗಳನ್ನು ನಿರ್ವಹಿಸದಿರುವುದು ಕ್ರೌರ್ಯವಾಗುವುದಿಲ್ಲ ಅಥವಾ ವೈವಾಹಿಕ ಸಂಬಂಧವನ್ನು ಕಡಿದುಕೊಳ್ಳಲು ಆಧಾರವಾಗುವುದಿಲ್ಲ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಆದರೂ ವಾಸ್ತವಾಂಶಗಳನ್ನು ಪರಿಗಣಿಸಿದಾಗ, ಹೆಂಡತಿಗೆ "ಪತಿ ಮತ್ತು ಅವರ ವೈವಾಹಿಕ ಬಂಧದ ಬಗ್ಗೆ ಗೌರವವಿಲ್ಲ" ಎಂಬುದು ಸ್ಪಷ್ಟವಾಗಿದೆ ಎಂದ ನ್ಯಾಯಾಲಯ ಪತಿಯ ವಿಚ್ಚೇದನ ಅರ್ಜಿಯನ್ನು ಪುರಸ್ಕರಿಸಿದ್ದ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿಯಿತು.

ಕ್ರೌರ್ಯದ ಆಧಾರದ ಮೇಲೆ ತನ್ನ ಪರಿತ್ಯಕ್ತ ಪತಿ ವಿಚ್ಛೇದನ ಪಡೆಯಲು ಅವಕಾಶ ನೀಡಿದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪತ್ನಿ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿದ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಮದುವೆಯಾದ ಆರಂಭದಿಂದಲೂ, ಹೆಂಡತಿಯ ನಡವಳಿಕೆ ಅಸಡ್ಡೆಯಿಂದ ಕೂಡಿದ್ದು ವೈವಾಹಿಕ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಅವಳಿಗೆ ಯಾವುದೇ ಆಸಕ್ತಿ ಇಲ್ಲ ಎಂದು ಪತಿ ಹೇಳಿದ್ದರು. 2009ರ ಕರ್ವಾ ಚೌತ್ ದಿನದಂದು, ಪತ್ನಿ ತನ್ನ ಮೇಲೆ ಕೋಪಗೊಂಡಳು. ತಾನು ಫೋನ್‌ ರಿಚಾರ್ಜ್‌ ಮಾಡಿಸದ ಕಾರಣ ಉಪವಾಸ ಮಾಡದಿರಲು ನಿರ್ಧರಿಸಿದಳು. ತನಗೆ ಅನಾರೋಗ್ಯ ಉಂಟಾದಾಗ ಆರೈಕೆ ಮಾಡುವ ಬದಲು ಬಳೆ ಒಡೆದುಕೊಂಡು, ಬಿಳಿ ವಸ್ತ್ರ ಧರಿಸಿ ತಾನು ವಿಧವೆಯಾಗಿರುವುದಾಗಿ ತಿಳಿಸಿದಳು ಎಂಬುದಾಗಿ ಪತಿ ಅಳಲು ತೋಡಿಕೊಂಡಿದ್ದರು.

ಎಲ್ಲಾ ಸಂಗತಿಗಳನ್ನು ಪರಿಗಣಿಸಿದ ನ್ಯಾಯಾಲಯ ಗಂಡನ ಮೇಲಿನ ಪ್ರೀತಿ ಮತ್ತು ಗೌರವವನ್ನು ಸಂಕೇತಿಸುವ ಹಿಂದೂ ಸಂಸ್ಕೃತಿಯ ಪ್ರಚಲಿತ ಆಚರಣೆಗಳನ್ನು ಹೆಂಡತಿ ಪಾಲಿಸದಿರುವುದು ತನ್ನ ಗಂಡನ ಬಗ್ಗೆ ಗೌರವ ಇಲ್ಲ ಎಂಬುದಕ್ಕೆ ಇಂಬು ನೀಡುತ್ತದೆ ಎಂದು ಅಭಿಪ್ರಾಯಪಟ್ಟು ವಿಚ್ಛೇದನದ ಪರವಾಗಿ ತೀರ್ಪು ನೀಡಿತು.

[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]

Judgement .pdf
Preview