ವಿಚ್ಛೇದನ, ದೆಹಲಿ ಹೈಕೋರ್ಟ್ 
ಸುದ್ದಿಗಳು

ಪತಿಯ ಆರ್ಥಿಕ ಮಿತಿಗಳ ಬಗ್ಗೆ ಪತ್ನಿ ನಿರಂತರವಾಗಿ ನಿಂದಿಸುವುದು ಕ್ರೌರ್ಯ, ವಿಚ್ಛೇದನಕ್ಕೆ ಹಾದಿ: ದೆಹಲಿ ಹೈಕೋರ್ಟ್

ಪತಿಯ ಆರ್ಥಿಕ ಮಿತಿಗಳನ್ನು ಪತ್ನಿ ನಿರಂತರವಾಗಿ ನೆನಪಿಸಬಾರದು ಎಂದು ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಮತ್ತು ನೀನಾ ಬನ್ಸಾಲ್ ಕೃಷ್ಣ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.

Bar & Bench

ಪತಿಯ ಆರ್ಥಿಕ ಸಾಮರ್ಥ್ಯದ ಬಗ್ಗೆ ಪತ್ನಿ ನಿರಂತರವಾಗಿ ನಿಂದಿಸುವುದು ಮತ್ತು ಆತನ ಆರ್ಥಿಕ ವ್ಯಾಪ್ತಿಯನ್ನು ಮೀರುವಂತಹ ವಿಚಿತ್ರ ಕನಸುಗಳನ್ನು ಈಡೇರಿಸುವಂತೆ ಒತ್ತಡ ಹೇರುವುದು ಮಾನಸಿಕ ಕ್ರೌರ್ಯವಾಗುತ್ತದೆ ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ.

ಪತಿಯ ಆರ್ಥಿಕ ಮಿತಿಗಳನ್ನು ಪತ್ನಿ ನಿರಂತರವಾಗಿ ನೆನಪಿಸಬಾರದು ಎಂದು ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಮತ್ತು ನೀನಾ ಬನ್ಸಾಲ್ ಕೃಷ್ಣ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.

"ಗಂಡನ ಆರ್ಥಿಕ ಮಿತಿಗಳನ್ನು ಹೆಂಡತಿ ನಿರಂತರವಾಗಿ ನೆನಪಿಸಬಾರದು. ಆತನ ಹಣಕಾಸು ವ್ಯಾಪ್ತಿಯನ್ನು ಸ್ಪಷ್ಟವಾಗಿ ಮೀರಿರಬಹುದಾದ ವಿಚಿತ್ರ ಕನಸುಗಳನ್ನು ನಿರಂತರ ಹೇರುವುದರಿಂದ ಆತನಲ್ಲಿ ಸತತ ಅತೃಪ್ತಿಯ ಭಾವನೆ ಉಂಟುಮಾಡಬಹುದು. ಇದು ವೈವಾಹಿಕ ಜೀವನದ ಸಂತೃಪ್ತಿ ಮತ್ತು ಶಾಂತಿಯನ್ನು ಇಲ್ಲವಾಗಿಸುವಂತಹ ಮಾನಸಿಕ ಒತ್ತಡ ಉಂಟುಮಾಡುತ್ತದೆ. ಯಾರೇ ಆಗಲಿ ಅಗತ್ಯತೆ, ಬಯಕೆ ಮತ್ತು ಕಾಮನೆಗಳ ನಡುವೆ ಎಚ್ಚರಿಕೆಯಿಂದ ಹೆಜ್ಜೆ ಇರಿಸಬೇಕು" ಎಂದು ನ್ಯಾಯಾಲಯ ಕಿವಿಮಾತು ಹೇಳಿದೆ.

