ಪತ್ನಿ ಅಶ್ಲೀಲ ಚಿತ್ರ ವೀಕ್ಷಿಸಿದ್ದಾಳೆ ಅಥವಾ ಸ್ವ- ರತಿ, ಹಸ್ತಮೈಥುನದಲ್ಲಿ ತೊಡಗಿದ್ದಾಳೆ ಎಂಬ ಕಾರಣಕ್ಕೆ ಪತಿ ತನ್ನ ಪತ್ನಿಯಿಂದ ವಿಚ್ಛೇದನ ಪಡೆಯಲು ಸಾಧ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ಜಿ ಆರ್ ಸ್ವಾಮಿನಾಥನ್ ಮತ್ತು ಆರ್ ಪೂರ್ಣಿಮಾ ಅವರಿದ್ದ ಪೀಠ ಖಾಸಗಿಯಾಗಿ ಅಶ್ಲೀಲ ಚಿತ್ರ ನೋಡುವುದು ಅಪರಾಧವಲ್ಲ ಎಂದು ಮಾರ್ಚ್ 19ರಂದು ಅಭಿಪ್ರಾಯಪಟ್ಟಿತು.
ಕ್ರೌರ್ಯ ಎಸಗಿರುವುದರಿಂದ ಪತ್ನಿಯಿಂದ ತನಗೆ ವಿಚ್ಛೇದನ ಅಗತ್ಯವಿದೆ ಎಂದು ವ್ಯಕ್ತಿಯೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ ಈ ವಿಚಾರ ತಿಳಿಸಿದೆ. ಅಂತೆಯೇ ಆಕೆಗೆ ಲೈಂಗಿಕ ರೋಗವಿದೆ ಎಂದು ಕೆಲವು ಆಯುರ್ವೇದ ದಾಖಲೆಗಳನ್ನು ಪತಿ ಒದಗಿಸಿದ್ದನ್ನು ತಿರಸ್ಕರಿಸಿರುವ ನ್ಯಾಯಾಲಯ ರಕ್ತಪರೀಕ್ಷೆ ಇಲ್ಲದೆ ಇಂತಹ ಆರೋಪ ಸಾಬೀತಾಗದು ಎಂದಿತು.
ನ್ಯಾಯಾಲಯದ ಅವಲೋಕನದ ಪ್ರಮುಖಾಂಶಗಳು
ಅಶ್ಲೀಲ ಚಿತ್ರ ವೀಕ್ಷಣೆ ನೈತಿಕವಾಗಿ ಸಮರ್ಥನೀಯವಲ್ಲದಿದ್ದರೂ ಪತ್ನಿ ತನ್ನ ಸಂಗಾತಿಗೆ ಬಲವಂತ ಮಾಡದೆ ಖಾಸಗಿಯಾಗಿ ಅಶ್ಲೀಲ ಚಿತ್ರ ವೀಕ್ಷಿಸುತ್ತಾಳೆ ಎಂಬುದು ವೈವಾಹಿಕ ಕ್ರೌರ್ಯವಾಗದು.
ಕೇವಲ ಖಾಸಗಿಯಾಗಿ ಅಶ್ಲೀಲ ಚಿತ್ರ ವೀಕ್ಷಣೆ ಕ್ರೌರ್ಯವಲ್ಲ. ಸ್ವರತಿಯಲ್ಲಿ ಮುಳುಗುವುದು ಮದುವೆ ವಿಸರ್ಜನೆಗೆ ಕಾರಣವಾಗದು.
ಪತ್ನಿ ಹಸ್ತಮೈಥುನ ಮಾಡಿಕೊಳ್ಳುತ್ತಾಳೆ ಎಂಬ ಆರೋಪವೂ ವಿಚ್ಛೇದನಕ್ಕೆ ಕಾರಣವಾಗದು. ಅಂತಹ ಆರೋಪಕ್ಕೆ ಪ್ರತಿಕ್ರಿಯಿಸುವಂತೆ ಮಹಿಳೆಯನ್ನು ಕೇಳುವುದು ಆಕೆಯ ಲೈಂಗಿಕ ಸ್ವಾಯತ್ತತೆಯ ಘೋರ ಉಲ್ಲಂಘನೆಯಾಗುತ್ತದೆ.
