<div class="paragraphs"><p>Karnataka HC and BEML Ltd</p></div>

Karnataka HC and BEML Ltd

 
ಸುದ್ದಿಗಳು

ಬಿಇಎಂಎಲ್‌ ಖಾಸಗೀಕರಣ ವಿರೋಧಿಸಿರುವ ಸಂಸ್ಥೆಯ ಸಿಬ್ಬಂದಿಗಳು ನ್ಯಾಯಾಲಯದ ಮುಂದೆ ಇರಿಸಿರುವ ಮನವಿಗಳೇನು?

Bar & Bench

ಸಾರ್ವಜನಿಕ ವಲಯದ ಉದ್ದಿಮೆಗಳಿಂದ ಬಂಡವಾಳ ಹಿಂತೆಗೆತವನ್ನು ದೊಡ್ಡ ಮಟ್ಟದಲ್ಲಿ ಕೇಂದ್ರ ಸರ್ಕಾರವು ಪ್ರಾರಂಭಿಸಿರುವ ಬೆನ್ನಿಗೇ ಲಾಭದಾಯಕ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ನಿರ್ಧಾರದ ಬಗ್ಗೆ ದೇಶಾದ್ಯಂತ ವ್ಯಾಪಕ ಚರ್ಚೆ ನಡೆದಿದೆ. ಈ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಕೇಂದ್ರ ಸ್ಥಾನ ಹೊಂದಿರುವ ದೇಶದ ಪ್ರತಿಷ್ಠಿತ ಬಿಇಎಂಎಲ್‌ ಲಿಮಿಟೆಡ್‌ ಅನ್ನು ಖಾಸಗೀಕರಣಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಕೇಂದ್ರದ ನಿಲುವನ್ನು ಪ್ರಶ್ನಿಸಿ ಬಿಎಂಎಲ್‌ ಸಿಬ್ಬಂದಿ ಮತ್ತು ಉದ್ಯೋಗಿಗಳು ಕರ್ನಾಟಕ ಹೈಕೋರ್ಟ್‌ಗೆ ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ನ್ಯಾಯಾಲಯವು ಸರ್ಕಾರ ಮತ್ತು ಬಿಇಎಂಎಲ್‌ ಸಂಸ್ಥೆಗೆ ನೋಟಿಸ್‌ ಜಾರಿ ಮಾಡಿದ್ದು, ಆಕ್ಷೇಪಣೆ ಸಲ್ಲಿಸಲು ಆದೇಶಿಸಿದೆ. ಬಿಇಎಂಎಲ್‌ ಸಿಬ್ಬಂದಿ ಮತ್ತು ಉದ್ಯೋಗಿಗಳು ತಮ್ಮ ಸಾರ್ವಜನಿಕ ಹಿತಾಸಕ್ತಿ ಮನವಿಯಲ್ಲಿ ಮೂರು ಕೋರಿಕೆ ಮತ್ತು ಎರಡು ಮಧ್ಯಂತರ ಕೋರಿಕೆಗಳನ್ನು ಉಲ್ಲೇಖಿಸಿದ್ದಾರೆ. ಪ್ರಕರಣವು ಸಾರ್ವಜನಿಕ ಕುತೂಹಲಕ್ಕೆ ಎಡೆ ಮಾಡಿರುವ ಹಿನ್ನೆಲೆಯಲ್ಲಿಯೇ ಬಿಇಎಂಎಲ್‌ ತನ್ನ ಅರ್ಜಿಯಲ್ಲಿ ನ್ಯಾಯಾಲಯದ ಮುಂದೆ ಮಾಡಿರುವ ಮನವಿಗಳು, ಕೋರಿರುವ ಪರಿಹಾರ, ಮಧ್ಯಂತರ ಪರಿಹಾರಗಳೇನು ಎನ್ನುವ ಮಾಹಿತಿ ಇಲ್ಲಿದೆ.

