ಇಡೀ ದೆಹಲಿಯನ್ನು ಬೀದಿನಾಯಿಗಳಿಂದ ಮುಕ್ತಗೊಳಿಸುವಂತೆ ದೆಹಲಿ ಸರ್ಕಾರ, ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಹಾಗೂ ನವದೆಹಲಿ ಮಹಾನಗರ ಪಾಲಿಕೆಗಳಿಗೆ (ಎನ್‌ಡಿಎಂಸಿ) ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದೆ.
ದೆಹಲಿಯ ಎಲ್ಲಾ ಪ್ರದೇಶಗಳನ್ನು ಬೀದಿನಾಯಿ ಮುಕ್ತಗೊಳಿಸಬೇಕು ಈ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠ ಹೇಳಿದೆ.
ಈ ಸಂಬಂಧ ಒಂದು ಕಾರ್ಯಪಡೆ ರಚಿಸುವ ಅಗತ್ಯವಿದ್ದರೆ ಅದನ್ನು ಕೂಡಲೇ ಮಾಡಬೇಕು. ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಈ ಪ್ರಕ್ರಿಯೆಗೆ ಅಡ್ಡಿಪಡಿಸಿದರೆ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೀಠ ಎಚ್ಚರಿಕೆ ನೀಡಿದೆ.
ದೆಹಲಿ ರಾಷ್ಟ್ರ ರಾಜಧಾನಿ ಪ್ರದೇಶದ ಎಲ್ಲ ಸ್ಥಳಗಳಿಂದ ಬೀದಿ ನಾಯಿಗಳನ್ನು ತೆರವು ಮಾಡಬೇಕು. ಈ ಕಾರ್ಯಕ್ಕೆ ಅಡ್ಡಿಪಡಿಸುವ ಪ್ರಾಣಿ ದಯಾ ಹೋರಾಟಗಾರರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳಲಾಗುವುದು. ದೆಹಲಿ ಸರ್ಕಾರ, ಎಂಸಿಡಿ, ಎನ್‌ಡಿಎಂಸಿಗಳು 8 ವಾರಗಳಲ್ಲಿ ಶ್ವಾನ ಆಶ್ರಯ ಕೇಂದ್ರಗಳನ್ನು ರಚಿಸಬೇಕು. ಈ ಕೇಂದ್ರಗಳನ್ನು ಸಿಸಿಟಿವಿ ಮೂಲಕ ಮೇಲ್ವಿಚಾರಣೆ ಮಾಡಬೇಕು ಎಂದು ನ್ಯಾಯಾಲಯ ನಿರ್ದೇಶನಗಳನ್ನು ನೀಡಿತು.
ಮುಂದುವರೆದು, ಸೆರೆಹಿಡಿಯಲಾದ ಬೀದಿ ನಾಯಿಗಳ ದೈನಂದಿನ ದಾಖಲೆಗಳನ್ನು ನಿರ್ವಹಿಸಬೇಕು. ಒಂದೇ ಒಂದು ಬೀದಿ ನಾಯಿಯನ್ನೂ ಬಿಡಬಾರದು; ನಾಯಿ ಕಡಿತ ಪ್ರಕರಣಗಳನ್ನು ವರದಿ ಮಾಡಲು ವಾರದೊಳಗೆ ಸಹಾಯವಾಣಿಗೆ ವ್ಯವಸ್ಥೆ ಮಾಡಬೇಕು. ರೇಬಿಸ್ ಲಸಿಕೆ ದೊರೆಯುವ ಸ್ಥಳಗಳ ಕುರಿತು ವರದಿ ಪ್ರಕಟಿಸಬೇಕು ಎಂದು ಇದೇ ವೇಳೆ ನ್ಯಾಯಾಲಯ ತಾಕೀತು ಮಾಡಿತು.
ಬೀದಿ ನಾಯಿಗಳ ತೆರವಿಗೆ ಪ್ರಾಣಿಪ್ರಿಯ ಹೋರಾಟಗಾರರು ಅಡ್ಡಿಪಡಿಸುತ್ತಿದ್ದುದನ್ನು ಖಂಡಿಸಿದ ನ್ಯಾಯಾಲಯ ಇಷ್ಟೆಲ್ಲಾ ಪ್ರಾಣಿ ದಯಾ ಹೋರಾಟಗಾರರಿಗೆ ರೇಬಿಸ್ ರೋಗಕ್ಕೆ ಬಲಿಯಾದವರನ್ನು ಮರಳಿ ಕರೆತರಲು ಸಾಧ್ಯವಾಗುತ್ತದೆಯೇ ಎಂದು ಪ್ರಶ್ನಿಸಿದೆ.
ಸಾರ್ವಜನಿಕ ಹಿತಾಸಕ್ತಿಗಾಗಿ ಈ ಆದೇಶ ನೀಡಲಾಗುತ್ತಿದ್ದು ನಾಯಿಗಳನ್ನು ದೂರದ ಸ್ಥಳಗಳಿಗೆ ಸ್ಥಳಾಂತರಿಸಬೇಕು ಎಂದು ಅದು ಹೇಳಿದೆ. ಅಲ್ಲದೆ, ಯಾವುದೇ ರೀತಿಯ ಭಾವನೆಗಳಿಗೆ ಆಸ್ಪದವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಕೂಡಲೇ ಕ್ರಮಗಳನ್ನು ಕೈಗೊಳ್ಳುವಂತೆ ಪ್ರಾದಿಕಾರಗಳಿಗೆ ತಾಕೀತು ಮಾಡಿದೆ.
ದೇಶದಲ್ಲಿ ರೇಬಿಸ್ ಮತ್ತು ಬೀದಿ ನಾಯಿ ಕಡಿತದಿಂದ ಸಾವನ್ನಪ್ಪಿದ ಹಲವು ಘಟನೆಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೆಲ ದಿನಗಳ ಹಿಂದೆ ಸ್ವಯಂ ಪ್ರೇರಿತ ವಿಚಾರಣೆಗೆ ಮುಂದಾಗಿತ್ತು.
ಇಂದಿನ ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಬೀದಿ ನಾಯಿಗಳನ್ನು ಸ್ಥಳಾಂತರಿಸಲು ದೆಹಲಿಯಲ್ಲಿ ಒಂದು ಸ್ಥಳ ಗೊತ್ತುಪಡಿಸಲಾಗಿದ್ದರೂ, ಶ್ವಾನ ಹಕ್ಕು ಕಾರ್ಯಕರ್ತರು ತಡೆಯಾಜ್ಞೆ ಪಡೆದ ಹಿನ್ನೆಲೆಯಲ್ಲಿ ಯೋಜನೆ ಸ್ಥಗಿತಗೊಂಡಿತ್ತು ಎಂದು ಹೇಳಿದರು. ಹೀಗಾಗಿ ಪ್ರಾಣಿಹಕ್ಕು ಕಾರ್ಯಕರ್ತರನ್ನು ಸರ್ವೋಚ್ಚ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತು.
ಅಮಿಕಸ್ ಕ್ಯೂರಿ ಗೌರವ್ ಅಗರವಾಲ್ ಅವರು ಮಂಡಿಸಿದ ಸಲಹೆಗಳನ್ನು ಸಹ ನ್ಯಾಯಾಲಯ ಆಲಿಸಿತು. ಆರು ವಾರಗಳ ಬಳಿಕ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.