'ಎಲ್ಲಾ ಕಳ್ಳರಿಗೂ ಮೋದಿ ಉಪನಾಮವಿದೆ' ಎಂಬ ಹೇಳಿಕೆಗೆ ಸಂಬಂಧಿಸಿದಂತೆ ತನ್ನ ವಿರುದ್ಧ ಹೂಡಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ತಾನು ತಪ್ಪಿತಸ್ಥನಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.
ತನ್ನ ಹೇಳಿಕೆಗೆ ಕ್ಷಮೆ ಯಾಚಿಸುವುದಿಲ್ಲ ಎಂದಿರುವ ರಾಹುಲ್, ತಾನು ರಾಜಿ ಮಾಡಿಕೊಳ್ಳುವಂತಿದ್ದರೆ ಆ ಕೆಲಸ ಮೊದಲೇ ಮಾಡಿರುತ್ತಿದ್ದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಅರ್ಜಿದಾರ ತಾನು ಅಪರಾಧದ ತಪ್ಪಿತಸ್ಥನಲ್ಲ ಎಂದು ಸಮರ್ಥಿಸಿಕೊಂಡಿದ್ದು ಈ ಹಿಂದೆಯೂ ಹಾಗೆ ಸಮರ್ಥಿಸಿಕೊಂಡಿದ್ದಾರೆ. ಅವರು ಕ್ಷಮಾಪಣೆ ಕೇಳುವಂತಿದ್ದರೆ ಈ ಮೊದಲೇ ಕೇಳಿರುತ್ತಿದ್ದರು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಪ್ರಕರಣದಲ್ಲಿ ದೂರುದಾರ ಪೂರ್ಣೇಶ್ ಮೋದಿ ಅವರು ಸಲ್ಲಿಸಿದ್ದ ಪ್ರತಿ-ಅಫಿಡವಿಟ್‌ಗೆ ಪ್ರತಿಕ್ರಿಯೆಯಾಗಿ ಈ ಅಫಿಡವಿಟ್ ಸಲ್ಲಿಸಲಾಗಿದೆ.
ʼಎಲ್ಲಾ ಕಳ್ಳರಿಗೂ ಮೋದಿ ಉಪನಾಮ ಏಕಿದೆʼ ಎಂಬ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕ್ಷಮೆ ಯಾಚಿಸುವ ಬದಲು ದುರಹಂಕಾರ ತೋರಿದ್ದಾರೆ ಎಂದು ದೂರುದಾರ ಪೂರ್ಣೇಶ್ ಆರೋಪಿಸಿದ್ದರು.
ಕ್ರಿಮಿನಲ್ ಮೊಕದ್ದಮೆ ಮತ್ತು ಜನ ಪ್ರತಿನಿಧಿ ಕಾಯಿದೆಯ ನಿಯಮಾವಳಿ ಬಳಸಿ ತಾನು ಮಾಡದ ತಪ್ಪಿಗೆ ತನ್ನ ಮೇಲೆ ಬಲಪ್ರಯೋಗ ಮಾಡುವುದು ನ್ಯಾಯಾಂಗ ಪ್ರಕ್ರಿಯೆಯ ದುರುಪಯೋಗವಾಗಿದ್ದು ಅದನ್ನು ವಿಚಾರಣೆ ನಡೆಸಬಾರದು ಎಂದು ರಾಹುಲ್ ಪ್ರತಕ್ರಿಯಿಸಿದ್ದರು.
ಮೋದಿ ಎಂಬ ಹೆಸರಿನಲ್ಲಿ ಯಾವುದೇ ಸಮುದಾಯ ಅಥವಾ ಸಮಾಜ ಅಸ್ತಿತ್ವದಲ್ಲಿರುವ ದಾಖಲೆಗಳಿಲ್ಲ. ಹೀಗಾಗಿ ಒಟ್ಟಾರೆ ಮೋದಿ ಸಮುದಾಯವನ್ನು ದೂಷಿಸಲಾಗಿದೆ ಎಂದು ಆರೋಪ ಮಾಡಲಾಗದು. ಮೋದಿ ಎಂಬ ಉಪನಾಮವುಳ್ಳ ಜನ ವಿವಿಧ ಸಮುದಾಯ/ ಜಾತಿಗಳಿಗೆ ಸೇರಿದ್ದಾರೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಮೋದಿ ಹೇಳಿಕೆಗೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ದೋಷಿ ಎಂದು ಪರಿಗಣಿಸಿ ವಿಧಿಸಿದ್ದ ಎರಡು ವರ್ಷಗಳ ಜೈಲು ಶಿಕ್ಷೆಗೆ ತಡೆ ನೀಡಲು ಸೆಷನ್ಸ್ ನ್ಯಾಯಾಲಯ ಮತ್ತು ಗುಜರಾತ್ ಹೈಕೋರ್ಟ್ ನಿರಾಕರಿಸಿದ್ದವು. ಹೀಗಾಗಿ ಸಂಸತ್ ಸದಸ್ಯತ್ವದಿಂದ ಅವರನ್ನು ಅನರ್ಹಗೊಳಿಸಲಾಗಿತ್ತು.
ತನ್ನ ವಿರುದ್ಧದ ದೋಷಾರೋಪಕ್ಕೆ ಹಾಗೂ ಎರಡು ವರ್ಷಗಳ ಅವಧಿಯ ಶಿಕ್ಷೆಗೆ ತಡೆ ನೀಡಲು ಸುಪ್ರೀಂ ಕೋರ್ಟ್‌ಗೆ ರಾಹುಲ್ ಅವರು ಸಲ್ಲಿಸಿರುವ ಮನವಿ ಸೀಮಿತವಾಗಿದೆ.