A1
A1
ಸುದ್ದಿಗಳು

ಉಯಿಲು 30 ವರ್ಷಕ್ಕಿಂತ ಹಳೆಯದಾದ ಮಾತ್ರಕ್ಕೆ ಅದನ್ನು ಅಸಲಿ ಎಂದು ಭಾವಿಸಲಾಗದು: ಸುಪ್ರೀಂ ಕೋರ್ಟ್

Bar & Bench

ಭಾರತೀಯ ಸಾಕ್ಷ್ಯ ಕಾಯಿದೆಯ ಸೆಕ್ಷನ್ 90ರ ಅಡಿಯಲ್ಲಿ ಉಯಿಲು 30 ವರ್ಷಕ್ಕಿಂತ ಹೆಚ್ಚು ಹಳೆಯದಾದ ಮಾತ್ರಕ್ಕೆ ಅದನ್ನು ಅಸಲಿ ಎಂದು ಭಾವಿಸಲಾಗದು ಎಂಬುದಾಗಿ ಸುಪ್ರೀಂ ಕೋರ್ಟ್ ಇತ್ತೀಚೆಗೆ ತಿಳಿಸಿದೆ [ವಕೀಲರ ಮೂಲಕ ದಿ. ಅಶುತೋಷ್‌ ಸಮಂತಾ ಮತ್ತಿತರರು ಹಾಗೂ ರಂಜನ್‌ ಬಾಲ ದಾಸಿ ಇನ್ನಿತರರ ನಡುವಣ ಪ್ರಕರಣ].

ಭಾರತೀಯ ಉತ್ತರಾಧಿಕಾರ ಕಾಯಿದೆಯ ಸೆಕ್ಷನ್ 63 (ಸಿ) ಮತ್ತು ಭಾರತೀಯ ಸಾಕ್ಷ್ಯ ಕಾಯಿದೆಯ ಸೆಕ್ಷನ್ 68ರ ಪ್ರಕಾರ ಉಯಿಲಿನ ನೈಜತೆಯನ್ನು ಸಾಬೀತುಪಡಿಸಬೇಕು ಎಂದು ನ್ಯಾಯಮೂರ್ತಿಗಳಾದ ಎಸ್ ರವೀಂದ್ರ ಭಟ್ ಮತ್ತು ಹಿಮಾ ಕೊಹ್ಲಿ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.

ಎಷ್ಟು ಹಳತು ಎಂಬುದರ ಆಧಾರದ ಮೇಲೆ ಉಯಿಲುಗಳನ್ನು (ಮರಣಶಾಸನ) ಸಾಬೀತುಪಡಿಸಲು ಸಾಧ್ಯವಿಲ್ಲ. 30 ವರ್ಷಕ್ಕಿಂತ ಹಳೆಯದಾದ ದಾಖಲೆಗಳ ಕ್ರಮಬದ್ಧತೆಯ ಬಗ್ಗೆ ಸೆಕ್ಷನ್ 90ರ ಅಡಿಯಲ್ಲಿ ಮಾಡಲಾಗುವ ಊಹೆಯು ಉಯಿಲುಗಳ ಪುರಾವೆಗೆ ಸಂಬಂಧಿಸಿದಂತೆ ಅನ್ವಯಿಸುವುದಿಲ್ಲ. ಅದನ್ನು ಉತ್ತರಾಧಿಕಾರ ಕಾಯಿದೆ- 1925ರ ಸೆಕ್ಷನ್ 63 (ಸಿ) ಮತ್ತು 1872ರ ಸಾಕ್ಷ್ಯ ಕಾಯಿದೆಯ ಸೆಕ್ಷನ್‌ 68ರ ಪ್ರಕಾರ ಸಾಬೀತುಪಡಿಸಬೇಕು ಎಂದು ನ್ಯಾಯಾಲಯ ಹೇಳಿದೆ. ವಕೀಲರ ಮೂಲಕ ದಿ. ಎಂ ಬಿ ರಮೇಶ್‌  ಮತ್ತು ವಕೀಲರ ಮೂಲಕ ದಿ. ಕೆ ಎಂ ವೀರಾಜೆ ಅರಸ್‌ ನಡುವಣ ಪ್ರಕರಣದಲ್ಲಿ ತಾನು ಈ ಹಿಂದೆ ನೀಡಿದ್ದ ತೀರ್ಪನ್ನು ಅದು ಉಲ್ಲೇಖಿಸಿದೆ.

ದೃಢೀಕರಿಸುವ (ಅಟೆಸ್ಟ್‌ ಮಾಡುವ) ಸಾಕ್ಷಿಗಳು ಮರಣವನ್ನಪ್ಪಿದ್ದರೆ ಅಥವಾ ಪತ್ತೆಯಾಗದ ಸಂದರ್ಭದಲ್ಲಿ ಸಾಕ್ಷ್ಯ ಕಾಯಿದೆಯ ಸೆಕ್ಷನ್‌ 69 ಅನ್ವಯವಾಗುವುದರಿಂದ ಪ್ರತಿಪಾದಕರು ಅಸಹಾಯಕರಾಗುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ಭಾರತೀಯ ಉತ್ತರಾಧಿಕಾರ ಕಾಯಿದೆಯ ಸೆಕ್ಷನ್ 278 ರ ಅಡಿಯಲ್ಲಿ ಸ್ವಾಧೀನ ಪತ್ರಗಳನ್ನು ನೀಡುವ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ಅನುಮತಿಸಿತ್ತು. ಈ ತೀರ್ಪನ್ನು ಕಲ್ಕತ್ತಾ ಹೈಕೋರ್ಟ್‌ ಎತ್ತಿ ಹಿಡಿದಿತ್ತು. ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ದೃಢೀಕರಿಸಿದ ಇಬ್ಬರೂ ಸಾಕ್ಷಿಗಳು ಸಾವನ್ನಪ್ಪಿದ್ದಾರೆ. ಅಲ್ಲದೆ ಉಯಿಲಿಗೆ ಸಹಿ ಹಾಕಿದಾಗ ಉಯಿಲುದಾರನ ಇಬ್ಬರು ಪುತ್ರರು ತಮ್ಮ ಉಪಸ್ಥಿತಿ ಬಗ್ಗೆ ತಿಳಿಸಿದ್ದು ಉಯಿಲು ಬರೆದು ಸಹಿ ಮಾಡಿದ ನಿವಾಸ್‌ ಭುಯಾ ಅವರ ಸಹಿಯನ್ನು ಗುರುತಿಸಿದ್ದಾರೆ. ಅಲ್ಲದೆ ನಿವಾಸ್‌ ಭುಯ್ಯಾ ಅವರ ಪುತ್ರ ಫಣಿ ಭೂಷಣ್‌ ಭುಯಾ ಅವರು ಉಯಿಲಿಗೆ ಸಹಿ ಹಾಕಿ ಇಬ್ಬರು ವ್ಯಕ್ತಿಗಳು ಆ ಸಹಿಯನ್ನು ದೃಢೀಕರಿಸಿದ್ದಾರೆ ಮುಂತಾದ ಅಂಶಗಳನ್ನು ನ್ಯಾಯಾಲಯ ಗಮನಿಸಿತು. ಹೀಗಾಗಿ ಉಯಿಲು ಸರಿಯಾಗಿ ಕಾರ್ಯಗತಗೊಂಡಿದೆ ಎಂದು ತೀರ್ಮಾನಿಸಿದ ಅದು ಮೇಲ್ಮನವಿಯನ್ನು ವಜಾಗೊಳಿಸಿತು.