ನಿರಂತರ ಜಗಳ ಮತ್ತು ಮನಸ್ತಾಪಗಳು ಮನಸ್ಸಿನಲ್ಲಿ ಒತ್ತಡ ಸೃಷ್ಟಿಸಿ ವ್ಯಕ್ತಿಗಳ ಮಾನಸಿಕ ಯೋಗಕ್ಷೇಮದ ಮೇಲೂ ಪರಿಣಾಮ ಬೀರಬಹುದು ಎಂದು ಅದು ತಿಳಿಸಿದೆ.

"ಒಟ್ಟಾರೆ ನಡೆ ಬಗ್ಗೆ ಪತಿ ವಿವರಿಸಿದ ವಿವಿಧ ಘಟನೆಗಳು ಮತ್ತು ಪತಿಯೊಂದಿಗಿನ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳುವ ಪ್ರಬುದ್ಧತೆ ಇಲ್ಲದ ಹೆಂಡತಿಯ ಹೊಂದಾಣಿಕೆಯಿಲ್ಲದ ಮನೋಭಾವ ಪತಿಯ ಮನಸ್ಸಿನ ಮೇಲೆ ಗಂಭೀರ ಆತಂಕ ಸೃಷ್ಟಿಸಲಿದ್ದು ಆತನ ಮಾನಸಿಕ ಸ್ಥಿಮಿತತೆಗೆ ಭಂಗ ತರುತ್ತದೆ ಎಂದು ತೀರ್ಪು ನೀಡಲೇಬೇಕಿದೆ. ಈ ಘಟನೆಗಳನ್ನು ಸ್ವತಂತ್ರವಾಗಿ ಪರಿಗಣಿಸಿದಾಗ ಉಪದ್ರವರಹಿತ, ನಗಣ್ಯ ಹಾಗೂ ಕ್ಷುಲ್ಲಕವೆಂದು ತೋರುವಂತಿದ್ದರೂ ಅಂತಹ ನಡೆ ಒಂದು ನಿರ್ದಿಷ್ಟ ಅವಧಿಯವರೆಗೆ ಮೇಲುಗೈ ಸಾಧಿಸಿದರೆ ಅದು ಈ ರೀತಿಯ ಮಾನಸಿಕ ಒತ್ತಡ ಸೃಷಿಸಿ ಪಕ್ಷಕಾರರು ವೈವಾಹಿಕ ಸಂಬಂಧವನ್ನು ಉಳಿಸಿಕೊಳ್ಳುವುದು ಅಸಾಧ್ಯವಾಗುತ್ತದೆ" ಎಂದು ಅದು ತಿಳಿಸಿದೆ.

ಪತಿಯ ವಿಚ್ಛೇದನಕ್ಕೆ ಅನುಮತಿ ನೀಡಿದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಕ್ರೌರ್ಯದ ಆಧಾರದ ಮೇಲೆ ಮತ್ತು ಒಂದು ವರ್ಷದ ಅವಧಿಗೆ ವೈವಾಹಿಕ ಹಕ್ಕುಗಳನ್ನು ಮರುಸ್ಥಾಪಿಸಲಾಗಿಲ್ಲ ಎಂಬ ಅಂಶವನ್ನು ಗಣನೆಗೆ ತೆಗೆದುಕೊಂಡ ನಂತರ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ನೀಡಿತ್ತು.

ಪತಿಯ ವಿರುದ್ಧ ಮಾನಸಿಕ ಕ್ರೌರ್ಯ ಎಸಗಲಾಗಿದೆ ಮತ್ತು ಆದೇಶದ ಹೊರತಾಗಿಯೂ ವೈವಾಹಿಕ ಹಕ್ಕು ಮರಸ್ಥಾಪನೆಯಾಗಿಲ್ಲ ಎಂದು ಕಂಡುಕೊಂಡ ಹೈಕೋರ್ಟ್‌ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಒಪ್ಪಿಕೊಂಡು ಮಹಿಳೆಯ ಅರ್ಜಿಯನ್ನು ತಿರಸ್ಕರಿಸಿತು.

[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

SA v VD.pdf
Preview