ಬಿಇಎಂಎಲ್‌ ಸಂಸ್ಥೆಯನ್ನು ರಕ್ಷಣಾ ಸಾರ್ವಜನಿಕ ವಲಯದ ಉದ್ದಿಮೆಯಾಗಿ ಕಾಪಾಡಿಕೊಳ್ಳುವ ದೃಷ್ಟಿಯಿಂದ ಕೇಂದ್ರ ಸರ್ಕಾರವು 2016ರ ಅಕ್ಟೋಬರ್ 27ರಂದು ಅಂಗೀಕರಿಸಿದ ತಾತ್ವಿಕ ಅನುಮೋದನೆಯ ಅನುಸಾರ ಬಂಡವಾಳ ಹಿಂತೆಗೆತಕ್ಕಾಗಿ ಪ್ರಸ್ತಾಪಿಸಿರುವ ಕಂಪೆನಿಗಳ ಪಟ್ಟಿಯಿಂದ ಬಿಇಎಂಎಲ್‌ ಹೆಸರು ಕೈಬಿಡುವ ಸಂಬಂಧ ಸೂಕ್ತ ಆದೇಶ ಹೊರಡಿಸಬೇಕು ಎನ್ನುವುದು ಅರ್ಜಿದಾರರ ಪ್ರಮುಖ ಮನವಿಯಾಗಿದೆ.

2021ರ ಜನವರಿ 4ರಂದು ಹೊರಡಿಸಲಾಗಿರುವ ಆಕ್ಷೇಪಾರ್ಹವಾದ ಪ್ರಾಥಮಿಕ ಮಾಹಿತಿ ಒಪ್ಪಿಗೆಯನ್ನು (ಇಚ್ಛೆಯ ಅಭಿವ್ಯಕ್ತಿ) ನಿಷ್ಕ್ರಿಯ ಮತ್ತು ಅನೂರ್ಜಿತಗೊಳಿಸಬೇಕು ಎಂದು ಮನವಿ ಮಾಡಲಾಗಿದೆ.

ಪ್ರಕರಣದ ವಾಸ್ತವಿಕ ಸಂಗತಿ ಮತ್ತು ಸಂದರ್ಭಗಳನ್ನು ಆಧರಿಸಿ ನ್ಯಾಯದಾನದ ದೃಷ್ಟಿಯಿಂದ ತಮ್ಮ ವಿವೇಚನೆಯನುಸಾರ ಸೂಕ್ತ ಆದೇಶ ಹೊರಡಿಸಬೇಕು ಎಂದು ಪೀಠಕ್ಕೆ ಕೋರಲಾಗಿದೆ.

2016ರ ಅಕ್ಟೋಬರ್ 27ರಂದು ತಾತ್ವಿಕ ಒಪ್ಪಿಗೆ ನೀಡಿರುವ ಪ್ರತಿ ಮತ್ತು ಇಡೀ ಬಿಡ್‌ ಪ್ರಕ್ರಿಯೆಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕು ಎಂದು ಮಧ್ಯಂತರ ಮನವಿ ಮಾಡಲಾಗಿದೆ.

ಬಿಇಎಂಎಲ್‌ ಅನ್ನು ಖಾಸಗೀಕರಣಗೊಳಿಸುವ ಸಂಬಂಧ 2021ರ ಜನವರಿ 4ರಂದು ಹೊರಡಿಸಲಾಗಿರುವ ಆಕ್ಷೇಪಾರ್ಹವಾದ ಪ್ರಾಥಮಿಕ ಮಾಹಿತಿ ಜ್ಞಾಪನಪತ್ರ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗೂ ತಾತ್ಕಾಲಿಕ ತಡೆ ನೀಡುವಂತೆ ವಕೀಲೆ ಪ್ರಿಯಾಂಕಾ ಯಾವಗಲ್‌ ಮೂಲಕ ಸಲ್ಲಿಸಲಾಗಿರುವ ಮನವಿಯಲ್ಲಿ ಮಧ್ಯಂತರ ಪರಿಹಾರವನ್ನು ಅರ್ಜಿದಾರರು ಕೋರಿದ್ದಾರೆ.