ಪುರುಷರು ಹಸ್ತ ಮೈಥುನ ಮಾಡಿಕೊಳ್ಳುವುದಕ್ಕೆ ಕಳಂಕವಿಲ್ಲದೆ ಇರುವಾಗ ಮಹಿಳೆ ಮಾಡಿಕೊಳ್ಳುವ ಹಸ್ತಮೈಥುನವನ್ನು ಏಕೆ ಕಳಂಕಿತಗೊಳಿಸಬೇಕು?
ಪುರುಷರು ಹಸ್ತಮೈಥುನದಲ್ಲಿ ತೊಡಗಿದ ನಂತರ ತಕ್ಷಣ ಲೈಂಗಿಕ ಸಂಭೋಗದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಮಹಿಳೆಯರ ವಿಷಯದಲ್ಲಿ ಹಾಗಲ್ಲ. ಹೆಂಡತಿಗೆ ಹಸ್ತಮೈಥುನದ ಅಭ್ಯಾಸವಿದ್ದರೆ ಸಂಗಾತಿಯ ನಡುವಿನ ದಾಂಪತ್ಯ ಸಂಬಂಧ ಮುಕ್ಕಾಗುತ್ತದೆ ಎಂದು ಸಾಬೀತಾಗಿಲ್ಲ.
ವಿವಾಹದ ಬಳಿಕ ಅನ್ಯರೊಂದಿಗೆ ಸಂಬಂಧ ಹೊಂದಿದ್ದರೆ ಅದು ವಿಚ್ಛೇದನಕ್ಕೆ ಕಾರಣವಾಗುತ್ತದೆ. ಆದರೆ ಸ್ವರತಿಯಲ್ಲಿ ಮುಳುಗುವುದು ವಿವಾಹ ವಿಸರ್ಜನೆಗೆ ಕಾರಣವಾಗದು. ಯಾವ ದೃಷ್ಟಿಕೋನದಿಂದಲೂ ಅದು ಗಂಡನಿಗೆ ಕ್ರೌರ್ಯ ಉಂಟುಮಾಡುತ್ತದೆ ಎನ್ನಲಾಗದು.
ಮದುವೆಯ ನಂತರವೂ ಮಹಿಳೆಯು ತನ್ನ ಲೈಂಗಿಕ ಸ್ವಾಯತ್ತತೆಯ ಅಂಶ ಸೇರಿದಂತೆ ಸಂಗಾತಿಯ ಗೌಪ್ಯತೆಯ ಹಕ್ಕನ್ನು ಪಡೆದಿರುತ್ತಾಳೆ.
ಕಟ್ಟುನಿಟ್ಟಾದ ಪುರಾವೆ ಇಲ್ಲದೆ ಸಂಗಾತಿಗೆ ಲೈಂಗಿಕ ರೋಗ ಇದೆ ಎಂದು ಆರೋಪಿಸಿ ವಿಚ್ಛೇದನ ಪಡೆಯಲು ಸಾಧ್ಯವಿಲ್ಲ.
ಒಬ್ಬ ವ್ಯಕ್ತಿಯು ತನ್ನ ನಿಯಂತ್ರಣ ಮೀರಿದ ಸಂದರ್ಭಗಳ ಮೂಲಕವೂ ಲೈಂಗಿಕವಾಗಿ ಹರಡುವ ರೋಗಕ್ಕೆ ತುತ್ತಾಗಿರಬಹುದು.
ಸಂಗಾತಿಗೆ ತಾನು ತಪ್ಪಿತಸ್ಥನೇ ಎಂದು ವಿವರಿಸಲು ಅವಕಾಶ ಕೊಡದೆ ವಿಚ್ಛೇದನ ನೀಡಲಾಗದು.
ಜೊತೆಗೆ ಸಂಗಾತಿ ನಿರ್ದಿಷ್ಟ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬ ಅಂಶ ವಿಚ್ಛೇದನಕ್ಕೆ ಸಾಕಾಗದು.
[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]